Advertisement

ರಸಗೊಬ್ಬರ ಬೆಲೆ ಹೆಚ್ಚಳ ಹಿನ್ನೆಲೆ: ಕಂಪನಿಗಳ ಜೊತೆ ಕೇಂದ್ರ ಸಚಿವ ಸದಾನಂದ ಗೌಡ ಸಭೆ

09:22 PM Apr 10, 2021 | Team Udayavani |

ನವದೆಹಲಿ : ಯೂರಿಯಾ ಹೊರತಾದ ವಿವಿಧ ನಮೂನೆಯ ಪೋಷಕಾಂಶ ರಸಗೊಬ್ಬರ ಬೆಲೆಗಳಲ್ಲಿ ಏರಿಕೆಯಾಗಿರುವ ಹಿನ್ನೆಲೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಅವರು ಸೋಮವಾರ ರಸಗೊಬ್ಬರ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.

Advertisement

ಈ ಬಗ್ಗೆ ಇಂದು ಪ್ರಕಟನೆ ಹೊರಡಿಸಿರುವ ಅವರು, ಭಾರತವು ರಸಗೊಬ್ಬರ ತಯಾರಿಕೆಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ಬಹುತೇಕವಾಗಿ ಆಮದು ಮಾಡಿಕೋಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ತೀವ್ರವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಸಗೊಬ್ಬರ ಉತ್ಪಾದನಾ ವೆಚ್ಚವೂ ಅದೇ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಎಲ್ಲ ರಸಗೊಬ್ಬರ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಿಸಿವೆ. ಆದಾಗ್ಯೂ, ಹಳೆ ದಾಸ್ತಾನನ್ನು ಹಳೆ ದರದಲ್ಲಿಯೇ ಮಾರಾಟ ಮಾಡುವಂತೆ ರಸಗೊಬ್ಬರ ಕಂಪನಿಗಳು ಹಾಗೂ ಆಮದುದಾರರ ಮನ ಒಲಿಸಲು ಕೇಂದ್ರ ಸರ್ಕಾರವು ತೀವ್ರ ಪ್ರಯತ್ನ ನಡೆಸಿದೆ ಹೇಳಿದ್ದಾರೆ.

ಸಾರ್ವಜನಿಕ ವಲಯದ ರಸಗೊಬ್ಬರ ಕಂಪನಿಗಳ ಹೊರತಾಗಿ ಸಹಕಾರಿ ವಲಯದ ಇಫ್ಕೋ ಕಂಪನಿಯು ಹಳೆ ದಾಸ್ತಾನನ್ನು ಹಳೆ ದರದಲ್ಲಿಯೇ ಮಾರಾಟ ಮಾಡಲು ಒಪ್ಪಿಕೊಂಡಿದ್ದು ಈಗಾಗಲೇ ತನ್ನ ನಿರ್ಧಾರವನ್ನು ಕಾರ್ಯಗತಗೊಳಿಸಿದೆ.ದೇಶದ ವಿವಿಧ ರಾಜ್ಯಗಳ ಬೇಡಿಕೆ ಅನುಗುಣವಾಗಿ ರಸಗೊಬ್ಬರ ಸರಬರಾಜು ಆಗುವಂತೆ ಇಲಾಖೆಯು ಮೇಲುಸ್ತುವಾರಿ ವಹಿಸುತ್ತದೆಯಾದರೂ ಇದು ಅನಿಯಂತ್ರಿತ ವಲಯದಲ್ಲಿರುವುದರಿಂದ ಬೆಲೆ ನಿಗದಿ ಪಡಿಸುವಲ್ಲಿ ಸರ್ಕಾರದ ನೇರ ಪಾತ್ರವೇನೂ ಇರುವುದಿಲ್ಲ. ಆದಾಗ್ಯೂ ರಸಗೊಬ್ಬರ ಕಂಪನಿಗಳು ಗರಿಷ್ಠ ಮಾರಾಟ ಬೆಲೆಯನ್ನು ಉತ್ಪಾದನಾ ವೆಚ್ಚಕ್ಕಿಂತ ಮನಬಂದಂತೆ ಏರಿಸದಂತೆ ಸರ್ಕಾರ ನಿಗಾವಹಿಸುತ್ತದೆ. ಕಂಪನಿಗಳು ಪ್ರಮಾಣಿಕೃತ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚುವರಿಯಾಗಿ ನಿಗದಿತ ಪ್ರಮಾಣದಲ್ಲಿಯಷ್ಟೇ ಲಾಭಾಂಶ ಇಟ್ಟುಕೊಳ್ಳಬಹುದಾಗಿದೆ. ಸರಳವಾಗಿ ಹೇಳಬೇಕೆಂದರೆ ಗರಿಷ್ಠ ಮಾರಾಟ ಬೆಲೆ ಉತ್ಪಾನಾ ವೆಚ್ಚದ ಮೇಲೆ ಅವಲಂಬಿಸಿದೆ.

ರೈತರಿಗೆ ಹೊರೆಯಾಗಬಾರದು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರವು ರಸಗೊಬ್ಬರಕ್ಕೆ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತದೆ. ಇದಕ್ಕಾಗಿ ಪ್ರತಿವರ್ಷ ಸರಾಸರಿ ಏನಿಲ್ಲವೆಂದರೂ 75000 ಕೋಟಿ ರೂಪಾಯಿ ಒದಗಿಸುತ್ತದೆ. ಉದಾಹರಣೆಗೆ ಪೋಷಕಾಂಶ ಆಧಾರಿತ ರಸಗೊಬ್ಬರ ತಯಾರಿಕೆಗೆ ಅಗತ್ಯವಾದ ‘ನೈಟ್ರೋಜನ್’ಗೆ ಟನ್ ಒಂದಕ್ಕೆ 18,789 ರೂ ಸಬ್ಸಿಡಿ ಒದಗಿಸಲಾಗುತ್ತಿದೆ. ಅದೇ ರೀತಿ ‘ಫೊಸ್ಫೇಟ್’ಗೆ (ಒಂದು ಟನ್ ಗೆ) 14,888 ರೂ, ‘ಪೊಟಾಷ್’ಗೆ 10,116 ರೂ ಹಾಗೂ ‘ಸಲ್ಫರ್’ಗೆ 2,374 ರೂ ಸಬ್ಸಿಡಿ ನೀಡುತ್ತಿದ್ದೇವೆ ಎಂದು ಸದಾನಂದ ಗೌಡ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next