ಹೊಸದಿಲ್ಲಿ: ಕೊರೊನಾ ಮುಕ್ತಾಯ ವಾಗದೇ ಇರುವುದರಿಂದ ದೇಶವಾಸಿಗಳು ಇನ್ನೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸ ಬೇಕು. ಜತೆಗೆ ಮನೆ ಮನೆಗೇ ಲಸಿಕೆ ಹಾಕಿಸುವ ಕಾರ್ಯಕ್ರಮ, “ಹರ್ ಘರ್ ದಸ್ತಕ್ 2.0′ ಜಾರಿಗೊಳಿಸಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ರಾಜ್ಯಗಳ ಆರೋಗ್ಯ ಸಚಿವರ ಜತೆಗೆ ಸಭೆ ನಡೆಸಿ ಮಾತನಾಡಿದ ಅವರು, ವಂಶವಾಹಿ ಪರೀಕ್ಷೆ ನಡೆಸುವ ಬಗ್ಗೆ ಹಾಗೂ ಸೋಂಕು ಪತ್ತೆ ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ಸಲಹೆ ಮಾಡಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಆ ಪ್ರದೇಶಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗಿದೆ. ಪರೀಕ್ಷೆ, ನಿಗಾ, ಚಿಕಿತ್ಸೆ, ಲಸಿಕೆ ಹಾಕಿಸುವುದು, ಸೋಂಕು ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳು ವುದನ್ನು ಮುಂದುವರಿಸಬೇಕು ಎಂದು ಸಲಹೆ ಮಾಡಿದ್ದಾರೆ.
ಬೂಸ್ಟರ್ ಡೋಸ್ ಬೇಕು: ಕೊರೊನಾ ಪ್ರಕ ರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಲಸಿಕೆ ತೆಗೆದುಕೊಳ್ಳುವುದು ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ| ಸೌಮ್ಯಾ ಸ್ವಾಮಿ ನಾಥನ್ ಹೇಳಿದ್ದಾರೆ. ಏಕೆಂದರೆ ಇದರಿಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಕೊರೊನಾ ಪ್ರಕರಣಗಳು ಪ್ರತಿ ನಾಲ್ಕರಿಂದ ಆರು ತಿಂಗಳಿಗೆ ಒಮ್ಮೆ ಜಗತ್ತಿನಲ್ಲಿ ಮಾರಕ ಸೋಂಕು ತನ್ನ ಪ್ರಕೋಪ ತೋರಿಸಲಿದೆ ಎಂದೂ ಹೇಳಿದ್ದಾರೆ.
ಶೇ.3 ಪಾಸಿಟಿವಿಟಿ: ರವಿವಾರದಿಂದ ಸೋಮವಾರದ ಅವಧಿಯಲ್ಲಿ 8,084 ಹೊಸ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ ಮತ್ತು 10 ಮಂದಿ ಅಸುನೀಗಿದ್ದಾರೆ. ದೇಶದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.3 ಆಗಿದೆ. ನಾಲ್ಕು ತಿಂಗಳ ಬಳಿಕ ಈ ಬೆಳವಣಿಗೆಯಾಗಿದೆ. ಚೇತರಿಕೆ ಪ್ರಮಾಣ ಶೇ. 98. 68 ಆಗಿದೆ ಎಂದು ಕೇಂದ್ರ ತಿಳಿಸಿದೆ.