ಕುಂದಾಪುರ : ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ದೈವ ನರ್ತಕರು ಮತ್ತು ದರ್ಶನ ಪಾತ್ರಿಗಳೊಂದಿಗೆ ಭೂತಾರಾಧನೆಯ ಮಹತ್ವ ಸಾರಿರುವ ‘ಕಾಂತಾರ’ ಚಿತ್ರವನ್ನು ಬುಧವಾರ ವೀಕ್ಷಿಸಿ ಸಂಭ್ರಮಿಸಿದರು.
ಸಿನಿಮಾ ವೀಕ್ಷಿಸಲು ಸಚಿವರು ಕೋಟೇಶ್ವರ ಭಾರತ್ ಚಿತ್ರಮಂದಿರಕ್ಕೆ ತೆರಳಿದಾಗ ದೈವ ನರ್ತಕರು ಮತ್ತು ದರ್ಶನ ಪಾತ್ರಿಗಳು ಪ್ರೀತಿಯಿಂದ ಸ್ವಾಗತಿಸಿದರು.
‘ನಟ, ನಿರ್ದೇಶಕ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರವು ಅದ್ಭುತವಾಗಿ ಮೂಡಿಬಂದಿದೆ. ನಮ್ಮ ನಾಡಿನ ದೈವಾರಾಧನೆ, ಕಂಬಳ ಸಹಿತ ಜನಪದ ಸೊಗಡನ್ನು ಅಚ್ಚೊತ್ತಿದಂತೆ ತೆರೆಮೇಲೆ ತಂದಿರುವ ತಂಡಕ್ಕೆ ಅಭಿನಂದನೆಗಳು.ಶುಭವಾಗಲಿ’ ಎಂದು ಕೋಟ ಶ್ರೀನಿವಾಸ್ ಪೂಜಾರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ನನ್ನೂರಿನ ಯುವಕ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಚಿತ್ರವನ್ನು ನನ್ನ ಇಲಾಖೆಗೆ ಸಂಬಂಧ ಪಟ್ಟಿರುವ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ದೈವ ನರ್ತಕರೊಂದಿಗೆ ಚಿತ್ರ ವೀಕ್ಷಿಸಿದ್ದೇನೆ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
‘ಕಾಂತಾರ ನೋಡಿ ಬಂದೆ.ನೂರಕ್ಕೂ ಹೆಚ್ಚು ದೈವ ನರ್ತಕರಾದ ಪಾಣಾರ ಯಾನೆ ನಲಿಕೆ ಮತ್ತು ಪಂಬದರು ಇತರ ದೈವಗಳ ಪಾತ್ರಿಗಳು ಚಿತ್ರಮಂದಿರದಲ್ಲಿ ನನ್ನೊಡನೆ ಇದ್ದರು.ಕಾಂತಾರ ಕಲಾವಿದರೊಂದಿಗೆ ಸಿನಿಮಾ ವೀಕ್ಷಿಸಿದ್ದೊಂದು ಅಪೂರ್ವ ಅನುಭವ’ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಟ್ವೀಟ್ ಮಾಡಿದ್ದಾರೆ.
ಚಿತ್ರದಲ್ಲಿಫಾರೆಸ್ಟ್ ಗಾರ್ಡ್ ಪಾತ್ರದಲ್ಲಿ ಗಮನ ಸೆಳೆದ ನಟ ರಘು ಪಾಂಡೇಶ್ವರ ಅವರೂ ಆಗಮಿಸಿದ್ದರು. ಅವರನ್ನು ಅಭಿನಂದಿಸಲಾಯಿತು.