Advertisement
ಸಾಮಾನ್ಯವಾಗಿ ಶೈಕ್ಷಣಿಕ ಚಟುವಟಿಕೆ ಆರಂಭವಾದರೂ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ತಲುಪಿರುವುದಿಲ್ಲ. ಈ ಸಮಸ್ಯೆಗೆ ಕಡಿವಾಣ ಹಾಕಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈಗಾಗಲೇ ಸರಕಾರಿ ಶಾಲಾ ಮಕ್ಕಳಿಗೆ ಬೇಕಾದ ಸಮವಸ್ತ್ರದ ಕಾರ್ಯಾದೇಶ ನೀಡಿದ್ದು, ಕೆಲವು ಕಡೆ ಪೂರೈಕೆ ಪ್ರಕ್ರಿಯೆಯೂ ಆರಂಭವಾಗಿದೆ.
ಸಮವಸ್ತ್ರದ ಬಟ್ಟೆಯನ್ನು ಸರಕಾರದಿಂದ ಉಚಿತವಾಗಿ ನೀಡಲಾಗುತ್ತದೆ. ಹೊಲಿಗೆ ವೆಚ್ಚವನ್ನು ಮಕ್ಕಳ ಪೋಷಕರು ಭರಿಸಬೇಕು. ಏಕರೂಪತೆಯ ದೃಷ್ಟಿಯಿಂದ ಎಸ್‌ಡಿಎಂಸಿ ಮೂಲಕ ಹೊಲಿಗೆ ಕಾರ್ಯದ ನಿರ್ವಹಣೆ ಮಾಡಲಾಗುತ್ತದೆ.
Related Articles
1ರಿಂದ 7ನೇ ತರಗತಿ ಬಾಲಕರಿಗೆ ಚಡ್ಡಿ/ಹಾಫ್ಪ್ಯಾಂಟ್ ಮತ್ತು ಶರ್ಟ್, ಬಾಲಕಿಯರಿಗೆ ಸ್ಕರ್ಟ್ ಮತ್ತು ಶರ್ಟ್, 8ರಿಂದ 10ನೇ ತರಗತಿ ಬಾಲಕರಿಗೆ ಫ್ಯಾಂಟ್ ಮತ್ತು ಶರ್ಟ್, ಬಾಲಕಿಯರಿಗೆ ಚೂಡಿದಾರ್ (ಟಾಪ್, ಬಾಟಮ್ ಮತ್ತು ದುಪಟ್ಟಾಕ್ಕೆ ಪ್ರತ್ಯೇಕ ಬಟ್ಟೆ ಇರಲಿದೆ)ಗೆ ಬೇಕಾದಷ್ಟು ಬಟ್ಟೆ ನೀಡಲಾಗಿದೆ. ಶರ್ಟ್, ಪ್ಯಾಂಟ್, ಹಾಫ್ಪ್ಯಾಂಟ್, ಸ್ಕರ್ಟ್, ಚೂಡಿದಾರ್‌ಗೆ ಎಷ್ಟು ಬಟ್ಟೆ ನೀಡಬೇಕು ಎಂಬುದನ್ನು ಇಲಾಖೆಯಿಂದ ಸ್ಪಷ್ಟಪಡಿಸಲಾಗಿದೆ.
Advertisement
ಸಮವಸ್ತ್ರದ ಬಣ್ಣಗಂಡು/ಹೆಣ್ಣು ಮಕ್ಕಳ ಮೇಲಂಗಿ ಲೈಟ್ ಬ್ಲೂ, ಗಂಡು ಮಕ್ಕಳ ಹಾಫ್ ಪ್ಯಾಂಟ್/ ಪ್ಯಾಂಟ್ ನೇವಿ ಬ್ಲೂ, ಹೆಣ್ಣು ಮಕ್ಕಳ ಸ್ಕರ್ಟ್ ನೇವಿ ಬ್ಲೂ, ಚೂಡಿದಾರ ಟಾಪ್ ಹಸುರು, ಕೆಂಪು, ಬಿಳಿ, ಕಪ್ಪು, ಹಳದಿ ಮಿಶ್ರಿತ ಚಕ್ಸ್ ಬಟ್ಟೆ, ಚೂಡಿದಾರ್ ಬಾಟಮ್ ಹಾಗೂ ದುಪಟ್ಟಾ ಹಸುರು ಬಣ್ಣದಿಂದ ಕೂಡಿರಲಿದೆ. ಗುಣಮಟ್ಟ ಪರೀಕ್ಷೆ
ಮಕ್ಕಳಿಗೆ ಗುಣಮಟ್ಟದ ಸಮವಸ್ತ್ರ ನೀಡುತ್ತಿಲ್ಲ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟ ಪರಿಶೀಲನೆಗೆ ಪ್ರತೀ ತಾಲೂಕಿನಿಂದಲೂ ಎಲ್ಲ ಮಾದರಿಯ ಒಂದು ಸೆಟ್ ಬಟ್ಟೆಯನ್ನು ಕೇಂದ್ರ ಕಚೇರಿಗೆ ಪಡೆಯಲಾಗುತ್ತದೆ. ಕೇಂದ್ರ ಕಚೇರಿಯಲ್ಲೇ ಗುಣಮಟ್ಟ ಪರಿಶೀಲಿಸಿ, ಕಳಪೆ ಕಂಡು ಬಂದಲ್ಲಿ ನಿರ್ದಿಷ್ಟ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ. ಅಧಿಕೃತ ಮಾಹಿತಿ ಇಲ್ಲದೆ ಹಿಂದಿನ ದಾಸ್ತಾನುಗಳನ್ನು ವಿತರಿಸುವಂತಿಲ್ಲ ಎಂಬ ನಿರ್ದೇಶನವನ್ನು ಇಲಾಖೆಯಿಂದ ಅಧಿಕಾರಿಗಳಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ನೀಡಲಾಗಿದೆ. 2023-24ನೇ ಸಾಲಿನ ವಿದ್ಯಾರ್ಥಿಗಳಿಗೆ ಬೇಕಾದ ಪಠ್ಯಪುಸ್ತಕ ಈಗಾಗಲೇ ಶಾಲೆ ತಲುಪಿದೆ. ಕೆಲವೊಂದು ಶಾಲೆಗಳಲ್ಲಿ ಪುಸ್ತಕ ವಿತರಣೆ ಪ್ರಕ್ರಿಯೆಯೂ ಆರಂಭವಾಗಿದೆ. ಸಮವಸ್ತ್ರ ವಿತರಣೆ ಇನ್ನಷ್ಟೇ ಆರಂಭವಾಗಬೇಕಿದೆ. ಎಲ್ಲ ಮಕ್ಕಳಿಗೂ ಶೈಕ್ಷಣಿಕ ವರ್ಷದ ಆರಂಭದಲ್ಲೇ ಸಮವಸ್ತ್ರ, ಪಠ್ಯಪುಸ್ತಕ ಸಿಗಲಿದೆ.
– ಗಣಪತಿ ಕೆ., ಡಿಡಿಪಿಐ ಉಡುಪಿ – ರಾಜು ಖಾರ್ವಿ ಕೊಡೇರಿ