ನವದೆಹಲಿ: ರಾಜ್ಯಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಏಕಲವ್ಯ ಆದರ್ಶ ವಸತಿ ಶಾಲೆಗಳ ಕುರಿತು ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ ಅವರು ”ಏಕಲವ್ಯ ಪದವು ಕಿರುಕುಳ ಮತ್ತು ಬಹಿಷ್ಕಾರದ ಸಂಕೇತವಾಗಿದೆ ಎಂದು ಹೇಳಿದ್ದು, ಶಾಲೆಗೆ ಬಿರ್ಸಾ, ಫುಲೆ ಅಥವಾ ಪೆರಿಯಾರ್ ಹೆಸರನ್ನು ಇಡಬೇಕು”ಎಂದು ಸಲಹೆ ನೀಡಿದರು.ಪ್ರಶ್ನೆಗೆ ಬುಡಕಟ್ಟು ವ್ಯವಹಾರಗಳ ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು ಹಾಸ್ಯಮಯ ಪ್ರತಿಕ್ರಿಯೆ ನೀಡಿ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರತಿಕ್ರಿಯಿಸಿದ ಮುಂಡಾ, ಐತಿಹಾಸಿಕ ಮತ್ತು ಧರ್ಮಗ್ರಂಥದ ಹಿನ್ನೆಲೆಯ ಪ್ರಕಾರ ಶಾಲೆಗೆ ಏಕಲವ್ಯ ಆದರ್ಶ ವಸತಿ ಶಾಲೆ ಎಂದು ಹೆಸರಿಡಲಾಗಿದೆ ಎಂದರು.ನಂತರ, “ಅಂದಹಾಗೆ, ನಾನು ಅರ್ಜುನ್, ಹಾಗಾಗಿ ಅರ್ಜುನ್ ಮತ್ತು ಏಕಲವ್ಯ ನಡುವಿನ ಸಂಭಾಷಣೆ ಈಗ ಹೊಸ ರೀತಿಯಲ್ಲಿ ಪ್ರಾರಂಭವಾಗುತ್ತಿದೆ ಎಂದು ನಾನು ಹೇಳಬಲ್ಲೆ” ಎಂದರು. ಬಿಲ್ಲುಗಾರ ಏಕಲವ್ಯ, ಗುರು ದ್ರೋಣಾಚಾರ್ಯ ಮತ್ತು ಅರ್ಜುನನ ಭಾರತೀಯ ಪೌರಾಣಿಕ ಕಥೆಯನ್ನು ಉಲ್ಲೇಖಿಸಿ ಅವರ ಹೇಳಿಕೆಯು ಸದನದ ಹಲವು ಸದಸ್ಯರಲ್ಲಿ ನಗೆ ಬೀರುವಂತೆ ಮಾಡಿತು.
ಮುಂಡಾ ಅವರು ರಾಜ್ಯಸಭೆಯಲ್ಲಿ ಹಾಸ್ಯಮಯ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಅವರು ತಮ್ಮ ಮಾತುಗಾರಿಕೆಗೆ ಹೆಸರುವಾಸಿಯಾಗಿದ್ದು, ಚಳಿಗಾಲದ ಅಧಿವೇಶನದಲ್ಲಿ ಇಂತಹ ಹಲವು ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಗೊಂಡ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮಸೂದೆಯನ್ನು ರಾಜ್ಯಸಭೆ ಬುಧವಾರ ಅಂಗೀಕರಿಸಿದೆ. ರಾಜ್ಯಸಭೆಯು ಕೆಲವು ತಿದ್ದುಪಡಿಗಳೊಂದಿಗೆ ಸಂವಿಧಾನ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು) ಆದೇಶಗಳ (ಎರಡನೇ ತಿದ್ದುಪಡಿ) ಮಸೂದೆ, 2022 ಅನ್ನು ಧ್ವನಿ ಮತದಿಂದ ಅಂಗೀಕರಿಸಿತು. ಈ ಮಸೂದೆಯನ್ನು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಮಂಗಳವಾರ ಮಂಡಿಸಿದ್ದರು.
ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸಿದ ಮುಂಡಾ, 1980 ರ ದಶಕದಿಂದಲೂ ಈ ವಿಷಯವು ಬಾಕಿ ಉಳಿದಿದೆ ಮತ್ತು ಸಮುದಾಯದ ಸ್ಥಿತಿಯನ್ನು ನಿರ್ಲಕ್ಷಿಸಿ ಪರಿಶಿಷ್ಟ ಪಂಗಡಗಳ ವರ್ಗದ ಮೂಲಕ ಅವರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಿದ್ದಕ್ಕಾಗಿ ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ದೂಷಿಸಿದರು.