Advertisement

ರೈತರ “ಅಭ್ಯುದಯ’ಮೋದಿಯ ಧ್ಯೇಯ

10:04 AM Feb 03, 2020 | mahesh |

ಪ್ರಧಾನಿ ನರೇಂದ್ರ ಮೋದಿಯವರ “ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌’ ಹಾಗೂ “ನೆಮ್ಮದಿಯ ಬದುಕು’ ಘೋಷಣೆಗೆ ಒತ್ತು ನೀಡಿರುವ ಕೇಂದ್ರ ಸರ್ಕಾರ, ಕೃಷಿಕರ ಅಭ್ಯುದಯಕ್ಕಾಗಿ ಪ್ರಮುಖ ಯೋಜನೆಗಳನ್ನು ಘೋಷಿಸಿದೆ. 2022ರ ವೇಳೆಗೆ ದೇಶದ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿರುವ ಸರ್ಕಾರ, ಇದಕ್ಕಾಗಿ ಕೇಂದ್ರ ಬಜೆಟ್‌ನಲ್ಲಿ “16 ಅಂಶಗಳ ಯೋಜನೆ’ಯನ್ನು ಘೋಷಿಸಿದೆ. ಸಚಿವೆ ನಿರ್ಮಲಾ ಸೀತಾರಾಮನ್‌, ಕೃಷಿ ವಲಯದ ಅಭಿವೃದ್ಧಿಗೆ 2.83 ಲಕ್ಷ ಕೋಟಿ ರೂ.ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ. ರೈತರ ಬರಡು ಭೂಮಿಯಲ್ಲಿ ಸೌರ ವಿದ್ಯುತ್‌ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ, ಸೋಲಾರ್‌ ಗ್ರಿಡ್‌ನಿಂದ ಉತ್ಪಾದಿಸುವ
ಹೆಚ್ಚುವರಿ ವಿದ್ಯುತ್‌ ಖರೀದಿಗೆ ನಿರ್ಧಾರ, ಮಹಿಳಾ ಕೃಷಿಕರಿಗಾಗಿ “ಧಾನ್ಯಲಕ್ಷ್ಮೀ’ ಯೋಜನೆ, ಕೃಷಿ ಉತ್ಪನ್ನಗಳ ಸಾಗಣೆಗೆ “ಕಿಸಾನ್‌ ರೈಲು’, “ಕೃಷಿ ಉಡಾನ್‌’ ಸೇವೆ ಜಾರಿ. ಇ-ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸ್ಥಾಪನೆ, ನಬಾರ್ಡ್‌ ಮೂಲಕ ರೈತರಿಗೆ ಸಾಲ ವಿತರಣೆ ಸೇರಿದಂತೆ ಕೃಷಿ ಉತ್ತೇಜನಕ್ಕೆ ಹಲವಾರು ಪ್ರೋತ್ಸಾಹಕರ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ, “ಸಾಗರ್‌ ಮಿತ್ರಾ’ದಂತಹ ಯೋಜನೆಗಳ ಮೂಲಕ ಮತ್ಸ್ಯೋದ್ಯಮದ ಪ್ರಗತಿಗೂ ಕಾಣಿಕೆ ಸಲ್ಲಿಸಿದ್ದಾರೆ. ಹಾಲು ಉತ್ಪಾದನೆಗೆ ಉತ್ತೇಜನ ನೀಡುವ ಮೂಲಕ ಹೈನೋದ್ಯಮದ ಪ್ರಗತಿಗೂ ಮುಂದಡಿ ಇಟ್ಟಿದ್ದಾರೆ.

Advertisement

ಕೃಷಿ ಮಾರುಕಟ್ಟೆ ಉದಾರೀಕರಣ ಇಂದಿನ ಅಗತ್ಯ
ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕೃಷಿ ಮಾರುಕಟ್ಟೆಯನ್ನು ಉದಾರೀಕರಣಗೊಳಿಸಬೇಕಾದ ಅಗತ್ಯವಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲ್‌ ಸೀತಾರಾಮನ್‌ ಪ್ರತಿಪಾದಿಸಿದ್ದಾರೆ. ದೇಶದ ಬೆನ್ನೆಲುಬಾದ ಕೃಷಿ ಹಾಗೂ ರೈತರ ಅಭಿವೃದ್ಧಿಗಾಗಿ ಸರ್ಕಾರ 16-ಅಂಶಗಳ ಕ್ರಿಯಾಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಿದೆ. ಕೃಷಿ ಕ್ಷೇತ್ರಕ್ಕೆ ವಿಪುಲ ಬಂಡವಾಳ ಹರಿವಿನ ಅಗತ್ಯವಿದೆ. “ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆ’ಯಡಿ ಕೇಂದ್ರ ಸರ್ಕಾರ 6.11 ಕೋಟಿ ರೈತರಿಗೆ ವಿಮಾ ಸೌಲಭ್ಯ ಕಲ್ಪಿಸಿದೆ ಎಂದು ತಿಳಿಸಿದರು.

“ಕಿಸಾನ್‌ ರೈಲು, ಕೃಷಿ ಉಡಾನ್‌’ ಜಾರಿ: ರೈತರ ಕೃಷಿ ಉತ್ಪನ್ನಗಳು ಅದರಲ್ಲೂ ವಿಶೇಷವಾಗಿ ಬೇಗನೆ ಹಾಳಾಗುವ ಪದಾರ್ಥಗಳನ್ನು ತ್ವರಿತವಾಗಿ ಸಾಗಣೆ ಮಾಡಲು “ಕಿಸಾನ್‌ ರೈಲು’ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಖಾಸಗಿಯವರ ಸಹಭಾಗಿತ್ವದಲ್ಲಿ ಕೇಂದ್ರ ರೈಲ್ವೆ ಇಲಾಖೆ (ಪಿಪಿಪಿ ಮಾದರಿ) ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಈ ವೇಳೆ, ಕೃಷಿ ಉತ್ಪನ್ನಗಳು ಹಾಳಾಗದಂತೆ ಅವುಗಳಿಗೆ ಶೀಥಲೀಕರಣ ಸೌಲಭ್ಯ ಕಲ್ಪಿಸಲಾಗುವುದು.

ಇದೇ ವೇಳೆ, ಕೃಷಿ ಉತ್ಪನ್ನಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ “ಕೃಷಿ ಉಡಾನ್‌’ ಸೇವೆ ಜಾರಿಗೊಳಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಮುಂದಾಗಿದೆ. ಈ ಯೋಜನೆಯಡಿ ರೈತರ ಕೃಷಿ ಉತ್ಪನ್ನಗಳನ್ನು ವಿಮಾನಗಳ ಮೂಲಕ ತ್ವರಿತವಾಗಿ ಸಾಗಿಸಲಾಗುವುದು. ಇದರಿಂದಾಗಿ ಕೃಷಿ ಉತ್ಪನ್ನಗಳು, ಅದರಲ್ಲೂ ವಿಶೇಷವಾಗಿ ಬೇಗನೆ ಹಾಳಾಗುವ ಪದಾರ್ಥಗಳಿಗೆ ಶೀಘ್ರ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ. ಅಲ್ಲದೆ, ಕೃಷಿಕರು ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯಲು ಸಾಧ್ಯವಾಗುತ್ತದೆ. ಗ್ರಾಮೀಣ, ಬುಡಕಟ್ಟು ಪ್ರದೇಶಗಳು, ಅದರಲ್ಲೂ ವಿಶೇಷವಾಗಿ ಈಶಾನ್ಯ ರಾಜ್ಯಗಳ ಕೃಷಿಕರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.

ಮೋದಿ ನೇತೃತ್ವದ ಕೇಂದ್ರ ಸರ್ಕಾರ, ದೇಶದ ವಿವಿಧ ಪ್ರದೇಶಗಳ ನಡುವಿನ ಸಂಪರ್ಕ ಸೌಲಭ್ಯ ಉತ್ತಮ ಪಡಿಸಲು 2016ರಲ್ಲಿ “ಉಡಾನ್‌’ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ನಿಗದಿತ ವಾಯುಮಾರ್ಗಗಳಲ್ಲಿ ವಿಮಾನಯಾನ ಕೈಗೊಳ್ಳುವ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಆರ್ಥಿಕ ಪ್ರೋತ್ಸಾಹ ನೀಡಲಾಗುತ್ತಿದ್ದು, ಕನಿಷ್ಟ ಅರ್ಧದಷ್ಟು ಸೀಟುಗಳಿಗೆ ಸಹಾಯಧನ ಕಲ್ಪಿಸಲಾಗುತ್ತಿದೆ.

Advertisement

“ಪ್ರಧಾನಿ-ಕಿಸಾನ್‌’ ಅನುದಾನದಲ್ಲಿ ಕಡಿತ
ಪ್ರಸಕ್ತ ಆರ್ಥಿಕ ಸಾಲಿನಲ್ಲಿ “ಪ್ರಧಾನಮಂತ್ರಿ-ಕಿಸಾನ್‌’ ಯೋಜನೆಗೆ 54,370.15 ಕೋಟಿ ರೂ.ಗಳ ಅನುದಾನ ಮೀಸಲಿಡಲು ಉದ್ದೇಶಿಸಲಾಗಿದ್ದು, ಅನುದಾನದ ಪ್ರಮಾಣದಲ್ಲಿ ಶೇ.27.5ರಷ್ಟು ಕಡಿತವಾಗಿದೆ. ಕಳೆದ ಸಾಲಿನಲ್ಲಿ ಯೋಜನೆಗೆ 75,000 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು.

ಯೋಜನೆಯಡಿ ಅರ್ಹ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ.ಗಳನ್ನು ಮೂರು ಸಮಾನ ಕಂತುಗಳಲ್ಲಿ ನೀಡಲಾಗುವುದು. “ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಯೋಜನೆಯಡಿ ಕೇಂದ್ರ ಸರ್ಕಾರ ಈವರೆಗೆ 8 ಕೋಟಿ ರೈತರಿಗೆ 43,000 ಕೋಟಿ ರೂ.ಗಳನ್ನು ವಿತರಿಸಿದೆ. ಆದರೆ, ಕೆಲವು ರಾಜ್ಯಗಳಿಂದ ಯೋಜನೆ ಜಾರಿಯಲ್ಲಿ ಅಡಚಣೆ ಉಂಟಾಗಿದೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಈ ಯೋಜನೆ ಜಾರಿಯಾಗಿಲ್ಲ. ಇತರ ಕೆಲವು ರಾಜ್ಯಗಳಲ್ಲಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ರೈತರ ಬಗೆಗಿನ ಸೂಕ್ತ ದಾಖಲೆಗಳೇ ಲಭ್ಯವಿಲ್ಲ. ಹೀಗಾಗಿ, ಅರ್ಹ ಫ‌ಲಾನುಭವಿಗಳ ಸಂಖ್ಯೆ 14.5 ಕೋಟಿಯಿಂದ 14 ಕೋಟಿಗೆ ಇಳಿಕೆಯಾಗಿದೆ.

ಕೃಷಿ ಸಾಲಕ್ಕೆ ಒತ್ತು
ಇದೇ ವೇಳೆ, ದೇಶದ ಆರ್ಥಿಕ ಬೆನ್ನೆಲುಬು ರೈತರ ಅಭ್ಯುದಯಕ್ಕೆ ಒತ್ತು ನೀಡಿರುವ ನಿರ್ಮಲಾ ಸೀತಾರಾಮನ್‌, ಬಜೆಟ್‌ನಲ್ಲಿ ರೈತರಿಗೆ ವಾರ್ಷಿಕ ಕೃಷಿ ಸಾಲ ನೀಡಲು 15 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ. ಇದು ಕಳೆದ ಸಾಲಿಗಿಂತ ಶೇ.11ರಷ್ಟು ಹೆಚ್ಚಳವಾಗಿದೆ. ಕಳೆದ ಸಾಲಿನಲ್ಲಿ ಇದಕ್ಕಾಗಿ 13.5 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಸಾಧಾರಣವಾಗಿ ಕೃಷಿ ಸಾಲಕ್ಕೆ ಶೇ.9ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಆದರೆ, ಸರ್ಕಾರ ರೈತರಿಗೆ 3 ಲಕ್ಷದ ವರೆಗಿನ ಕೃಷಿ ಸಾಲಕ್ಕೆ ಶೇ.2ರಷ್ಟು ಸಹಾಯಧನ ನೀಡುತ್ತಿದ್ದು, ರೈತರು ಶೇ.7ರ ಬಡ್ಡಿ ದರದಲ್ಲಿ ಕೃಷಿ ಸಾಲ ಸೌಲಭ್ಯ ಪಡೆಯಬಹುದು.  ಜೊತೆಗೆ, ನಬಾರ್ಡ್‌ ಮೂಲಕ ಕೃಷಿಕರಿಗೆ ಸಾಲ ವಿತರಣೆ ಯೋಜನೆಯನ್ನು ವಿಸ್ತರಿಸುವುದಾಗಿ ಸಚಿವರು ತಿಳಿಸಿದ್ದಾರೆ. ಅಲ್ಲದೆ, ಗುಂಪು ಯೋಜನೆಯಡಿ “ಜಿಲ್ಲೆಗೊಂದು ತೋಟಗಾರಿಕೆ ಬೆಳೆ’ ಉತ್ತೇಜಿಸಲು ಯೋಜನೆ ರೂಪಿಸಲಾಗುತ್ತಿದೆ. ಆ ಮೂಲಕ 311 ಮೆಟ್ರಿಕ್‌ ಟನ್‌ ಬೆಳೆಧಾನ್ಯಗಳ ಗುರಿ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next