ಪಟ್ನಾ: ಕಾಂಗ್ರೆಸ್ ನೇತೃತ್ವದ “ಇಂಡಿಯಾ’ ಒಕ್ಕೂಟವು ಛಿದ್ರವಾಗುತ್ತಿದೆ ಎನ್ನುವಾಗಲೇ ರವಿವಾರ ಬಿಹಾರದ ಪಟ್ನಾದಲ್ಲಿ ಒಗ್ಗಟ್ಟು ಪ್ರದರ್ಶಿಸಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಮರಳಿ ಮತ್ತೆ ಎನ್‌ಡಿಎ ತೆಕ್ಕೆಗೆ ಹೋದದ್ದು ಮತ್ತು ಸಿಎಂ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಲದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಘೋಷಣೆಯ ಅನಂತರ ನಡೆಯುತ್ತಿರುವ ಮೊದಲ “ಜನ ವಿಶ್ವಾಸ್’ ರ್ಯಾಲಿಯು, ವಿಪಕ್ಷಗಳು ಮೈಕೊಡವಿ ಮತ್ತೆ ಒಂದಾಗಿರುವುದರ ಸೂಚಕವಾಗಿದೆ. ಇದರೊಂದಿಗೆ ಲೋಕಸಭೆ ಚುನಾವಣೆಯ ಕಾವು ನಿಧಾನವಾಗಿ ಏರತೊಡಗಿದೆ.
ಪಟ್ನಾದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾ ಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, “ಪ್ರಧಾನಿ ನರೇಂದ್ರ ಮೋದಿ “ಸುಳ್ಳಿನ ಸರದಾರ’, ಸುಳ್ಳು ಹೇಳಿ ಅದನ್ನು ಹಬ್ಬಿಸುವುದರಲ್ಲಿ ಅವರು ನಿಸ್ಸೀಮ’ ಎಂದರು.
“10 ವರ್ಷದಲ್ಲಿ ಅವರ ನೀತಿಗಳಿಂದ ಯಾರೊಬ್ಬರೂ ಲಾಭ ಪಡೆದಿಲ್ಲ. ಮೋದಿ 2 ಕೋಟಿ ಉದ್ಯೋಗ ಕೊಟ್ಟರೇ, ವಿದೇಶದಿಂದ ಕಪ್ಪು ಹಣ ವಾಪಸ್ ತಂದರೇ’ ಎಂದು ಪ್ರಶ್ನಿಸಿದರು.
“2022ರ ಒಳಗೆ ಎಲ್ಲರಿಗೂ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದರು. ಆದರೆ, ಇದ್ಯಾವುದೂ ಈಡೇರಿಲ್ಲ. ಹೀಗಾಗಿ ಅವರು ಸುಳ್ಳಿನ ಸರದಾರ ಎಂದರು.