ಬೆಳ್ತಂಗಡಿ: ವ್ಯಕ್ತಿಯನ್ನು ಸ್ವ-ಸಾಮರ್ಥ್ಯದಿಂದ ಸಮಾಜಕ್ಕೆ ಶಕ್ತಿಯಾಗಿ ಬೆಳೆಸಿದ ಕೀರ್ತಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಗೆ ಸಲ್ಲುತ್ತದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹೇಳಿದರು.
ಅವರು ಶುಕ್ರವಾರದಂದು ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಶ್ರೀ ವಿಸ್ತೃತ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಒಂದು ಸರಕಾರದ ಆಡಳಿತ ವ್ಯವಸ್ಥೆ ಇದ್ದಂತೆ. ವ್ಯಕ್ತಿಯನ್ನು ಜವಾಬ್ದಾರಿಯುತ ನಾಗರಿಕನನ್ನಾಗಿಸುವಲ್ಲಿ ಸರಕಾರಕ್ಕಿಂತಲೂ ಹೆಚ್ಚಿನ ಕೆಲಸ ಮಾಡುತ್ತಿದೆ. ಡಾ. ಹೆಗ್ಗಡೆ ಅವರ ಸ್ವಚ್ಛ ಶ್ರದ್ಧಾಕೇಂದ್ರ ಸ್ವಾತಂತ್ರ‍್ಯ ಆಂದೋಲನದಂತೆ ಪರಿವರ್ತನೆಯಾಗಿದೆ. ಸೈನಿಕರು ದೇಶರಕ್ಷಣೆ ಮಾಡುತ್ತಿದ್ದಾರೆ ನಾವು ಸ್ವಚ್ಛತೆ ಮೂಲಕ ಸಮಾಜ ರಕ್ಷಣೆ ಮಾಡೋಣ ಎಂದು ಕರೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ರಾಜ್ಯದ 10 ಸಾವಿರ ಶ್ರದ್ಧಾಕೇಂದ್ರಗಳಿಗೆ ಹಸಿ ಕಸ- ಒಣ ಕಸ ವಿಂಗಡಣೆಗೆ 20 ಸಾವಿರ ತ್ಯಾಜ್ಯ ಸಂಗ್ರಹಣಾ ಬುಟ್ಟಿಗಳ ವಿತರಣೆ. ಜನಮಂಗಲ ಕಾರ್ಯಕ್ರಮದಡಿ ತಾಲೂಕಿನ 1415 ಮಂದಿ ಅಂಗವಿಕಲರಿಗೆ ಉಚಿತ ಸಾಧನಾ ಸಲಕರಣೆ ವಿತರಣೆ ಮಾಡಲಾಯಿತು. ಕಾನೂರಾಯಣ ಸಿನೆಮಾ ನಿರ್ಮಾಣದಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ 25 ಲಕ್ಷ ರೂ. ದೇಣಿಗೆಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಮುಖೇನ ಹಸ್ತಾಂತರ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆ, ಹರ್ಷೇಂದ್ರ ಕುಮಾರ್, ಗ್ರಾಮಾಭಿವೃದ್ಧಿ ಟ್ರಸ್ಟಿ ಶಿರ್ತಾಡಿ ಸಂಪತ್ ಸಾಮ್ರಾಜ್ಯ, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ತಾ.ಪಂ.ಸದಸ್ಯ ಧನಲಕ್ಷ್ಮೀ ಜನಾರ್ದನ್, ಧರ್ಮಸ್ಥಳ ಗ್ರಾ.ಪಂ. ಸದಸ್ಯ ಚಂದನ್ ಪ್ರಸಾದ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.