ದೇವನಹಳ್ಳಿ: ಮಹಿಳಾ ಸಂಘಗಳು ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತವೆ. ಸಂಘಗಳು ಮತ್ತಷ್ಟು ಶ್ರಮವಹಿಸಿ ಮಹಿಳೆಯರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿಸಬೇಕು ಎಂದು ದೊಡ್ಡಬಳ್ಳಾಪುರ ಎಪಿಎಂಸಿ ಮಾಜಿ ಅಧ್ಯಕ್ಷೆ ಅಮರಾವತಿ ಲಕ್ಷ್ಮೀ ನಾರಾಯಣ್ ಹೇಳಿದರು.
ತಾಲೂಕಿನ ನಲ್ಲೂರು ಗಂಗಾದೇವಿ ದೇವಾಲಯದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಲ್ಲೂರು ವಲಯದ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಸೀಮಿತವಾಗದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆಗಳಿಂದ ಮಹಿಳೆಯರು ಸಂಘ ಕಟ್ಟಿಕೊಂಡು ಅಭಿವೃದ್ಧಿಯಾಗುತ್ತಿರುವುದು ಹೆಮ್ಮೆಯ ವಿಷಯ. ಸಂಘವು ಕೇವಲ ಸಾಲಕ್ಕಾಗಿ ಸಂಘ ನಡೆಸಬಾರದು. ಉಳಿತಾಯವನ್ನು ಮಾಡಿಕೊಂಡು ಸಾಲ ಪಡೆದು ಗುಡಿ ಕೈಗಾರಿಕೆಗಳು ಹಾಗೂ ಇನ್ನಿತರ ಹೈನುಗಾರಿಕೆ, ಕುರಿ ಸಾಕಾಣಿಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿಯಾದರೆ ಮಹಿಳೆಯರು ಸಂಘ ಮಾಡಿಕೊಂಡು, ಹೆಚ್ಚಿನ ಅಭಿವೃದ್ಧಿಯಾಗಲು ಸಹಕಾರಿಯಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಅಕ್ಷಿತಾ ರೈ ಮಾತನಾಡಿ, ತಾಲೂಕಿನಲ್ಲಿ 7 ವರ್ಷದಿಂದ ಗ್ರಾಮಾಭಿವೃದ್ಧಿ ಯೋಜನೆ ಜಾರಿಯಾಗಿದೆ. 2700 ಸಂಘಗಳಿದ್ದು, ಈಗ ಪ್ರಗತಿ ಬಂಧು ಸಂಘ, 60 ವರ್ಷದ ಮೇಲ್ಪಟ್ಟಿರುವ ವೃದ್ಧರಿಗೆ ಬ್ಯಾಂಕಿನಲ್ಲಿ ಸೌಲಭ್ಯ ಸಿಗದೇ ಇದ್ದರೆ, ನಮ್ಮ ಯೋಜನೆಯ ಮುಖಾಂತರ ಅವರಿಗೆ ಸಂಘದ ರೂಪದಲ್ಲಿ ಸಹಾಯ ಮಾಡಲಾಗುತ್ತದೆ. ನಲ್ಲೂರು ವಲಯದ ವ್ಯಾಪ್ತಿಯಲ್ಲಿ 21 ಸಂಘಗಳು ಹೊಸದಾಗಿ ಸೇರ್ಪಡೆಯಾಗಿವೆ.
ಈ ಸಂಘಗಳಿಗೆ ಹೆಚ್ಚು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಯಿಂದ ಈ ದಿವಸ ಎಲ್ಲರೂ ಸೇರಿ ವರಮಹಾಲಕ್ಷ್ಮೀ ಪೂಜೆ ಮಾಡುವ ಮುಖಾಂತರ ಚಾಲನೆ ನೀಡಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಮಹಿಳೆಯರಿಗೆಲ್ಲದೇ ಪುರುಷರಿಗೂ ಸಂಘ ಮಾಡುವ ಯೋಜನೆಯಿದೆ ರೈತ, ಮಹಿಳೆಯರಿಗೆ ಹಲವು ಕಡೆ ಪ್ರವಾಸ ಕೈಗೊಂಡು ಪ್ರಗತಿ ಹೊಂದಿರುವ ಎಲ್ಲಾ ಮಹಿಳೆಯರು ವೀಕ್ಷಿಸಿ ಹಲವು ವಿಚಾರಗಳನ್ನು ತಿಳಿಸಲಾಗುವುದು ಎಂದರು.
ವಕೀಲೆ ವರಲಕ್ಷ್ಮೀ, ಸಂಘದ ಮೇಲ್ವಿಚಾರಕಿ ನೇತ್ರಾವತಿ, ಪ್ರತಿನಿಧಿ ಸವಿತಾ, ವೆಂಕಟೇಶ್, ಮಾಜಿ ಗ್ರಾಪಂ ಸದಸ್ಯೆ ಪ್ರಭಾವತಿ, ಮಲ್ಲೇಪುರ ಸಂಘದ ಪ್ರತಿನಿಧಿ ಲಕ್ಷ್ಮೀ ದೇವಮ್ಮ, ಸೇವಾ ಪ್ರತಿನಿಧಿ ಮಧು ಇದ್ದರು.