Advertisement
ಕೇಂದ್ರ ಸಚಿವರನ್ನು ಬರಮಾಡಿಕೊಳ್ಳಲು ನಸುಕಿನಲ್ಲೇ ದಲಿತರ ಕೇರಿ ಸಿಂಗಾರಗೊಂಡಿತ್ತು. ಸಚಿವರು ಆಗಮಿಸುತ್ತಿದ್ದಂತೆ ಕರತಾಡನದೊಂದಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ನಂತರ ದಲಿತರ ಮನೆಗಳಿಗೆ ತೆರಳಿದ ಪಿಯೂಷ್ ಗೋಯಲ್, ಚಿತ್ರಾನ್ನ, ಚಪಾತಿ, ಬೀನ್ಸ್, ಆಲೂಗಡ್ಡೆ ಪಲ್ಯ ಸೇವಿಸಿ, ಕುಟುಂಬದ ಸದಸ್ಯರೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಇದರ ಘಟನೆಯ ಸವಿನೆನಪಿಗಾಗಿ ಸಸಿ ನೆಟ್ಟರು. ಆಗ ಕುಟುಂಬದ ಸದಸ್ಯರ ಖುಷಿಗೆ ಪಾರವೇ ಇರಲಿಲ್ಲ.ಮೊದಲು ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಹೊಂಗಸಂದ್ರದ ದಿವಂಗತ ಮದನಗಿರಿಯಪ್ಪ ಅವರ ಮನೆಗೆ ತೆರಳಿದ ಪಿಯೂಷ್ ಗೋಯಲ್, ಚಪಾತಿ, ಬೀನ್ಸ್ ಮತ್ತು ಆಲೂಗಡ್ಡೆ ಪಲ್ಯ ಸೇವಿಸಿದರು. ಅಲ್ಲಿಂದ ಅದೇ ಕೇರಿಯ ರಾಯಪ್ಪ ಅವರ ಮನೆಯಲ್ಲಿ ಕಾಫಿ ಹೀರಿದರು. ಕುಟುಂಬದ ಸದಸ್ಯರೊಂದಿಗೆ ಹರಟಿದರು. ಆಮೇಲೆ ಫೋಟೋ ತೆಗೆಸಿಕೊಂಡರು. ಈ ವೇಳೆ ಮದನಗಿರಿಯಪ್ಪ ಅವರ ಪತ್ನಿ ಮಲ್ಲಿಕಾ (ಯಲ್ಲಮ್ಮ) ಅವರಿಗೆ ಸಚಿವರು ಒಂದು ಲಕ್ಷ ರೂ. ದೇಣಿಗೆ ನೀಡಿದರು.
Related Articles
Advertisement
ಮೀಸಲಾತಿ ರದ್ದಾಗದು: ನೂರಕ್ಕೆ ನೂರರಷ್ಟು ಮೀಸಲಾತಿ ಮುಂದುವರಿಸಲಾಗುವುದು. ದಲಿತರಿಗೆ ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ದಲಿತರ ಕಾಲೊನಿಗೆ ಭೇಟಿ ನೀಡಿದ ವೇಳೆ ಬಹುಜನ ದಲಿತ ಸಂಘ ಸಮಿತಿ ಅಧ್ಯಕ್ಷ ಆರ್.ಎಂ.ಎಂ. ರಮೇಶ್, ದಲಿತರ ಮೀಸಲಾತಿ ರದ್ದುಗೊಳಿಸಬಾರದು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಆರ್ಥಿಕವಾಗಿ, ಸಾಮಾಜಿಕವಾಗಿ ದಲಿತರು ಸ್ವಾವಲಂಬಿ ಹಾಗೂ ಅಭಿವೃದ್ಧಿ ಆಗುವವರೆಗೆ ಮೀಸಲಾತಿ ರದ್ದುಗೊಳಿಸುವುದಿಲ್ಲ. ಈ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಹೇಳಿದರು. ದಲಿತರ ಕಾಲೋನಿಗೆ ಭೇಟಿ ನೀಡಿದ ನಂತರ ಯಲ್ಲಮ್ಮ ದೇವಿ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಚಿವರು ಪೂಜೆ ಸಲ್ಲಿಸಿದರು.