ಶಹಾಪುರ: ಅಪಾರ ಹಣ, ಆಸ್ತಿ, ಅಂತಸ್ತು ಹೊಂದಿದ ಜನರಲ್ಲಿ ಸಮಾಜ ಸೇವೆ ಮನೋಭಾವ ಕಡಿಮೆ. ಒಂದು ವೇಳೆ ಸಮಾಜ ಸೇವೆಗೆ ಮುಂದಾಗಿದ್ದಾರೆ ಎಂದಾದರೆ, ಅದರಲ್ಲಿ ಲಾಭ, ಲೆಕ್ಕಚಾರದ ಇರಲೇಬೇಕು. ಹಾಗಂತ ಎಲ್ಲ ಶ್ರೀಮಂತರ ಲೆಕ್ಕಾಚಾರ ಒಂದೇ ಆಗಿರುವುದಿಲ್ಲ.
ಬಡವರಲ್ಲಿ ತ್ಯಾಗ ಮನೋಭಾವ ಇದ್ದರೆ ತಪ್ಪಲ್ಲ. ಅದಕ್ಕೆ ಸಾಕ್ಷಿ ಎಂದರೆ ಉತ್ತರ ಪ್ರದೇಶದಿಂದ ನಗರಕ್ಕೆ ಉದ್ಯೋಗ ಅರಸಿ ಬಂದ ನಾಲ್ವರು ಯುವಕರು ಹಲವು ವರ್ಷಗಳಿಂದ ನಗರದ ವಿವಿಧ ಪ್ರದೇಶದಲ್ಲಿ ಪಾನಿಪುರಿ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಪಟ್ಟಣದ ನಂದಿಬೆಟ್ಟದಲ್ಲಿ ವಿಶ್ವಮಾತಾ ಗೋ-ಶಾಲೆ ಸ್ಥಾಪಿತವಾಗಿದ್ದು, ಅದನ್ನು ಮುನ್ನಡೆಸುವಲ್ಲಿ ಸಂಗಮೇಶ ಶಾಸ್ತ್ರೀ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಈ ವಿಷಯ ಅರಿತು ಅದೊಂದು ದಿನ ಗೋ-ಶಾಲೆಗೆ ತೆರಳಿ ನಿತ್ಯ 50 ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದ ಯುವಕರು ಕಳೆದ ಒಂದು ವರ್ಷದಿಂದ ಪ್ರತಿನಿತ್ಯ 50 ರೂ. ತಪ್ಪದೆ ದೇಣಿಗೆ ಸಲ್ಲಿಸುತ್ತಿದ್ದಾರೆ. ನಗರದ ನಂದಿ ಬೆಟ್ಟದಲ್ಲಿ ವಿಶ್ವಮಾತಾ ಗೋಶಾಲೆ ನಡೆಸುತ್ತಿರುವ ಸಂಗಮೇಶ ಶಾಸ್ತ್ರೀ ಅವರ ಜೊತೆ ಪಾನಿಪುರಿ ವ್ಯಾಪಾರ ಮಾಡಿ ಬದುಕು ನಡೆಸುತ್ತಿರುವ ನಾಲ್ವರು ನಿತ್ಯ ತಲಾ 50 ರೂ.ರಂತೆ ಕಳೆದ ವರ್ಷದಿಂದ ಗೋ ಸಂರಕ್ಷಣೆಗೆ ದೇಣಿಗೆ ನೀಡುತ್ತಿದ್ದಾರೆ.
ನಗರದ ಮೋಚಿಗಡ್ಡ, ಚರಬಸವೇಶ್ವರ ಕಮಾನ ಮತ್ತು ವಾಲ್ಮೀಕಿ ವೃತ್ತ ಪ್ರದೇಶದಲ್ಲಿ ಇವರು ಪಾನಿಪುರಿ ಬಂಡಿಯನ್ನಿಟ್ಟು ವ್ಯಾಪಾರ ಮಾಡತ್ತಿದ್ದಾರೆ. ಈ ಯುವಕರು ಗೋ-ಸೇವೆಗೆ ಕೈಲಾದ ಸಹಾಯ ಮಾಡುವ ಮೂಲಕ ತಮ್ಮ ಅಪಾರ ಗೋ ಪ್ರೇಮ ಮೆರೆದಿದ್ದಾರೆ. ರಾಜ್ಯದ ಹಲವಡೆ ಗಡಿ ಪ್ರದೇಶ ಮತ್ತು ಭಾಷೆಗಾಗಿ ಪ್ರತಿಭಟನೆ, ತಂಟೆ ತಕರಾರು ಕೂಗು ಕೇಳಿ ಬರುತ್ತಿರುವ ಕಾಲದಲ್ಲಿ ಇಲ್ಲಿನ ಹೊರ ರಾಜ್ಯದವರ ಸಾಮರಸ್ಯದ ಬದುಕಿಗೆ ಹ್ಯಾಟ್ಸ್ ಅಪ್ ಹೇಳಲೇಬೇಕು. ಸೇವಾ-ದಾಸೋಹ ಪ್ರಬುದ್ಧತೆ ಲಕ್ಷಣ ಗೋ-ಪ್ರೇಮಿಗಳಾದ ಪಾನಿಪುರಿ ವ್ಯಾಪಾರಸ್ಥರ ನಿಜ ಹೆಸರು ಸಾಯಿರಾಮ, ಗಜೇಂದ್ರ, ಜೀತೇಂದ್ರ, ರಾಹುಲ್. ಆದರೆ, ಇವರ್ಯಾರು ನೀಡಿದ ದೇಣಿಗೆ ರಸೀದಿಯಲ್ಲಿ ತಮ್ಮ ಹೆಸರು ಬರೆಸುವುದಿಲ್ಲ. ಪಾನಿಪುರಿ ಬಂಡಿ ಇಟ್ಕೊಂಡು ಜೀವನ ಸಾಗಿಸುವ ಇವರು, ನಿಜಕ್ಕೂ ಪ್ರಬುದ್ಧರು. ದಾಸೋಹ ಮಾಡುವ ಎಷ್ಟೋ ಜನರು ಹಲವು ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯಲ್ಲಿ ದಾಸೋಹಿಗಳು ಎಂದು ಹೆಸರು ನಮೂದಿಸಿಕೊಳ್ಳುತ್ತಾರೆ. ಬ್ಯಾನರ್ ಹಾಕುತ್ತಾರೆ ಇಂತಹ ದಿನಗಳಲ್ಲಿ ಇವರು, ಹೆಸರು ಬೇಡ ಎನ್ನುವುದು ಅವರಲ್ಲಿರುವ ಆ ಪ್ರಬುದ್ಧತೆ ದಾಸೋಹ, ಸೇವಾ ಭಾವನೆಯೇ ಕಾರಣ ಎನ್ನುತ್ತಾರೆ ಗೋ-ಶಾಲೆಯ ಸಂಗಮೇಶ ಶಾಸ್ತ್ರೀಗಳು.
ದೇಣಿಗೆ ರಸೀದಿ ದೇವರ ಹೆಸರಲ್ಲಿ
ತಾವುಗಳು ದುಡಿದು ಬಂದ ಲಾಭದಲ್ಲಿಯೇ ಅಲ್ಪ ಹಣವನ್ನು ಗೋ-ಸಂರಕ್ಷಣೆಗೆ ನಿತ್ಯ ನೀಡುತ್ತಿರುವ ಪಾನಿಪುರಿ ವ್ಯಾಪಾರಿಗಳು, ದೇಣಿಗೆ ರಸೀದಿಯಲ್ಲೂ ತಮ್ಮ ಹೆಸರನ್ನೂ ನೋಂದಾಯಿಸಿಲ್ಲ. ಅವರ ಹೆಸರು ಬದಲಾಗಿ ಶ್ರೀರಾಮ, ಕೃಷ್ಣಾ, ಹನುಮಂತ, ಶಿವ, ಪಾರ್ವತಿ ಇತ್ಯಾದಿ ದೇವನಾಮ ಬರೆಸುತ್ತಾರೆ.
ಮಲ್ಲಿಕಾರ್ಜುನ ಮುದ್ನೂರ್