Advertisement

ಕೇಂದ್ರ ಸಚಿವ ಸ್ಥಾನ: ಲೋಪ ಹುಡುಕುವುದು ಸಲ್ಲ-ಅಂಗಡಿ

10:45 PM Jun 04, 2019 | Team Udayavani |

ಬೆಂಗಳೂರು: ಸಂಸತ್ತಿನಲ್ಲಿ ಒಟ್ಟು 65 ಬ್ರಾಹ್ಮಣ ಸಮುದಾಯದ ಸಂಸದರಿದ್ದಾರೆ. ಆದರೆ ಲಿಂಗಾಯತ ಸಂಸದರ ಸಂಖ್ಯೆ ಕೇವಲ 9. ಹೀಗಿರುವಾಗ ನನ್ನೊಬ್ಬನಿಗೆ ಸಚಿವ ಸ್ಥಾನ ನೀಡಿರುವುದು, ಅದರಲ್ಲೂ ರಾಜ್ಯ ಖಾತೆ ನೀಡಿರುವುದು ಸರಿಯಾಗಿಯೇ ಇದೆ. ಇದರಲ್ಲಿ ಲೋಪ ಹುಡುಕುವುದು ಸರಿಯಲ್ಲ ಎಂದು ಹೇಳುವ ಮೂಲಕ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಪರೋಕ್ಷವಾಗಿ ತಿರುಗೇಟು ನೀಡಿದರು.

Advertisement

ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಅವರು ಮಂಗಳವಾರ ಮೊದಲ ಬಾರಿಗೆ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು. ಸಾಮಾನ್ಯ ಪ್ರಯಾಣಿಕರ ಸಮಸ್ಯೆ ತಿಳಿಯುವ ಸಲುವಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸಿದ್ದೇನೆ. ಸಾಮಾನ್ಯರ ಬೋಗಿಯಲ್ಲಿ ಸ್ವತ್ಛತೆ ಇಲ್ಲದಿರುವುದು ಕಂಡುಬಂತು. ಇನ್ನು ಮುಂದೆ ಸಾಮಾನ್ಯ ಬೋಗಿಗಳಲ್ಲಿ ಕಸ, ಗಲೀಜು ಕಂಡು ಬಂದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದರು.

ಬೆಂಗಳೂರಿನಲ್ಲಿ ಸಬ್‌ ಅರ್ಬನ್‌ ರೈಲ್ವೆ ಯೋಜನೆಗೆ ಸಂಬಂಧಪಟ್ಟಂತೆ ಚರ್ಚಿಸಲು ಅಧಿಕಾರಿಗಳ ಸಭೆ ಕರೆಯಲಾಗಿದೆ. ಯೋಜನೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಮುಂದೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಈ ವೇಳೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಜಗದೀಶ್‌ ಹಿರೇಮನಿ ಸೇರಿ ಇತರೆ ಮುಖಂಡರು ಸಸಿ ನೀಡಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದ ಸುರೇಶ್‌ ಅಂಗಡಿ, ಬಳಿಕ ಜಗನ್ನಾಥ ಜೋಶಿಯವರ ಪುತ್ಥಳಿಗೆ ಗೌರವ ಸಲ್ಲಿಸಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ನೂತನ ಸಚಿವರಿಗೆ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದರು. ಸಂಸದ ಡಾ.ಉಮೇಶ್‌ ಜಾಧವ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next