Advertisement

Union Budget: ಇದು ಅಮೃತಕಾಲದ ಸರ್ವಸ್ಪರ್ಶಿ ಬಜೆಟ್‌: ಎಚ್‌.ಡಿ.ಕುಮಾರಸ್ವಾಮಿ

09:42 PM Jul 23, 2024 | Team Udayavani |

ಬೆಂಗಳೂರು: ಇದು ಅಮೃತಕಾಲದ ಸರ್ವಸ್ಪರ್ಶಿ ಬಜೆಟ್‌ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಪರಿಕಲ್ಪನೆಗೆ ಶಕ್ತಿ ತುಂಬುವಂತಹದ್ದಾಗಿದೆ ಎಂದು ಕೇಂದ್ರ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿಶ್ಲೇಷಿಸಿದ್ದಾರೆ.

Advertisement

ಮಹಿಳೆಯರಿಗೆ ಅತಿ ಹೆಚ್ಚು ಅನುಕೂಲ ಮಾಡಿಕೊಡುವ ನಾರಿಶಕ್ತಿ ಬಜೆಟ್‌ ಇದಾಗಿದೆ. ಒಂಬತ್ತು ಆದ್ಯತಾ ವಲಯಗಳನ್ನು ಗುರುತಿಸಲಾಗಿದೆ. ಆ ಪೈಕಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕೆ 1.48 ಲಕ್ಷ ಕೋಟಿ ಅನುದಾನ ನೀಡಿ ನಾಲ್ಕು ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಹೊಂದುವ ಮೂಲಕ ಮಾನವ ಸಂಪನ್ಮೂಲ ಸದ್ಬಳಕೆಗೆ ಆದ್ಯತೆ ಕೊಡಲಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಣ್ಣ, ಮಧ್ಯಮ ಗಾತ್ರದ ಕೈಗಾರಿಗಳಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಉಪಕ್ರಮ ಈ ಬಜೆಟ್‌ನಲ್ಲಿದೆ ಎಂದು ಬಣ್ಣಿಸಿದ್ದಾರೆ.

ಇದು ದೂರದೃಷ್ಟಿಯುಳ್ಳ ದೂರಗಾಮಿ ಬಜೆಟ್‌. ಕೃಷಿ, ಕೈಗಾರಿಕೆ, ಮೂಲಸೌಕರ್ಯ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಉತ್ಪಾದನೆಗೂ ಗಮನ ಕೊಡಲಾಗಿದೆ. ಬೆಂಗಳೂರು-ಚೆನ್ನೈ , ಹೈದರಾಬಾದ್‌-ಬೆಂಗಳೂರು ಸೇರಿ ಒಟ್ಟು 12 ಕೈಗಾರಿಕಾ ಕಾರಿಡಾರ್‌ಗಳನ್ನು ಘೋಷಣೆ ಮಾಡುವುದು ಉದ್ಯೋಗ, ಆರ್ಥಿಕ ವೃದ್ಧಿಗೆ ಬೃಹತ್‌ ಕೊಡುಗೆ ನೀಡಲಿದೆ. ಹೆಚ್ಚುತ್ತಿರುವ ಆಹಾರ ಬೇಡಿಕೆಯ ಪೂರೈಕೆ ಹಾಗೂ ಕೃಷಿಗೆ ಮತ್ತಷ್ಟು ಚೈತನ್ಯ ತುಂಬಲು ಕೃಷಿ ಸಂಶೋಧನೆ ಅಭಿವೃದ್ಧಿಗೆ ಬಜೆಟ್‌ ಆದ್ಯತೆ ಕೊಟ್ಟಿದೆ. ಕೃಷಿ ಬೆಳೆಯ ಡಿಜಿಟಲ್‌ ಸಮೀಕ್ಷೆ ಮಾಡುವ ಯೋಜನೆಯನ್ನು ದೇಶದ 400 ಜಿಲ್ಲೆಗಳಿಗೆ ವಿಸ್ತರಿಸುವುದು ಸ್ವಾಗತಾರ್ಹ. ಮೇಲಾಗಿ ಸಹಜ ಕೃಷಿಗೆ ವಿತ್ತ ಸಚಿವರು ಪ್ರಾಮುಖ್ಯತೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಂಶೋಧನೆ, ಆವಿಷ್ಕಾರಕ್ಕೆ ಬಜೆಟ್‌ ಅತಿಹೆಚ್ಚು ಒತ್ತು ಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರಸ್ಪರ ಸಹಯೋಗದಿಂದ ಕೈಗಾರಿಕಾಭಿವೃದ್ಧಿಗೆ ಆದ್ಯತೆ ನೀಡುವುದು ಅಭಿವೃದ್ಧಿಗೆ ದೂರಗಾಮಿ ಕೊಡುಗೆ ನೀಡುವ ಉಪಕ್ರಮವಾಗಿದೆ. ರಾಜ್ಯಗಳಿಗೆ 50 ವರ್ಷಗಳ ಬಡ್ಡಿರಹಿತ ಸಾಲ ನೀಡುವ ಘೋಷಣೆ ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next