Advertisement

GST Revise: ಆರೋಗ್ಯ ವಿಮೆ ಪ್ರಯೋಜನ ಜನಸಾಮಾನ್ಯರಿಗೂ ಕೈಗೆಟುಕಲಿ

04:48 AM Sep 07, 2024 | Team Udayavani |

ಆರೋಗ್ಯ ವಿಮೆ ಮೇಲೆ ಶೇ. 18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗುತ್ತಿದ್ದು, ಸೋಮವಾರ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್‌ನ ಸಭೆಯಲ್ಲಿ ಈ ಬಗ್ಗೆ ಮರುಪರಿಶೀಲಿಸುವಂತೆ ರಾಜ್ಯದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಈ ಮೊದಲು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕೂಡ ಜಿಎಸ್‌ಟಿ ರದ್ದುಗೊಳಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿದ್ದರು.

Advertisement

ಆರೋಗ್ಯ ಸುರಕ್ಷೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಆರೋಗ್ಯ ವಿಮಾ ಯೋಜನೆಗಳು ಅತ್ಯಂತ ಪರಿಣಾಮಕಾರಿಯಾಗಿದ್ದು, ವಿಮಾ ಪಾಲಿಸಿಗಳಿಗೂ ಜಿಎಸ್‌ಟಿ ವಿಧಿಸುವುದರಿಂದ ಜನಸಾಮಾನ್ಯರು ಆರೋಗ್ಯ ವಿಮಾ ಯೋಜನೆಯ ಪ್ರಯೋಜನ ಪಡೆಯಲು ಹಿಂದೇಟು ಹಾಕುತ್ತಿರುವುದರಿಂದ ರಾಜ್ಯದ ಆರೋಗ್ಯ ಸಚಿವರ ಈ ಮನವಿಯನ್ನು ಕೇಂದ್ರ ಸರಕಾರ ಮತ್ತು ಜಿಎಸ್‌ಟಿ ಕೌನ್ಸಿಲ್‌ ಆದ್ಯತೆಯ ಮೇಲೆ ಪರಿಗಣಿಸಬೇಕು.

ಕೇಂದ್ರ ಸರಕಾರ ಆರೋಗ್ಯ ವಿಮೆಯನ್ನು ಸಾರ್ವತ್ರಿಕಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದು, ದೇಶದ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ದೇಶವಾಸಿಗಳೆಲ್ಲರೂ ಆರೋಗ್ಯ ವಿಮೆ ಹೊಂದುವಂತಾಗಬೇಕೆಂಬ ಸಂಕಲ್ಪವನ್ನು ತೊಟ್ಟಿದೆ. ಸರಕಾರದ ಈ ಉದ್ದೇಶಿತ ಗುರಿ ಸಾಧನೆಗೆ ಆರೋಗ್ಯ ವಿಮೆ ಮೇಲಿನ ಶೇ. 18ರಷ್ಟು ಜಿಎಸ್‌ಟಿ ಬಲುದೊಡ್ಡ ಅಡಚಣೆಯಾಗಲಿದೆ ಎಂಬ ರಾಜ್ಯ ಆರೋಗ್ಯ ಸಚಿವರ ಆತಂಕ ಸಹಜವಾದುದೆ.

ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ವಿಮೆಯನ್ನು ಮಾಡಿಸಿ ಕೊಳ್ಳಲು ಮುಂದಾದರೂ ವಿಮಾ ಪಾಲಿಸಿಗಳ ಮೇಲೆಯೂ ಸರಕಾರ ತೆರಿಗೆ ವಿಧಿಸುತ್ತಿರುವುದರಿಂದ ಅದು ಜನತೆಯ ಅದರಲ್ಲೂ ಮುಖ್ಯವಾಗಿ ಮಧ್ಯಮ ವರ್ಗ ಮತ್ತು ಜನಸಾಮಾನ್ಯರ ಪಾಲಿಗೆ ಬಲುದೊಡ್ಡ ಹೊರೆಯಾಗಿ ಪರಿಣಮಿಸಿದೆ.

ಕೇಂದ್ರ ಸರಕಾರ ಒಂದೆಡೆಯಿಂದ ಆರೋಗ್ಯ ವಿಮೆಯ ಸಾರ್ವತ್ರೀಕರಣದ ಪ್ರಯತ್ನ ನಡೆಸುತ್ತಿದ್ದರೆ ಮತ್ತೂಂದೆಡೆಯಿಂದ ಆರೋಗ್ಯ ವಿಮೆಯ ಮೇಲೂ ಶೇ. 18ರಷ್ಟು ಜಿಎಸ್‌ಟಿ ತೆರಿಗೆ ವಿಧಿಸುವ ಮೂಲಕ ದ್ವಂದ್ವ ನಿಲುವನ್ನು ಅನುಸರಿಸುತ್ತಿದೆ. ಜಿಎಸ್‌ಟಿಯ ಹೆಚ್ಚಿನ ದರದಿಂದಾಗಿ ವಿಮಾ ಪ್ರೀಮಿಯಂಗಳ ವೆಚ್ಚದ ಮೇಲೆ ನೇರ ಪರಿಣಾಮ ಬೀರುತ್ತಿದೆ.

Advertisement

ದುಬಾರಿ ಪ್ರೀಮಿಯಂನಿಂದಾಗಿ ಜನಸಾಮಾನ್ಯರ ಪಾಲಿಗೆ ಈ ಆರೋಗ್ಯ ವಿಮೆ ಕೈಗೆಟುಕಲಾರದ ತುತ್ತಾಗಿದೆ. ಇದರಿಂದಾಗಿ ಕುಟುಂಬದ ಯಾವುದೇ ವ್ಯಕ್ತಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸಬೇಕಾಗಿ ಬಂದಾಗ ಇಡೀ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಬಗ್ಗೆ ಕೇಂದ್ರ ಸರಕಾರ ಮತ್ತು ಜಿಎಸ್‌ಟಿ ಕೌನ್ಸಿಲ್‌ ತೆರಿಗೆ ದರದ ಬಗ್ಗೆ ಮರು ಪರಾಮರ್ಶೆ
ನಡೆಸುವ ತುರ್ತು ಅಗತ್ಯವಿದೆ.

ಜಿಎಸ್‌ಟಿ ರದ್ದಾದಲ್ಲಿ ತಮಗೆ ಆದಾಯ ಖೋತಾ ಆಗುತ್ತದೆ ಎಂದು ಕೆಲವು ರಾಜ್ಯಗಳು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಆರೋಗ್ಯ ವಿಮೆಗೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲು ಕಷ್ಟಸಾಧ್ಯವಾದರೆ ಕನಿಷ್ಠ ದರದ ಜಿಎಸ್‌ಟಿ ವ್ಯಾಪ್ತಿಗೆ ಆರೋಗ್ಯ ವಿಮೆಯನ್ನು ಸೇರ್ಪಡೆಗೊಳಿಸಬೇಕು. ಇದು ಅಸಾಧ್ಯವಾದಲ್ಲಿ ನಿರ್ದಿಷ್ಟ ಆದಾಯ ಮಿತಿ ಮತ್ತು ಆರೋಗ್ಯ ವಿಮಾ ಮೊತ್ತದ ಗರಿಷ್ಠ ಮಿತಿಯನ್ನು ನಿಗದಿಪಡಿಸಿ ಪ್ರತ್ಯಪ್ರತ್ಯೇಕ ಜಿಎಸ್‌ಟಿ ದರವನ್ನು ನಿಗದಿಪಡಿಸಿ ಜಾರಿಗೆ ತರುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕು.

2017ರಿಂದ ಆರೋಗ್ಯ ವಿಮೆಗೆ ಶೇ.18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿರುವು ದರಿಂದ ಈ ಕ್ಷೇತ್ರದಲ್ಲಿ ಅಷ್ಟೊಂದು ಬೆಳವಣಿಗೆ ಕಂಡುಬಂದಿಲ್ಲ. ಈಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಆರೋಗ್ಯ ಸುರಕ್ಷೆಗೆ ಹೆಚ್ಚಿನ ಆದ್ಯತೆ ತೋರಿ ಸರಣಿ ಯೋಜನೆಗಳನ್ನು ಜಾರಿಗೊಳಿಸಿವೆ. ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿ ದರದಲ್ಲಿ ಇಳಿಕೆ ಮಾಡಿದ್ದೇ ಆದಲ್ಲಿ ಸರಕಾರಗಳ ನಿರೀಕ್ಷಿತ ಮತ್ತು ಉದ್ದೇಶಿತ ಗುರಿ ಸಾಧನೆಯನ್ನು ಮತ್ತಷ್ಟು ಸುಲಭಸಾಧ್ಯವಾಗಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next