ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ (ಫೆ.1, 2021) ಸಂಸತ್ ನಲ್ಲಿ ಮಂಡಿಸಿದ 2021-22ನೇ ಸಾಲಿನ ಆಯವ್ಯಯದಲ್ಲಿ ಹಿರಿಯ ನಾಗರಿಕರು ತೆರಿಗೆ ಕಟ್ಟುವ ಅಗತ್ಯವಿಲ್ಲ ಎಂದು ಘೋಷಿಸಿದ್ದಾರೆ.
75 ವರ್ಷ ಮೇಲ್ಪಟ್ಟ ನಾಗರಿಕರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾಗಿಲ್ಲ ಮತ್ತು ಬಡ್ಡಿ ಮೇಲಿನ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ನೇರ ತೆರಿಗೆಯಲ್ಲಿ ಸಾಕಷ್ಟು ಅಮೂಲಾಗ್ರ ಬದಲಾವಣೆ ತಂದಿರುವುದಾಗಿ ತಿಳಿಸಿರುವ ಕೇಂದ್ರ, ಜಿಎಸ್ ಟಿ ಜಾರಿಗೆ ಬಂದ ಬಳಿಕ ಹಲವು ಸುಧಾರಣೆಗಳನ್ನು ತರಲಾಗಿದೆ ಎಂದು ಹೇಳಿದೆ.
ಅಗ್ಗದ ಸಾಲ ನೀಡಲು ಕೇಂದ್ರ ನಿರ್ಧಾರ:
ಬ್ಯಾಂಕ್ ವಹಿವಾಟು ಹಾಗೂ ಆರ್ಥಿಕ ಚೇತರಿಕೆಗಾಗಿ ಅಗ್ಗದ ಸಾಲ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. 1.5 ಲಕ್ಷ ರೂಪಾಯಿವರೆಗೆ ಸಾಲದ ಮೇಲಿನ ತೆರಿಗೆ ವಿನಾಯ್ತಿಗೆ ನಿರ್ಧರಿಸಿದ್ದು, ಇದು 2022ರ ಮಾರ್ಚ್ 31ರವರೆಗೂ ಪಡೆಯುವ ಸಾಲಕ್ಕೆ ಅನ್ವಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಘೋಷಿಸಿದ್ದಾರೆ.
5 ಕೋಟಿ ರೂಪಾಯಿವರೆಗಿನ ವಹಿವಾಟಿನ ಚಾರಿಟೇಬಲ್ ಟ್ರಸ್ಟ್ ತೆರಿಗೆ ವಿನಾಯ್ತಿ ನೀಡಿರುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.ಸ್ಟಾರ್ಟ್ ಅಪ್ ಉದ್ಯಮಗಳಿಗೆ ಇನ್ನೂ ಒಂದು ವರ್ಷ ರಿಲೀಫ್ ನೀಡಿರುವುದಾಗಿ ತಿಳಿಸಿದರು.