ನವದೆಹಲಿ: ಕಳೆದ ವರ್ಷ ಪ್ರವಾಹದಿಂದ ತತ್ತರಿಸಿದ ಹಿಮಾಚಲ ಪ್ರದೇಶಕ್ಕೆ ಬಹುಪಕ್ಷೀಯ ಅಭಿವೃದ್ಧಿ ನೆರವು ನೀಡುವುದಾಗಿ ಘೋಷಿಸಲಾಗಿದೆ. 2023ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಹಲವು ಗುಡ್ಡ ಕುಸಿತ, ಭುಕುಸಿತ ಸಂಭವಿಸಿ ಸುಮಾರು 550 ಮಂದಿ ಮೃತಪಟ್ಟಿದ್ದರು.
ಹಾಗಾಗಿ ರಾಜ್ಯದ ಪುನರ್ ಅಭಿವೃದ್ಧಿ ಹಾಗೂ ಪುನರ್ವಸತಿಗಾಗಿ ಕೇಂದ್ರ ಸರ್ಕಾರ ಬಹುಪಕ್ಷೀಯ ಅಭಿವೃದ್ಧಿ ನೆರವು ಯೋಜನೆಯಡಿ ಸಹಾಯ ಮಾಡಲಿದೆ.
ಕೇಂದ್ರ ತಂಡ ನಡೆಸಿದ್ದ ವಿಪತ್ತು ನಂತರದ ಮೌಲ್ಯಮಾಪನದ ವೇಳೆ ಹಿಮಾಚಲ ಪ್ರದೇಶ ಸರ್ಕಾರವು ಸುಮಾರು 9,042 ಕೋಟಿ ರೂ. ಆರ್ಥಿಕ ನೆರವು ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿತ್ತು. ಅಲ್ಲದೇ ಹಿಮಾಚಲದಲ್ಲಿನ ಆಡಳಿತಾರೂಡ ಕಾಂಗ್ರೆಸ್ ಸರ್ಕಾರವು ಈ ಪ್ರವಾಹ ಪರಿಸ್ಥಿತಿಯನ್ನು “ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರವನ್ನು ಕೋರಿತ್ತು.
ಪ್ರವಾಹ ಪೀಡಿತರಿಗೆ ಪರಿಹಾರವಾಗಿ ತನ್ನ ಬೊಕ್ಕಸದಿಂದ 4,500 ಕೋಟಿ ರೂ. ನೀಡಿದ್ದಾಗಿ ಹಿಮಾಚಲ ರಾಜ್ಯ ಸರ್ಕಾರ ಹೇಳಿತ್ತಲ್ಲದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಮಾಚಲದ ಪ್ರವಾಹಕ್ಕೆ ಯಾವುದೇ ಪರಿಹಾರ ನೀಡಿಲ್ಲ, ರಾಷ್ಟ್ರೀಯ ವಿಪತ್ತು ಎಂದೂ ಘೋಷಿಸುತ್ತಿಲ್ಲ ಎಂದು ಆರೋಪಿಸಿತ್ತು.
ಹಿಮಾಚಲ ರಾಜ್ಯ ಸರ್ಕಾರವು ಕೇಂದ್ರದ ಪರಿಹಾರ ಧನವನ್ನು ಆಯ್ದ ಪ್ರದೇಶಗಳಲ್ಲಿ ಮಾತ್ರ ವಿತರಿಸಲಾಗಿದ್ದು ಉಳಿದ ಹಣ ಎಲ್ಲಿ ಹೋಯಿತು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ಕಳೆದ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಹೇಳಿದ್ದರು. ಈ ಹಿಂದೆ 2,300 ರಸ್ತೆಗಳ ನಿರ್ಮಾಣಕ್ಕಾಗಿ ಹಾಗೂ 11,000 ಮನೆಗಳನ್ನು ನಿರ್ಮಿಸಲು ಕೇಂದ್ರದಿಂದ ಅನುದಾನ ದೊರೆತಿದ್ದು ಜತೆಗೇ ಪ್ರವಾಹಪೀಡಿತರಿಗಾಗಿ 1,762 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು.
ಅಲ್ಲದೇ ರಾಜ್ಯ ಸರ್ಕಾರವು ಈ ಹಣವನ್ನು ಆಯ್ದ ಜನರಿಗೆ ಮಾತ್ರ ನೀಡಿದೆ ಎಂದೂ ಬಿಜೆಪಿ ಆರೋಪಿಸಿತ್ತು.
ವಿವಿಧ ರಾಜ್ಯಗಳ ಪ್ರವಾಹ ತಡೆಗೆ 11 ಸಾವಿರ ಕೋಟಿ
ಜಲ ಸಂಪನ್ಮೂಲ ವಿಭಾಗಕ್ಕೆ 30,233.83 ಕೋಟಿ ರೂ. ಹಂಚಿಕೆಯಾಗಿದ್ದು, ಕಳೆದ ಬಜೆಟ್‌ಗಿಂತ ಶೇ.55ರಷ್ಟು ಹೆಚ್ಚಿನ ಪ್ರಮಾಣ ಅನುದಾನ ಬಡುಗಡೆಯಾಗಿದೆ. ಇದು ಪ್ರಮುಖವಾಗಿ ನೀರಾವರಿ ಯೋಜನೆಗಳು, ನಮಾಮಿ ಗಂಗಾ ಮಿಷನ್-2 ನದಿ ಮಾಲಿನ್ಯ ನಿಯಂತ್ರಣ, ಎರಡು ರಾಜ್ಯಗಳ ಕೋಸಿ-ಮೇಚಿ ಯೋಜನೆ ಹಾಗೂ ಜಾರಿಯಲ್ಲಿರುವ ಇತರೆ ಯೋಜನೆಗಳನ್ನು ಒಳಗೊಂಡಿದೆ. ಇದರಲ್ಲಿ 11,500 ಕೋಟಿ ರೂ. ವಿವಿಧ ರಾಜ್ಯಗಳಲ್ಲಿ ಉಂಟಾಗುವ ನೆರೆ ತಡೆಗೆ ಹಾಗೂ ನೀರಾವರಿ ಯೋಜನೆಗಳಿಗೆ ಬಳಕೆಯಾಗಲಿವೆ.
ಸತತವಾಗಿ ಪ್ರವಾಹದಿಂದ ಬಳಲುತ್ತಿರುವ ಬಿಹಾರ ರಾಜ್ಯಕ್ಕೆ ನೇಪಾಳ ಮಾದರಿಯ ಪ್ರವಾಹ ತಡೆ ಯೋಜನೆ, ಬ್ರಹ್ಮಪುತ್ರಾ ನದಿಯ ಪ್ರವಾಹದಿಂದ ಬಳಲುತ್ತಿರುವ ಅಸ್ಸಾಂಗೆ ಪ್ರವಾಹ ತಡೆ ಯೋಜನೆ ಜಾರಿಯಾಗಲಿದೆ. ಜತೆಗೆ, ವಿವಿಧ ರಾಜ್ಯಗಳಲ್ಲಿ ನೀರಾವರಿ ಯೋಜನೆಗಳಿಗೂ ಇದರಿಂದ ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರಿಂದ ರೈತಾಪಿ ಚಟುವಟಿಕೆಗಳು ಹೆಚ್ಚಲು ಕಾರಣವಾಗಲಿದೆ.