ಮಡಿಕೇರಿ: ಮಹಾಮಳೆಯಿಂದ ಆಪತ್ತಿನಲ್ಲಿ ಸಿಲುಕಿರುವ ಕೊಡಗಿನ ನೆರವಿಗೆ ಕೇಂದ್ರ ಸರಕಾರ ಸಿದ್ಧವಿದ್ದು, ನಿರಾಶ್ರಿತರಿಗೆ ಮನೆ ನಿರ್ಮಾಣದಿಂದ ಮೊದಲ್ಗೊಂಡು ಎಲ್ಲ ರೀತಿಯ ಸೌಕರ್ಯ ಕಲ್ಪಿಸುವುದಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭರವಸೆ ನೀಡಿದ್ದಾರೆ.
ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ತಾನು ಜೀವನದಲ್ಲಿ ಹಿಂದೆಂದೂ ಕಾಣದಷ್ಟು ವಿಕೋಪ ಕೊಡಗಿನಲ್ಲಿ ಸಂಭವಿಸಿದೆ. ರಸ್ತೆಗಳಲ್ಲಿ ದೊಡ್ಡ ಬಿರುಕುಂಟಾಗಿದೆ. 20ಕ್ಕೂ ಅದಿಕ ಗ್ರಾಮಗಳು ಸಂಪೂಣ ನಾಶವಾಗಿರುವ ಶಂಕೆಯಿದೆ. ಹಲವಾರು ಗ್ರಾಮಗಳಿಗೆ ತೆರಳಲೇ ಅಸಾಧ್ಯವಾದಂಥ ಸ್ಥಿತಿಯಿದೆ. ಹೀಗಾಗಿ ಕೇಂದ್ರದಿಂದ ಬಂದಿರುವ ಸೇನಾ ಪಡೆಯ ಯೋಧರಿಗೆ ಇಂಥ ಹವಾಮಾನ ವೈಪರೀತ್ಯದಲ್ಲಿ ಕಾರ್ಯಾಚರಣೆ ನಡೆಸಲು ಸ್ವಲ್ಪ ಕಷ್ಟವಾಗಿದೆ ಎಂದರು.
1 ಸಾವಿರಕ್ಕೂ ಅಧಿಕ ಮನೆಗಳು ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಮಣ್ಣುಪಾಲಾಗಿವೆ. ಇವುಗಳನ್ನು ನಿರ್ಮಾಣ ಮಾಡಲು ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡುವೆ ಎಂದರು. ಮೊದಲು ಅಪಾಯದಲ್ಲಿರುವ ಜನರ ಜೀವ ರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ. ಅನಂತರದ ದಿನಗಳಲ್ಲಿ ನಿರಾಶ್ರಿತರಿಗೆ ಜೀವನ ಸಾಗಿಸಲು ಅಗತ್ಯ ನೆರವು ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, ಕೊಡಗಿನಲ್ಲಿ ಸಂಭವಿಸಿರುವ ಹಾನಿ ಸರಿಪಡಿಸಲು ಕನಿಷ್ಠ 1 ವರ್ಷವಾದರೂ ಅಗತ್ಯವಿದೆ. ಕೇಂದ್ರ ಸರಕಾರದ ಪ್ರಧಾನ ಮಂತ್ರಿಗಳ ಆವಾಜ್ ಯೋಜನೆಯಡಿ ನಿರಾಶ್ರಿತರಿಗೆ ಅಗತ್ಯ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ. ಮಡಿಕೇರಿ ತಾಲೂಕಿನಲ್ಲಿಯೇ ಭಾರೀ ಸಂಕಷ್ಟ ಸ್ಥಿತಿಯಿದೆ. ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಕಾವೇರಿನದಿ ಹಿನ್ನೀರಿನಿಂದಾಗಿ ಬಡಾವಣೆಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸಿದೆ. ಭೂಕುಸಿತದಿಂದಾಗಿಯೂ ರಕ್ಷಣಾ ಪಡೆಗಳಿಗೆ ಅಪಾಯದಲ್ಲಿರುವ ಗ್ರಾಮಸ್ಥರ ನೆರವಿಗೆ ಸಕಾಲದಲ್ಲಿ ತೆರಳಲು ಕಷ್ಟಸಾಧ್ಯವಾಗಿದೆ ಎಂದರು.
ಹವಾಮಾನ ವೈಪರೀತ್ಯದಿಂದಾಗಿ ಕೇಂದ್ರ ಸರಕಾರ ರವಾನಿಸಿದ್ದ 3 ಹೆಲಿಕಾಪ್ಟರ್ ಬಳಸಿ ಗ್ರಾಮಸ್ಥರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದೂ ಪ್ರತಾಪ್ ಸಿಂಹ ಹೇಳಿದರು. ಮೇಘತ್ತಾಳು ಗ್ರಾಮದಲ್ಲಿ ಭೂಕುಸಿತ ಮತ್ತೆ ಮತ್ತೆ ಆಗುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ತಾನೇ ಜತೆಯಲ್ಲಿದ್ದವರೊಂದಿಗೆ ಭೂಕುಸಿತದಿಂದ ತಪ್ಪಿಸಿಕೊಳ್ಳಲು ಓಡಿ ಬರಬೇಕಾಯಿತು ಎಂದೂ ಪ್ರತಾಪ್ ಸಿಂಹ ಅನುಭವ ಹೇಳಿಕೊಂಡರು.