ನವದೆಹಲಿ: ದೇಶದ ಹಲವು ಭಾಗಗಳಲ್ಲಿ ನೀರಿನ ತೀವ್ರ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ 256 ಜಿಲ್ಲೆಗಳ 1598 ವಲಯಗಳನ್ನು ಕೇಂದ್ರೀಕರಿಸಿಕೊಂಡು ಜಲ ಸಂರಕ್ಷಣೆ ಕೈಗೊಳ್ಳುವ ಸಲುವಾಗಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸೋಮವಾರ ‘ಜಲ ಶಕ್ತಿ ಅಭಿಯಾನ’ಕ್ಕೆ ಚಾಲನೆ ನೀಡಿದ್ದಾರೆ.
ಈ ಅಭಿಯಾನದಲ್ಲಿ 5 ಅಂಶಗಳ ಮೇಲೆ ಗಮನ ಹರಿಸಲಾಗಿದೆ. ಅವೆಂದರೆ, ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರೆ ಜಲಮೂಲಗಳ ಪುನಶ್ಚೇತನ, ನೀರಿನ ಮರುಬಳಕೆ, ಜಲಾನಯನ ಅಭಿವೃದ್ಧಿ ಹಾಗೂ ಅರಣ್ಯೀಕರಣ.
ಹೆಚ್ಚುವರಿ ಕಾರ್ಯದರ್ಶಿಗಳು ಹಾಗೂ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಈ 256 ಜಿಲ್ಲೆಗಳಲ್ಲಿ ಜಲಸಂರಕ್ಷಣೆ ಕಾರ್ಯದ ಉಸ್ತುವಾರಿ ವಹಿಸಲಾಗಿದೆ. ಆಯಾ ಜಿಲ್ಲಾಡಳಿತ ಕೂಡ ಇಬ್ಬರು ಸದಸ್ಯರನ್ನು ಈ ಕೆಲಸಕ್ಕೆ ನೇಮಕ ಮಾಡಲಿದ್ದು, ಅವರು ಈ ತಂಡದೊಂದಿಗೆ ಕೈಜೋಡಿಸಲಿದ್ದಾರೆ. ತಮ್ಮ 2ನೇ ಅವಧಿಯ ಮೊದಲ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಅವರು ಜಲ ಸಂರಕ್ಷಣೆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ದೇಶದ ಜನತೆಗೆ ಭಾನುವಾರವಷ್ಟೇ ಕರೆ ನೀಡಿದ್ದರು.
ಪ್ರಿಯಾಂಕಾ ಕಳವಳ: ದೇಶದ ವಿವಿಧ ಭಾಗಗಳಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಿರುವ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕಳವಳ ವ್ಯಕ್ತಪಡಿಸಿದ್ದಾರೆ. ತಡವಾಗುವ ಮುನ್ನ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ಎಲ್ಲರೂ ಕೈಜೋಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.