Advertisement

ಗಡಿಯಲ್ಲಿ ಚೀನಗೆ ಠಕ್ಕರ್‌! ಎಲ್‌ಎಸಿಯಲ್ಲಿ ಐಟಿಬಿಪಿಗೆ 7 ಹೊಸ ಬೆಟಾಲಿಯನ್‌; 9,400 ಸಿಬ್ಬಂದಿ

09:37 PM Feb 15, 2023 | Team Udayavani |

ನವದೆಹಲಿ:ಭಾರತ-ಚೀನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಸಮೀಪ ಪದೇ ಪದೆ ಘರ್ಷಣೆಗಿಳಿಯುವ ಮತ್ತು ಸದ್ದಿಲ್ಲದೇ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿರುವ ಚೀನಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟಿದೆ. ಗಡಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸುವ ಜೊತೆಗೆ, ಗಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಕೈಹಾಕಿದೆ.

Advertisement

ಅದಕ್ಕೆ ಸಾಕ್ಷಿಯೆಂಬಂತೆ, ಎಲ್‌ಎಸಿಯಲ್ಲಿ ನಿಯೋಜಿಸಲ್ಪಟ್ಟಿರುವ ಐಟಿಬಿಪಿ(ಇಂಡೋ-ಟಿಬೆಟನ್‌ ಬಾರ್ಡರ್‌ ಫೋರ್ಸ್‌)ಗೆ 7 ಹೊಸ ಬೆಟಾಲಿಯನ್‌, ಒಂದು ಕಾರ್ಯಾಚರಣಾ ನೆಲೆ ಹಾಗೂ 9,400 ಸಿಬ್ಬಂದಿಯನ್ನು ಒದಗಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಸಮ್ಮತಿ ಸಿಕ್ಕಿದೆ. ಹೊಸದಾಗಿ ನಿಯೋಜಿಸಲಾಗುವ ಸಿಬ್ಬಂದಿಯನ್ನು 47 ಹೊಸ ಗಡಿ ಠಾಣೆಗಳನ್ನು ಮತ್ತು 12ಕ್ಕೂ ಹೆಚ್ಚು ಮುಂಚೂಣಿ ಶಿಬಿರಗಳನ್ನು ಕಾಯಲು ಬಳಸಲಾಗುತ್ತದೆ ಎಂದು ಸಭೆ ಬಳಿಕ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ ನೀಡಿದ್ದಾರೆ.

1,808 ಕೋಟಿ ರೂ. ವೆಚ್ಚ:
1962ರ ಚೀನಾ ಆಕ್ರಮಣದ ಬಳಿಕ ಸುಮಾರು 90 ಸಾವಿರ ಸಿಬ್ಬಂದಿಯಿರುವ ಐಟಿಬಿಪಿಗೆ 3,488 ಕಿ.ಮೀ. ಉದ್ದದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನು ಕಾಯುವ ಕೆಲಸ ವಹಿಸಲಾಗಿತ್ತು. ಈಗ ಈ ಕೆಲಸವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಹೊಸ ಸೇನಾನೆಲೆ, 7 ಬೆಟಾಲಿಯನ್‌ ಮತ್ತು 9,400 ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ. 2025-26ರ ವೇಳೆಗೆ ಬೆಟಾಲಿಯನ್‌ಗಳು ಮತ್ತು ವಲಯ ಪ್ರಧಾನ ಕಚೇರಿ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ. ಭೂಸ್ವಾಧೀನ, ಕಚೇರಿ ನಿರ್ಮಾಣ ಮತ್ತು ವಸತಿ ಕಟ್ಟಡಗಳ ನಿರ್ಮಾಣಕ್ಕೆ 1,808.15 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ ಎಂದೂ ಠಾಕೂರ್‌ ತಿಳಿಸಿದ್ದಾರೆ.

ಇದೇ ವೇಳೆ, 47 ಹೊಸ ಗಡಿ ಠಾಣೆಗಳ ನಿರ್ಮಾಣದಿಂದ ಈ ನೆಲೆಗಳ ಸಾಮರ್ಥ್ಯವು ಶೇ.26ರಷ್ಟು ಹೆಚ್ಚಳವಾಗಲಿದೆ. 9400 ಸಿಬ್ಬಂದಿಯ ಸೇರ್ಪಡೆಯಿಂದ ಐಟಿಬಿಪಿ ಸಿಬ್ಬಂದಿ ಸಾಮರ್ಥ್ಯ ಶೇ.10ರಷ್ಟು ಹೆಚ್ಚಳಿದೆ ಎಂದೂ ಅವರು ಹೇಳಿದ್ದಾರೆ. ಪ್ರಸ್ತುತ ಐಟಿಬಿಪಿ ಎಲ್‌ಎಸಿಯಲ್ಲಿ 176 ಗಡಿ ಠಾಣೆಗಳನ್ನು ಹೊಂದಿದೆ.

Advertisement

ಗಡಿ ಗ್ರಾಮಗಳ ಅಭಿವೃದ್ಧಿಗೆ 4,800 ಕೋಟಿ ರೂ.
ಭಾರತ-ಚೀನ ಗಡಿಯುದ್ದಕ್ಕೂ ಬರುವಂಥ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ “ವೈಬ್ರೆಂಟ್‌ ವಿಲೇಜ್‌ ಪ್ರೋಗ್ರಾಂ’ ಎಂಬ ಹೆಸರಿನ ಯೋಜನೆ ಜಾರಿಗೆ 4,800 ಕೋಟಿ ರೂ. ಅನುದಾನ ಒದಗಿಸಲೂ ಸಂಪುಟ ಒಪ್ಪಿದೆ. ಇದು ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ಯೋಜನೆಯಾಗಿದೆ. 4,800 ಕೋಟಿ ರೂ.ಗಳ ಪೈಕಿ 2,500 ರೂ.ಗಳನ್ನು ರಸ್ತೆಗಳ ನಿರ್ಮಾಣಕ್ಕಾಗಿ ವಿನಿಯೋಗಿಸಲಾಗುತ್ತದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ 19 ಜಿಲ್ಲೆಗಳು ಮತ್ತು 46 ಗಡಿ ಬ್ಲಾಕ್‌ಗಳನ್ನು ಈ ಯೋಜನೆಯನ್ವಯ ಅಭಿವೃದ್ಧಿಪಡಿಸಲಾಗುತ್ತದೆ. ಇದರಿಂದ ಹಳ್ಳಿಗರ ಜೀವನಮಟ್ಟ ಸುಧಾರಣೆಯ ಜೊತೆಗೆ ಗಡಿ ಭಾಗದಲ್ಲಿ ಭದ್ರತೆ ಸುಧಾರಿಸಲೂ ಸಾಧ್ಯವಾಗಲಿದೆ ಎಂದು ಕೇಂದ್ರ ಸಚಿವ ಠಾಕೂರ್‌ ಹೇಳಿದ್ದಾರೆ.

ಶಿನ್‌ಕುನ್‌-ಲಾ ಸುರಂಗಕ್ಕೂ ಅಸ್ತು
ಲಡಾಖ್‌ನ ಗಡಿ ಪ್ರದೇಶಗಳಿಗೆ ಎಲ್ಲ ಹವಾಮಾನ, ಎಲ್ಲ ಋತುಗಳಲ್ಲೂ ಸಂಪರ್ಕ ಸಾಧಿಸಲು ಸಾಧ್ಯವಾಗುವಂತೆ 4.1 ಕಿ.ಮೀ. ಉದ್ದದ ಶಿನ್‌ಕುನ್‌-ಲಾ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಂಪುಟ ಸಮ್ಮತಿಸಿದೆ. 1,681 ಕೋಟಿ ರೂ. ವೆಚ್ಚದ ಈ ಸುರಂಗ ನಿರ್ಮಾಣ ಕಾರ್ಯ 2025ರ ಡಿಸೆಂಬರ್‌ವೊಳಗೆ ಪೂರ್ಣಗೊಳ್ಳಲಿದೆ. ಈ ಸುರಂಗವು ವ್ಯೂಹಾತ್ಮಕವಾಗಿಯೂ ಭಾರತಕ್ಕೆ ನೆರವಾಗಲಿದ್ದು, ನಮ್ಮ ಯೋಧರು ಸುಲಭವಾಗಿ ಹಾಗೂ ಕ್ಷಿಪ್ರವಾಗಿ ಸಂಚರಿಸಲೂ ಅನುಕೂಲ ಕಲ್ಪಿಸಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next