Advertisement

ಕೈಗಾರಿಕೆಗಳಿಗೆ ಏಕರೂಪದ ತೆರಿಗೆ ನೀತಿ ಶೀಘ್ರ: ಜಗದೀಶ್‌ ಶೆಟ್ಟರ್‌

11:14 PM Dec 21, 2019 | Lakshmi GovindaRaj |

ಬೆಂಗಳೂರು: ನಗರ ಪ್ರದೇಶಗಳಿಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರಕಾರದ ಕೈಗಾರಿಕೆಗಳಿಗೆ ಏಕರೂಪದ ತೆರಿಗೆ ಸಂಗ್ರಹಿಸುವ ಸಂಬಂಧ ಹೊಸ ನೀತಿ ರೂಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದರು.

Advertisement

ಗ್ರಾಮ ಪಂಚಾಯ್ತಿ, ಪುರಸಭೆ, ನಗರಸಭೆ, ಕಾರ್ಪೋರೇಷನ್‌ಗಳ ಮೂಲಕ ತೆರಿಗೆ ಸಂಗ್ರಹಕ್ಕೆ ಇರುವ ಕ್ರಮಗಳಲ್ಲಿ ಬಹಳಷ್ಟು ಗೊಂದಲಗಳಿವೆ. ಇವುಗಳನ್ನು ಸರಿಪಡಿಸುವಂತೆ ಉದ್ಯಮಿಗಳು ಮತ್ತು ಕೈಗಾರಿಕಾ ಸಂಸ್ಥೆಗಳು ಹಲವು ಬಾರಿ ಮನವಿ ಸಲ್ಲಿಸಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಏಕರೂಪದ ತೆರಿಗೆ ಸಂಗ್ರಹ ನೀತಿ ರೂಪಿಸಲು ಸರಕಾರ ಮುಂದಾಗಿದೆ. ಕೈಗಾರಿಕಾ ಅಭಿವೃದ್ದಿಗೆ ಅಗತ್ಯ ಸವಲತ್ತುಗಳನ್ನು ನೀಡಲಿಕ್ಕೂ ಇದು ಅನುಕೂಲ ಆಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಷ್ಟೋ ಕಡೆ ಕೆಎಸ್‌ಎಸ್‌ಐಡಿಸಿ ಹಾಗೂ ಕೆಎಫ್ಡಿಬಿ ಮೂಲಕ ಅಭಿವೃದ್ದಿಪಡಿಸಿದ ಕೈಗಾರಿಕಾ ವಸಾಹತುಗಳು ಅಧಿಕೃತವಾಗಿ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಆಗದಿದ್ದರೂ, ಉದ್ದಿಮೆಗಳಿಂದ ತೆರಿಗೆ ಸಂಗ್ರಹ ಮಾಡುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಉನ್ನತ ಮಟ್ಟದ ಸಭೆಯಲ್ಲಿ ವ್ಯಕ್ತವಾಯಿತು. ಈ ಬಗ್ಗೆ ಕೂಲಂಕುಷ ಚರ್ಚೆ ನಡೆದಿದ್ದು, ಸದ್ಯದಲ್ಲೇ ಸಚಿವ ಸಂಪುಟದ ಮುಂದೆ ಹೊಸ ತೆರಿಗೆ ಆಕರಣೆ ಕುರಿತು ಪ್ರಸ್ತಾಪ ಮಂಡಿಸಲಾಗುವುದು ಎಂದು ಹೇಳಿದರು.

ಶೀಘ್ರ ಹೊಸ ಕೈಗಾರಿಕಾ ನೀತಿ: ಇದಲ್ಲದೆ, ರಾಜ್ಯದ ಹೊಸ ಕೈಗಾರಿಕಾ ನೀತಿ ಅಂತಿಮ ಹಂತದಲ್ಲಿದ್ದು, ಈಗಾಗಲೇ ಹಲವಾರು ಬಾರಿ ಕೈಗಾರಿಕೋದ್ಯಮಿಗಳು ಹಾಗೂ ಕೈಗಾರಿಕಾ ಸಂಘ-ಸಂಸ್ಥೆಗಳ ಜತೆ ಕೂಲಂಕುಷ ಚರ್ಚೆ ಮಾಡಲಾಗಿದೆ. ಆದಷ್ಟು ಬೇಗ ಅಗತ್ಯ ಇಲಾಖೆಗಳ ಒಪ್ಪಿಗೆ ಪಡೆದುಕೊಳ್ಳಲಾಗುವುದು. ನಂತರ, ಸಚಿವ ಸಂಪುಟದ ಮುಂದೆ ಇದನ್ನು ತರಲಾಗುವುದು ಎಂದು ಶೆಟ್ಟರ್‌ ತಿಳಿಸಿದರು.

2ನೇ ಹಂತದ ನಗರಗಳಲ್ಲಿ ಕೈಗಾರಿಕೆ ಅಭಿವೃದ್ಧಿ: ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು, ಇದರ ಮೊದಲ ಹಂತವಾಗಿ “ಇನ್‌ವೆಸ್ಟ್‌ ಕರ್ನಾಟಕ- ಹುಬ್ಬಳ್ಳಿ’ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಫೆಬ್ರವರಿ ಎರಡನೇ ವಾರದಲ್ಲಿ ಇದು ನಡೆಯಲಿದ್ದು, ಮುಂದಿನ ಹಂತದಲ್ಲಿ ಬೆಳಗಾವಿ, ಕಲಬುರಗಿ, ಮೈಸೂರು, ದಾವಣಗೆರೆ, ಮಂಗಳೂರು, ಹಾಸನ ಹಾಗೂ ಶಿವಮೊಗ್ಗ ಸೇರಿದಂತೆ ಮತ್ತಿತರ ನಗರಗಳಲ್ಲಿ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.

Advertisement

ಕೈಗಾರಿಕಾಭಿವೃದ್ದಿಯಲ್ಲಿ ಹಿಂದು ಳಿದ ಜಿಲ್ಲೆಗಳಲ್ಲಿ ಹೂಡಿಕೆ ಮಾಡಲು ಮುಂದಾಗುವ ಉದ್ಯಮಿಗಳಿಗೆ ರಿಯಾಯಿತಿ ನೀಡಲು ಚಿಂತನೆ ನಡೆದಿದೆ ಎಂದ ಅವರು, ಜನವರಿಯಲ್ಲಿ ನಡೆಯಬೇಕಾಗಿದ್ದ ಜಾಗತಿಕ ಹೂಡಿಕೆದಾರರ ಸಮಾ ವೇಶ (ಜಿಮ್)ದ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಹದಾಯಿ; ರಾಜ್ಯಕ್ಕೆ ಸಿಹಿ ಸುದ್ದಿ ಬರಲಿದೆ
ಬೆಂಗಳೂರು: ಮಹಾದಾಯಿ ವಿಚಾರವಾಗಿ ಶೀಘ್ರದಲ್ಲೇ ರಾಜ್ಯಕ್ಕೆ ಸಿಹಿ ಸುದ್ದಿ ಬರಲಿದೆ ಎಂದು ಶೆಟ್ಟರ್‌ ಸುಳಿವು ನೀಡಿದರು. ಮಹಾದಾಯಿ ವಿವಾದ ಬಗೆಹರಿಸಲು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಆಸಕ್ತಿ ತೋರಿಸಿದ್ದಾರೆ. ಶೀಘ್ರ ಈ ವಿಚಾರದಲ್ಲಿ ಸಿಹಿ ಸುದ್ದಿ ಕೊಡುವುದಾಗಿಯೂ ಹೇಳಿದ್ದಾರೆ. ಮಹದಾಯಿ ವಿಚಾರವಾಗಿ ಈಗಾಗಲೇ ನೀಡಿರುವ ತೀರ್ಪಿನನ್ವಯ ಅದನ್ನು ಅನುಷ್ಠಾನ ಮಾಡಲಾಗುವುದು ಎಂದು ಶನಿವಾರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next