Advertisement

Union Minister ಎಚ್‌ಡಿಕೆಗೆ ಈಗ ದೋಷಾರೋಪ ಪಟ್ಟಿ ಸಂಕಷ್ಟ

12:58 AM Aug 21, 2024 | Team Udayavani |

ಬೆಂಗಳೂರು: ಅತ್ತ ಮುಡಾ ಹಗರಣದಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಯೋಜನೆಯ ಭೀತಿ ಎದುರಿಸುತ್ತಿದ್ದರೆ, ಇತ್ತ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವ ರಿಗೆ ಅಕ್ರಮ ಗಣಿಗುತ್ತಿಗೆ ಮಂಜೂರಾತಿ ಪ್ರಕರಣ ಕುತ್ತಿ ಗೆಗೆ ಉರುಳಾಗಲಿ ದೆಯೇ ಎಂಬ ಅನುಮಾನಗಳು ದಟ್ಟವಾಗುತ್ತಿವೆ.

Advertisement

ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಲೋಕಾ ಯುಕ್ತ ಎಸ್‌ಐಟಿ ಅಧಿಕಾರಿಗಳು ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಪ್ರವಾಸದಲ್ಲಿರುವ ರಾಜ್ಯಪಾಲರು ಬುಧವಾರ ಬೆಂಗಳೂರಿಗೆ ಮರಳಿದ ಅನಂತರ ಈ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ 2007ರಲ್ಲಿ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಬಳ್ಳಾರಿಯ ಸಂಡೂರಿನಲ್ಲಿ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್‌ ಎಂಬ ಅಸ್ತಿತ್ವದಲ್ಲೇ ಇಲ್ಲದ ಕಂಪೆನಿಗೆ ಗಣಿಗಾರಿಕೆ ನಡೆಸಲು 550 ಎಕ್ರೆ ಜಮೀನಯನ್ನು ಗುತ್ತಿಗೆಗೆ ಮಂಜೂರು ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ 2011ರಲ್ಲಿ ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ್‌ ಹೆಗ್ಡೆ ವರದಿ ಸಲ್ಲಿಸಿದ್ದರು. ಇದರ ಆಧಾರದಲ್ಲಿ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್‌ಐಟಿ) ಸುದೀರ್ಘ‌ವಾಗಿ ತನಿಖೆ ನಡೆಸಿ ಈಗ ತನಿಖೆಯನ್ನು ಪೂರ್ಣಗೊಳಿಸಿದೆ.

ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿದೆ.ಆದರೆ ರಾಜ್ಯಪಾಲರು ಮಧ್ಯಪ್ರದೇಶ ಪ್ರವಾಸದಲ್ಲಿದ್ದು, ಬುಧವಾರ ಬೆಳಗ್ಗೆ ಬೆಂಗಳೂರಿಗೆ ಮರಳಲಿದ್ದಾರೆ. ರಾಜ್ಯಪಾಲರು ಇಲ್ಲದಿರುವ ಸಂದರ್ಭದಲ್ಲಿ ಎಸ್‌ಐಟಿ ಕಚೇರಿಯಿಂದ ಮುಚ್ಚಿದ ಲಕೋಟೆಯಲ್ಲಿ ಬಂದಿರುವ ಪತ್ರವನ್ನು ರಾಜಭವನದ ಸಿಬಂದಿ ತೆರೆದಿಲ್ಲ. ಬುಧವಾರ ಗವರ್ನರ್‌ ಬಂದ ಬಳಿಕ ಅವರ ಗಮನಕ್ಕೆ ತಂದು ಅದನ್ನು ತೆಗೆದು ನೋಡಲು ನಿರ್ಧರಿಸಿದ್ದಾರೆ. ಅನಂತರ
ಅದನ್ನು ಪರಿಶೀಲಿಸಿ ರಾಜ್ಯಪಾಲರು ಯಾವ ನಿರ್ಣಯ ಕೈಗೊಳ್ಳಬಹುದು ಎಂಬ ಕುತೂಹಲ ಹೆಚ್ಚಾಗಿದೆ.

ದಿಢೀರ್‌ ದೋಷಾರೋಪ ಪಟ್ಟಿ?
ಪ್ರಕರಣದಲ್ಲಿ ಲೋಕಾಯುಕ್ತದ ಎಸ್‌ಐಟಿ ಮುಖ್ಯಸ್ಥರಾಗಿರುವ ಐಜಿಪಿ ಎಂ. ಚಂದ್ರಶೇಖರ್‌ 2023ರ ನವೆಂಬರ್‌ನಲ್ಲಿ ಎಚ್‌ಡಿಕೆ ವಿರುದ್ಧ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.

Advertisement

ಪರಿಶೀಲಿಸಿದ್ದ ರಾಜ್ಯಪಾಲರು, ಪ್ರಕರಣ ಸಂಬಂಧ ಜುಲೈ ತಿಂಗಳಿನಲ್ಲಿ ಕೆಲವು ಸ್ಪಷ್ಟನೆಗಳನ್ನು ಕೇಳಿದ್ದರು. ಇದಕ್ಕೆ ಕಳೆದ ಸೋಮವಾರವಷ್ಟೇ ಸ್ಪಷ್ಟನೆಗಳನ್ನು ನೀಡಿದ್ದ ಲೋಕಾಯುಕ್ತ ಎಸ್‌ಐಟಿ, ಒಂದು ವಾರವಾದರೂ ರಾಜಭವನದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಆ. 19ರಂದು ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿ ನೀಡುವಂತೆ ಮತ್ತೂಂದು ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿದೆ. ಇದುವರೆಗೆ ಕುಮಾರಸ್ವಾಮಿ ಅವರ ವಿಚಾರಣೆ ನಡೆಸದ ಎಸ್‌ಐಟಿ, ಕಳೆದ ಸೋಮವಾರದಿಂದ ಈ ಸೋಮವಾರದೊಳಗೆ ಚಾರ್ಜ್‌ಶೀಟ್‌ ಸಿದ್ಧಪಡಿಸಿರುವ ಬಗ್ಗೆ ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ?
-2007ರಲ್ಲಿ ಎಚ್‌ಡಿಕೆ ಸಿಎಂ ಆಗಿ ದ್ದಾಗ 550 ಎಕ್ರೆ ಜಮೀನು ಲೀಸ್‌ಗೆ ನೀಡಿದ ಆರೋಪ
-ಅರ್ಜಿ ಸಲ್ಲಿಸಿದ್ದ 29 ಕಂಪೆನಿಗಳ
ಪೈಕಿ ಎಸ್‌ಎಸ್‌ವಿಎಂ ಅರ್ಜಿ ಮಾತ್ರ ಪರಿಗಣನೆ ಆರೋಪ
-2015ರಲ್ಲಿ ಎಚ್‌ಡಿಕೆ ಬಂಧನ, ಜಾಮೀನಿನಲ್ಲಿ ಬಿಡುಗಡೆ
-ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ಕೋರಿ 2023ರಲ್ಲಿ ರಾಜ್ಯಪಾಲರಿಗೆ ಎಸ್‌ಐಟಿ ಮನವಿ
-ವಿವರಣೆ ಕೇಳಿದ್ದ ರಾಜ್ಯಪಾಲರು

ಅನುಮತಿ ಏಕೆ ಬೇಕು?
-ಹಿಂದೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮಾಜಿ ಜನ ಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಬೇಕಿರಲಿಲ್ಲ
-2018ರ ತಿದ್ದುಪಡಿ ಪ್ರಕಾರ ಜನಪ್ರತಿನಿಧಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಬೇಕು
-ಹೀಗಾಗಿ ಎಚ್‌ಡಿಕೆ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ರಾಜ್ಯ ಪಾಲರ ಅನುಮತಿ ಬೇಕು

ಎಚ್‌ಡಿಕೆ ವಿರುದ್ಧ ತನಿಖೆಗೆ 2023ರ ನವೆಂಬರ್‌ನಲ್ಲಿ ರಾಜ್ಯ ಪಾಲರ ಅನುಮತಿ ಕೋರಿದ್ದರೂ ಸಿಕ್ಕಿರಲಿಲ್ಲ. ಹೀಗಾಗಿ ಮತ್ತೂಮ್ಮೆ ಅನುಮತಿ ಕೋರಿದ್ದಾ ರೆ. ಅಬ್ರಾಹಂ ನನ್ನ ವಿರುದ್ಧ ಅಭಿಯೋಜನೆಗೆ ಅನುಮತಿ ಕೋರಿದ ತತ್‌ಕ್ಷಣ ಅನುಮತಿ ನೀಡಿದ್ದು, ಈ ತಾರತಮ್ಯವೇಕೆ?
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next