Advertisement

ಬಜೆಟ್‌ ವಿಶ್ಲೇಷಣೆ: ಶಿಕ್ಷಣ ಕ್ಷೇತ್ರ ಸುಧಾರಣೆಗೆ ರಚನಾತ್ಮಕ ಕ್ರಮ ಬೇಕಿತ್ತು

10:48 PM Feb 01, 2022 | Team Udayavani |

ಕೇಂದ್ರ ಮುಂಗಡ ಪತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಏನಿರ ಬಹುದು ಎನ್ನುವ ಕುತೂಹಲವಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಹಿನ್ನೆಲೆಯಲ್ಲಿ ಕಳೆದ ವರ್ಷದ ಮುಂಗಡ ಪತ್ರದ‌ಲ್ಲಿ ಶಿಕ್ಷಣಕ್ಕೆ ಒದಗಿಸಿದ ಹಣಕಾಸು ನಿರಾಸೆ ಮೂಡಿಸಿತ್ತು. ಈ ವರ್ಷವೂ ಅದೇ ಭಾವನೆ ಮೂಡಿದೆ.

Advertisement

ಪ್ರಸಕ್ತ ಬಜೆಟ್‌ ಆರ್ಥಿಕ ಪುನಶ್ಚೇತನಕ್ಕೆ ಹೆಚ್ಚು ಒತ್ತು ನೀಡಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಹದಗೆಟ್ಟಿದ್ದ ಆರ್ಥಿಕತೆಯನ್ನು ಸರಿದಾರಿಗೆ ತರುವ ಕ್ರಮಗಳೇ ಹೆಚ್ಚು ಇವೆ. ಮೂಲಸೌಕರ್ಯ ಸೃಷ್ಟಿ ಕ್ಷೇತ್ರದಲ್ಲಿ ಹೆಚ್ಚು ಖರ್ಚು ಮಾಡಿ ಉಳಿದ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು, ವಿತ್ತೀಯ ಕೊರತೆಯನ್ನು ತಗ್ಗಿಸುವ ಕ್ರಮಗಳ ಬಗ್ಗೆ ಹೆಚ್ಚು ಯೋಚಿಸಿರುವುದು ಕಂಡು ಬರುತ್ತಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುವಾಗ ಶೈಕ್ಷಣಿಕ ಸುಧಾರಣೆ ಕ್ರಮಗಳಿಗೆ ಸಂಪನ್ಮೂಲ ಒದಗಿಸಲೇ ಬೇಕಾಗಿತ್ತು. ಹಂತ ಹಂತವಾಗಿ ರಾಷ್ಟ್ರೀಯ ಉತ್ಪನ್ನದ ಶೇ. 6ರಷ್ಟನ್ನು ಶಿಕ್ಷಣಕ್ಕೆ ವಿನಿಯೋಗಿಸಲೇ ಬೇಕಾಗಿತ್ತು. ಆದರೆ ಆ ನಿಟ್ಟಿನಲ್ಲಿ ಯಾವುದೇ ರಚನಾತ್ಮಕ ಕ್ರಮಗಳು ಕಳೆದ ವರ್ಷದ ಬಜೆಟ್‌ನಲ್ಲಿಯೂ ಇರಲಿಲ್ಲ, ಈ ವರ್ಷವೂ ಕಾಣಿಸುತ್ತಿಲ್ಲ. ಆರ್ಥಿಕ ಪುನಶ್ಚೇತನಕ್ಕೆ ಹೆಚ್ಚು ಒತ್ತು ನೀಡುವುದರ ಜತೆಗೆೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ರಚನಾತ್ಮಕ ಕ್ರಮಗಳ ಅಗತ್ಯವಿದೆ.

ಇದು ಉತ್ತಮ ಹೆಜ್ಜೆ
ಕೊರೊನಾದಿಂದಾಗಿ ಮಕ್ಕಳಿಗೆ ತೊಂದರೆಯಾಗಿದ್ದನ್ನು ಗಮನಿಸಿ ಆನ್‌ಲೈನ್‌ ಶಿಕ್ಷಣದ ವ್ಯವಸ್ಥೆಗೆ ಮತ್ತಷ್ಟು ಕ್ರಮ ಕೈಗೊಳ್ಳಲಾಗಿದೆ. ಇ-ವಿದ್ಯಾ ಯೋಜನೆಯಲ್ಲಿ ಟಿವಿ ಚಾನೆಲ್‌ಗ‌ಳ ಮೂಲಕ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ 200 ಚಾನೆಲ್‌ಗ‌ಳ ಮುಖಾಂತರ ಸೌಲಭ್ಯ ಕಲ್ಪಿಸ ಲಾಗುವುದು ಎಂದು ತಿಳಿಸಲಾಗಿದೆ. ಇದು ಉತ್ತಮ ಹೆಜ್ಜೆ.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಡಿಜಿಟಲ್‌ ವಿಶ್ವವಿದ್ಯಾನಿಲಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪನೆ ಮಾಡುವ ಯೋಜನೆ ಪ್ರಕಟಿಸ ಲಾಗಿದೆ. ದೇಶದ ಅನೇಕ ಸಾರ್ವಜನಿಕ ವಿಶ್ವವಿದ್ಯಾನಿಲಯಗಳನ್ನೂ ಈ ವ್ಯಾಪ್ತಿಯಲ್ಲಿ ಬಳಸಿಕೊಂಡು ಸರ್ವರಿಗೂ ಉನ್ನತ ಶಿಕ್ಷಣ ನೀಡುವ ಪ್ರಸ್ತಾವ‌ ಸ್ವಲ್ಪ ಗಮನ ಸೆಳೆಯುವಂಥದ್ದು. ಡಿಜಿಟಲೀಕರಣದ ನಿಟ್ಟಿನಲ್ಲಿ ಇದೊಂದು ಉತ್ತಮ ಉಪಕ್ರಮ. ಪ್ರಾಥಮಿಕ ಶಿಕ್ಷಣದಲ್ಲಿ ಎರಡು ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವ‌ ಮಾತ್ರ ಕಾಣಿಸುತ್ತಿದೆ. ಇದರ ಹೊರತಾಗಿ ಬೇರೆ ಯಾವುದೇ ಕ್ರಮಗಳು ಕಾಣುತ್ತಿಲ್ಲ.
ಕೃಷಿ ವಿ.ವಿ.ಗಳ ಪಠ್ಯಕ್ರಮವನ್ನು ಆಧುನಿಕ ಕೃಷಿ ಪದ್ಧತಿ ಹಾಗೂ ಅಗತ್ಯಗಳಿಗೆ ಸ್ಪಂದಿಸುವಂತೆ ಪರಿಷ್ಕರಿಸುವ ಮತ್ತು ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಕೌಶಲಗಳನ್ನು ರೂಪಿಸುವ ಪ್ರಸ್ತಾವಗಳು ಹೊಸದಾಗಿ ಕಾಣಿಸುವುದಿಲ್ಲ. ಒಟ್ಟಾರೆ, ನೀತಿಗೆ ಮತ್ತಷ್ಟು ನೀತಿಗಳನ್ನು ಸೇರಿಸಿ ಶಿಕ್ಷಣ ನೀತಿಗಳ ಅನುಷ್ಠಾನ ಜವಾಬ್ದಾರಿಯನ್ನು ರಾಜ್ಯ ಸರಕಾರಗಳು ಹಾಗೂ ಖಾಸಗಿ ಕ್ಷೇತ್ರಕ್ಕೆ ಬಿಟ್ಟುಕೊಡುವ ನಿಲುವು ಈ ಬಜೆಟ್‌ನಲ್ಲಿ ಕಾಣಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಘೋಷಣೆಯ ಅಬ್ಬರ ಈಗ ಕಾಣಿಸುತ್ತಿಲ್ಲ.

-ಪ್ರೊ| ಎ.ಎಂ. ನರಹರಿ
ಶಿಕ್ಷಣ ತಜ್ಞ

Advertisement
Advertisement

Udayavani is now on Telegram. Click here to join our channel and stay updated with the latest news.

Next