Advertisement

ಯೂನಿಯನ್‌ ಬ್ಯಾಂಕ್‌ನಿಂದ “ಯೂನಿಯನ್‌ ರಿಕವರಿ ಆ್ಯಪ್‌’

11:53 AM Aug 27, 2017 | Team Udayavani |

ಮಂಗಳೂರು: ಡಿಜಿಟಲ್‌ ಬ್ಯಾಂಕಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಾಲ ವಸೂಲಾತಿಗಾಗಿ ಗೂಗಲ್‌ ಆಧಾರಿತ “ಯೂನಿಯನ್‌ ರಿಕವರಿ ಆ್ಯಪ್‌’ ಅಭಿವೃದ್ಧಿಪಡಿಸಿದ್ದು, ಇದರಿಂದ ಬ್ಯಾಂಕಿನ ಶಾಖೆಗಳಿಗೆ ಸಾಲ ವಸೂಲಾತಿ ಸುಲಭವಾಗಲಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಪುತ್ತೂರಿನ ರಾಜ್‌ಕಿರಣ್‌ ರೈ ಜಿ. ಅವರು ತಿಳಿಸಿದರು.
ಬ್ಯಾಂಕಿನ ಎಂಡಿ ಹಾಗೂ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Advertisement

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನುರಿತ ತಂಡವನ್ನು ಬ್ಯಾಂಕ್‌ ಹೊಂದಿದ್ದು, ಈ ತಂಡವು ಹೊಸ ಆ್ಯಪ್‌ ಅಭಿವೃದ್ಧಿ ಪಡಿಸಿದೆ. ಸಾಲ ಬಾಕಿ ಉಳಿಸಿಕೊಂಡಿರುವವರ ಸಮಗ್ರ ಮಾಹಿತಿಯನ್ನು ಈ ಆ್ಯಪ್‌ನಲ್ಲಿ ತುಂಬಿಸಿ ಮೊಬೈಲ್‌ ಫೋನ್‌ಗೆ ಅಪ್‌ಲೋಡ್‌
ಮಾಡಲಾಗುತ್ತದೆ. ಸಾಲಗಾರರ ಪಿನ್‌ ನಂಬರ್‌ಹಾಕಿದ ಕೂಡಲೇ ಮೊಬೈಲ್‌ನಲ್ಲಿ ಅವರ ವಿವರ ಗಳು ಡಿಸ್‌ಪ್ಲೇ ಆಗುತ್ತವೆ. ಸಾಲ ವಸೂಲಾತಿಗೆ ನೇಮಕಗೊಂಡಿರುವ ರಿಕವರಿ ಆಫೀಸರ್‌ ಸಾಲಗಾರರ ಬಳಿ ಆಗಿಂದಾಗ್ಗೆ ತೆರಳಿ ಸಾಲ ಮರು ಪಾವತಿಸುವಂತೆ ಮನವೊಲಿಸುತ್ತಾರೆ ಎಂದವರು ವಿವರಿಸಿದರು.

ದೇಶಾದ್ಯಂತ 4,282 ಶಾಖೆಗಳನ್ನು ಹೊಂದಿರುವ ಬ್ಯಾಂಕಿನ ಪ್ರಸ್ತುತ ಅನುತ್ಪಾದಕ ಆಸ್ತಿ (ಎನ್‌ಪಿಎ) ಪ್ರಮಾಣ ಶೇ. 12.5ರಷ್ಟಿದೆ. ಅದನ್ನು ವಸೂಲಿ ಮಾಡುವುದಕ್ಕಾಗಿಯೇ ಈ ಹೊಸ ಆ್ಯಪ್‌ ಅನ್ನು ಒಂದು ತಿಂಗಳ ಹಿಂದೆ ಆರಂಭಿಸಲಾಗಿದೆ. ಅನುತ್ಪಾದಕ ಆಸ್ತಿಯನ್ನು ದೊಡ್ಡ ಮೊತ್ತದ ಹಾಗೂ ಸಣ್ಣ ಮೊತ್ತದ ಆಸ್ತಿಗಳೆಂಬುದಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಒಟ್ಟು 37,000 ಕೋಟಿ ರೂ. ಅನುತ್ಪಾದಕ ಆಸ್ತಿಯ ಪೈಕಿ ಈ ವರ್ಷ ಇದುವರೆಗೆ 4,000 ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದರು.

6,70,971 ಕೋಟಿ ರೂ. ವ್ಯವಹಾರ
ಬ್ಯಾಂಕು 3,75,796 ಕೋಟಿ ರೂ. ಠೇವಣಿ ಮತ್ತು 2,95,175 ಕೋಟಿ ರೂ. ಮುಂಗಡ ಸಾಲ ಸೇರಿದಂತೆ ಒಟ್ಟು 6,70,971 ಕೋಟಿ ರೂ. ವ್ಯವಹಾರವನ್ನು ಹೊಂದಿದೆ. ನಿರಖು ಠೇವಣಿ ಖಾತೆ ಮತ್ತು ಉಳಿತಾಯ ಠೇವಣಿ ಖಾತೆಗಳಲ್ಲಿ 1,33,412 ಕೋಟಿ ರೂ. ಹೊಂದಿದ್ದು, ಈ ಪೈಕಿ ಶೇ. 80ರಷ್ಟು ಉಳಿತಾಯ ಖಾತೆಗೆ ಸಂಬಂಧಪಟ್ಟದ್ದಾಗಿರುತ್ತದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕ ಅವಧಿಯಲ್ಲಿ ಬ್ಯಾಂಕಿನ ನಿರ್ವಹಣಾ ಲಾಭ 2,057 ಕೋಟಿ ರೂ. (ಶೇ 26.5 ರಷ್ಟು ವೃದ್ಧಿ) ಹಾಗೂ ನಿವ್ವಳ ಲಾಭವು 117 ಕೋಟಿ ರೂ. ಗಳಷ್ಟಿತ್ತು ಎಂದು ವಿವರಿಸಿದರು.ರಾಜ್ಯದಲ್ಲಿ 1958ರಲ್ಲಿ ಬ್ಯಾಂಕು ತನ್ನ ಕಾರ್ಯನಿರ್ವಹಣೆ ಆರಂಭಿಸಿದ್ದು, ಈಗ 30 ಜಿಲ್ಲೆಗಳಲ್ಲಿ 164 ಶಾಖೆಗಳಿವೆ. ಬೆಂಗಳೂರಿನಲ್ಲಿ ವಲಯ ಕಚೇರಿ ಮತ್ತು ಮಂಗಳೂರು, ಬೆಂಗಳೂರು, ಬೆಳಗಾವಿಗಳಲ್ಲಿ ಪ್ರಾದೇಶಿಕ ಕಚೇರಿಗಳಿವೆ. ರಾಜ್ಯದಲ್ಲಿ 11,550 ಕೋಟಿ ರೂ. ಠೇವಣಿ ಮತ್ತು 12,473 ಕೋಟಿ ರೂ. ಮುಂಗಡ ಸಾಲ ಸೇರಿದಂತೆ ಒಟ್ಟು 24,023 ಕೋಟಿ ರೂ. ಒಟ್ಟು ವ್ಯವಹಾರವಿದೆ. 5 ಗ್ರಾಮಗಳನ್ನು ದತ್ತು ಸ್ವೀಕರಿಸಿದೆ ಎಂದರು.

ಆಧಾರ್‌ ಸಂಖ್ಯೆ ಆಧಾರಿತ ಮೆಶಿನ್‌
2017- 18ನೇ ಸಾಲಿನಲ್ಲಿ 6350 ಕೋಟಿ ರೂ. ಬಂಡವಾಳ ಶೇಖರಣೆಗೆ ಬ್ಯಾಂಕಿನ ಆಡಳಿತ ಮಂಡಳಿ ಅನುಮತಿ ನೀಡಿದೆ. ಡಿಜಿಟಲೀಕರಣಕ್ಕೆ ಆದ್ಯತೆ ನೀಡಿದ್ದು, ಡಿಜಿಟಲ್‌ ಆಧಾರಿತ ಹಲವಾರು ಹೊಸ ಉತ್ಪನ್ನಗಳನ್ನು ಒದಗಿಸಿದೆ. ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್‌) ಮೆಶಿನ್‌ಗಳ ಜತೆ ಇದೀಗ ಆಧಾರ್‌ ಸಂಖ್ಯೆ ಆಧಾರಿತ ಮೆಶಿನ್‌ಗಳನ್ನು ಬ್ಯಾಂಕು ಪರಿಚಯಿಸುತ್ತಿದೆ. 1.50 ಲಕ್ಷ ಆಧಾರ್‌ ಸಂಖ್ಯೆ ಆಧಾರಿತ ಮೆಶಿನ್‌ಗಳಿಗೆ ಟೆಂಡರ್‌ ವಹಿಸಿ ಕೊಡಲಾಗಿದೆ. ಈ ವ್ಯವಸ್ಥೆಯಲ್ಲಿ ಕಾರ್ಡ್‌ನ ಆವಶ್ಯಕತೆ ಇರುವುದಿಲ್ಲ. ಆಧಾರ್‌ ಸಂಖ್ಯೆ ನೆನಪಿದ್ದರೆ ಸಾಕು. ಆದರೆ ಇಲ್ಲಿ ಬೆರಳಚ್ಚು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತೀ ಶಾಖೆಗೆ 100 ಇಂತಹ ಮೆಶಿನ್‌ಗಳನ್ನು 
ಒದಗಿಸಲಾಗುವುದು ಎಂದರು. ಇದರ ಜತೆಗೆ ಬಯೋ ಮೆಟ್ರಿಕ್‌ ಆಧಾರಿತ ಎಟಿಎಂಗಳನ್ನು ಆರಂಭಿಸಲಾಗುತ್ತದೆ ಎಂದು ವಿವರಿಸಿದರು. 1919ರಲ್ಲಿ ಮುಂಬಯಿ ಮೂಲದ ಈ ಬ್ಯಾಂಕಿನ ಪ್ರಧಾನ ಕಚೇರಿಯನ್ನು ಮಹಾತ್ಮಾ ಗಾಂಧಿ ಉದ್ಘಾಟಿಸಿದ್ದರು.

Advertisement

ಮಂಗಳೂರಿನಲ್ಲಿ 
ವಿದೇಶಿ ವಿನಿಮಯ

ಮಂಗಳೂರಿನಲ್ಲಿ 7 ಶಾಖೆಗಳಿದ್ದು (ನಗರದಲ್ಲಿ 5 ಮತ್ತು ಹೊರವಲಯದಲ್ಲಿ 2) ಇಲ್ಲಿ ವ್ಯವಹಾರವನ್ನು ದುಪ್ಪಟ್ಟು ಮಾಡುವ ಉದ್ದೇಶವಿದೆ. ಇಲ್ಲಿ ರಫ್ತು ಮತ್ತು ವಿದೇಶಿ ವಿನಿಮಯ ವ್ಯವಹಾರಕ್ಕೆ ಬೇಡಿಕೆ ಇರುವುದರಿಂದ ಒಂದು ಶಾಖೆಗೆ ಬಿ ಕೆಟಗರಿ ವಿದೇಶಿ ವಿನಿಮಯ ವ್ಯವಹಾರ ಲೈಸನ್ಸ್‌ ನೀಡಲಾಗುವುದು.
 – ರಾಜ್‌ಕಿರಣ್‌ ರೈ 

Advertisement

Udayavani is now on Telegram. Click here to join our channel and stay updated with the latest news.

Next