Advertisement

Union Budget 2024: ಮೋದಿ ನದಿ ಜೋಡಣೆ ಭರವಸೆ ಈಡೇರಲಿಲ್ಲ!

03:27 PM Jan 30, 2024 | Team Udayavani |

ಉದಯವಾಣಿ ಸಮಾಚಾರ
ಚಿಕ್ಕಬಳ್ಳಾಪುರ: ಇಡೀ ದೇಶ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವಾಗ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ ಡಿಎ 2.0 ಸರ್ಕಾರ ತನ್ನ ಕೊನೆ ಬಜೆಟ್‌ ಮಂಡಿಸಲು ಒಂದೇ ದಿನ ಮಾತ್ರ ಬಾಕಿ ಇದ್ದು, ಫೆ.1 ರಂದು ಗುರುವಾರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ ಮಂಡಿಸಲಿರುವ ಆಯವ್ಯಯ ಕಡೆಗೆ ಜಿಲ್ಲೆಯ ಜನತೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

Advertisement

ನಿರಂತರವಾಗಿ ಬೆಲೆ ಏರಿಕೆ ಅದರಲ್ಲೂ ಅಡುಗೆ ಅನಿಲ, ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜಿಲ್ಲೆಯ ಸಾಮಾನ್ಯ ಜನತೆ ಅಂತೂ ಬೆಲೆ ಏರಿಕೆ ನಿಯಂತ್ರಣಕ್ಕೆ ಚುನಾವಣೆ ಸಂದರ್ಭದಲ್ಲಿ ಆದರೂ ಏನಾದರೂ ಕ್ರಮ ವಹಿಸುತ್ತಾರಾ ಎಂದು ಕೇಂದ್ರ ಬಜೆಟ್‌ ಬಗ್ಗೆ ಆಸೆಗಣ್ಣನಿಂದ ಹಲವು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕಳೆದ 5 ವರ್ಷದಲ್ಲಿ ಜಿಲ್ಲೆಯ ಅಭಿವೃದ್ದಿಗೆ ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ನೆರವು ಸಿಕ್ಕಿಲ್ಲ. ಕೇಂದ್ರ ಸರ್ಕಾರದ್ದು ಅಂತ ಯಾವುದೇ ಒಂದು ಪ್ರತ್ಯೇಕ ಯೋಜನೆ, ಕಾರ್ಯಕ್ರಮ ಜಿಲ್ಲೆ ರೂಪಗೊಂಡು ಅನುಷ್ಠಾನಗೊಂಡಿಲ್ಲ. ಕೆಲವೊಂದು ಹೆದ್ದಾರಿ ಕಾಮಗಾರಿಗಳಿಗೆ ಅಲ್ಪಸ್ವಲ್ಪ ಅನುದಾನ ಸಿಕ್ಕಿರುವುದು ಬಿಟ್ಟರೆ 5 ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿ ಕಡೆಗೆ ಕೇಂದ್ರ ತಿರುಗಿ ನೋಡಿದ್ದು ಬರೀ ಶೂನ್ಯ, ಕಿಸಾನ್‌ ಸಮ್ಮಾನ್‌ ಯೋಜನೆ, ಸಂಸದರ ಆದರ್ಶ ಗ್ರಾಮ, ಗ್ರಾಮ ಸಡಕ್‌ ಯೋಜನೆಯಡಿ ರೈತರಿಗೆ, ಕೆಲವೊಂದು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಿಕ್ಕಿದ್ದು ಬಿಟ್ಟರೆ, ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಶಾಶ್ವತ ನೀರಾವರಿ, ಅಂತರ್ಜಲ ಅಭಿವೃದ್ಧಿಗೆ ವಿಶೇಷ ಒತ್ತು, ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವಂತಹ ಕೈಗಾರಿಕೆಗಳ ಸ್ಥಾಪನೆಯ ಕಡೆ ನಿರ್ಲಕ್ಷ್ಯ ಮುಂದುವರೆದಿದೆ. 2009ರಲ್ಲಿ ಮೋದಿಯೆ ಚಿಕ್ಕಬಳ್ಳಾಪುರಕ್ಕೆ ಬಂದು ಜಿಲ್ಲೆಗೆ ಶಾಶ್ವತ ನೀರಾವರಿ ಒದಗಿಸಲು ನದಿ ಜೋಡಣೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅದು ಈಡೇರಲಿಲ್ಲ.

ಎತ್ತಿನಹೊಳೆ ರಾಷ್ಟ್ರೀಯ ಯೋಜನೆ ಆಗಲಿಲ್ಲ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಕೇಂದ್ರೀಕರಿಸಿ ಅನುಷ್ಠಾನಗೊಳಿಸಿ ದಶಕದಿಂದ ಕುಂಟುತ್ತಾ ಸಾಗಿರುವ ಎತ್ತಿನಹೊಳೆ ಯೋಜನೆಯನ್ನು ರಾಷ್ಟ್ರೀಯ ಕುಡಿಯುವ ನೀರು ಯೋಜನೆ ಎಂದು
ಪರಿಗಣಿಸಬೇಕೆಂದು ಸಂಸದ ಬಿ.ಎನ್‌.ಬಚ್ಚೇಗೌಡ ಮನವಿಗೆ ಕೇಂದ್ರ ಸ್ಪಂದಿಸಿಲ್ಲ. ಇನ್ನೂ ರೈಲ್ವೆ ಯೋಜನೆಗಳು ವಿಚಾರಕ್ಕೆ ಬಂದರೂ ಜಿಲ್ಲೆಗೆ ತೀವ್ರ ನಿರಾಸೆ ಮೂಡಿಸಿದೆ. ಚಿಕ್ಕಬಳ್ಳಾಪುರ ಮೂಲಕ ವಯಾ ಚಿಂತಾಮಣಿ, ಕೋಲಾರ ಮೂಲಕ ದೆಹಲಿಗೆ ತೆರಳುತ್ತಿದ್ದ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲು ನಿಂತು ವರ್ಷಗಳೇ ಕಳೆದಿದೆ. ಜಿಲ್ಲೆಗೆ ಹೆಚ್ಚುವರಿ ರೈಲ್ವೆ ಸೌಲಭ್ಯ ಸಿಗಬೇಕೆಂಬ ಬೇಡಿಕೆಗೆ ಸ್ಪಂದಿಸುವರೇ ಇಲ್ಲವಾಗಿದೆ.

ಇನ್ನೂ ಗೌರಿಬಿದನೂರು ಚಿಕ್ಕಬಳ್ಳಾಪುರ ನಡುವೆ ರೈಲ್ವೆ ಹಳಿ ನಿರ್ಮಾಣಕ್ಕೆ ಸಮೀಕ್ಷೆ ಕಾರ್ಯ ನಡೆದರೂ ರೈಲ್ವೆ ಹಳಿ ನಿರ್ಮಾಣ ನನೆಗುದಿಗೆ ಬಿದ್ದಿದೆ. ಅದೇ ರೀತಿ ಚಿಕ್ಕಬಳ್ಳಾಪುರ ವಯಾ ಬಾಗೇಪಲ್ಲಿ ಮೂಲಕ ಪುಟ್ಟಪರ್ತಿಗೆ ರೈಲ್ವೆ ಸಂಪರ್ಕ ಕಾರ್ಯವೂ ನನೆಗುದಿ ಬಿದ್ದಿದೆ. ಇನ್ನೂ ಕಳೆದ 5 ವರ್ಷದಲ್ಲಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಒಟ್ಟು 1,27,832 ಫ‌ಲಾನುಭವಿಗಳಿಗೆ ರೂ.360.1230 ಕೋಟಿಗಳಷ್ಟು ಹಣ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ.

Advertisement

ಹೆದ್ದಾರಿ ನಿರ್ಮಾಣಕ್ಕೆ ಸಾವಿರಾರು ಕೋಟಿ
ಕಳೆದ 5 ವರ್ಷದಲ್ಲಿ ತುಸು ಸಮಾದಾನ ಸಂಗತಿಯೆಂದರೆ ಹೆದ್ದಾರಿ ಕಾಮಗಾರಿಗೆ ಹಣ ಸಿಕ್ಕಿದೆ. ವಿಶೇಷವಾಗಿ ಮಧುಗಿರಿ ಚಿಕ್ಕಬಳ್ಳಾಪುರ ನಡುವಿನ 234 ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ 398 ಕೋಟಿ ಸಿಕ್ಕರೆ ಚಿಕ್ಕಬಳ್ಳಾಪುರ ಮುಳಬಾಗಿಲು ನಡುವಿನ 81 ಕಿಮೀ ಚತುಷ್ಪಥ ನಿರ್ಮಾಣಕ್ಕೆ ಡಿಪಿಆರ್‌ ಸಿದ್ದವಾಗುತ್ತಿದೆ. ಇನ್ನೂ ದೇವನಹಳ್ಳಿಯಿಂದ ಬಾಗೇಪಲ್ಲಿ ಮೂಲಕ ಆಂಧ್ರದಗಡಿವರೆಗೂ ದಶಪಥ ನಿರ್ಮಾಣಕ್ಕೂ ಡಿಪಿಆರ್‌ ಸಿದ್ದವಾಗುತ್ತಿದ್ದು ಇದಕ್ಕೆ ಆಯವ್ಯಯದಲ್ಲಿ ಅನುದಾನ ಸಿಗಬೇಕಿದೆ.

61 ಪಿಎಂ ಆದರ್ಶ ಗ್ರಾಮಕ್ಕೆ 66 ಕೋಟಿ
5 ವರ್ಷದಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಚಿಕ್ಕಬಳ್ಳಾಪುರ 25, ಗೌರಿಬಿದನೂರು 14, ಬಾಗೇಪಲ್ಲಿ 19 ಹಾಗೂ
ಗುಡಿಬಂಡೆ ತಾಲೂಕಿನಲ್ಲಿ 3 ಗ್ರಾಮ ಸೇರಿ ಒಟ್ಟು 61 ಗ್ರಾಮಗಳಿಗೆ ಕಳೆದ 5 ವರ್ಷದಲ್ಲಿ 15 ಕೋಟಿ ಅನುದಾನ ಬಂದಿದೆ. ಇನ್ನೂ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 105.74 ಕಿಮೀ ಉದ್ದದ ರಸ್ತೆ ಅಭಿವೃದ್ದಿಗೆ ಕಳೆದ 5 ವರ್ಷದಲ್ಲಿ ಜಿಲ್ಲೆಗೆ 66.21 ಕೋಟಿ ರೂ. ಅನುದಾನ ಬಂದಿದೆ.

ಜನರ ನಿರೀಕ್ಷೆಗಳೇನು?
*ಕೇಂದ್ರ ಸರ್ಕಾರದಿಂದ ಶಾಶ್ವತ ನೀರಾವರಿ ವಂಚಿತ ಬರ ಪೀಡಿತ ಜಿಲ್ಲೆಗೆ ಬೇಕು ನದಿ ಜೋಡಣೆ ಸಂಕಲ್ಪ
* ದುಡಿವ ಕೈಗಳಿಗೆ ಕೃಷಿ ಆಧಾರಿತ ಕೈಗಾರಿಕೆ ಕ್ಷೇತ್ರಕ್ಕೆ ನೆರವು, ಅಂತರ್ಜಲ ವೃದ್ದಿಗೆ ವಿಶೇಷ ಯೋಜನೆ ಅಗತ್ಯ
*ರಾಷ್ಟ್ರೀಯ ಯೋಜನೆಯಾಗಿ ಎತ್ತಿನ ಹೊಳೆ ಪರಿಗಣಿಸಿ ಯೋಜನೆ ಅನುಷ್ಟಾನಕ್ಕೆ ಅಗತ್ಯ ಅನುದಾನ ಕೊಡಬೇಕು
*ಹೆಚ್ಚಿನ ರೈಲ್ವೆಗಳ ಸೌಲಭ್ಯ ಹಾಗೂ ವಿಸ್ತರಣೆ, ರೈಲು ನಿಲ್ದಾಣಗಳಿಗೆ ಸೌಕರ್ಯ
*ಜಿಲ್ಲೆಗೆ ಕೃಷ್ಣಾ ನದಿಯಿಂದ ಕನಿಷ್ಠ 20 ಟಿಎಂಟಿ ನೀರು ಪೂರೈಸಲು ವಿಶೇಷ ಯೋಜನೆ ಕೈಗೆತ್ತಿಕೊಳ್ಳಬೇಕು
*ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೆ ವಿಶೇಷ ಪ್ಯಾಕೇಜ್‌, ಜಲಮೂಲಗಳಾದ ಕೆರೆಗಳ ಪುನಚ್ಛೇತನಕ್ಕೆ ವಿಶೇಷ ಆದ್ಯತೆ
*ಮಾವು, ದ್ರಾಕ್ಷಿ, ಟೊಮೇಟೋ, ಗುಲಾಬಿ ಈರುಳ್ಳಿ ಸಂಸ್ಕರಣೆ, ಮಾರುಕಟ್ಟೆಗೆ ಒತ್ತು

*ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next