ಪಿರಿಯಾಪಟ್ಟಣ: ರಾಷ್ಟ್ರದಲ್ಲಿ ಏಕರೀತಿಯ ಶಿಕ್ಷಣ ನೀತಿ ಜಾರಿಯಾದಾಗ ಮಾತ್ರ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ. ವಿಜಯ್‌ಕುಮಾರ್ ಅಭಿಪ್ರಾಯಪಟ್ಟರು. ಅವರು ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶ್ರೀಮಂತರಿಗೆ ಒಂದು ರೀತಿ ಹಾಗೂ ಬಡವರಿಗೆ ಒಂದು ರೀತಿಯ ಶಿಕ್ಷಣ ದೊರೆಯುತ್ತಿರುವುದು ಅಸಮಾನತೆಗೆ ಕಾರಣವಾಗಿದೆ. ಗ್ರಾಮೀಣ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಯಿರುವುದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಹೆಣ್ಣು ಮಕ್ಕಳಿಗೆ ಸರ್ಕಾರಿ ಉದ್ಯೋಗ ಗಳಲ್ಲಿ ವಿಪುಲ ಅವಕಾಶಗಳಿದ್ದು, ಪ್ರೌಢಶಾಲಾ ಹಂತದಿಂದಲೇ ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ತಮ್ಮ ಗುರಿಯನ್ನು ಸಾಧಿಸಬೇಕು. ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರು ವಿಧ್ಯಾರ್ಥಿನಿಯರಿಗೆ ಆದರ್ಶವಾಗಬೇಕಿದೆ ಎಂದು ಹೇಳಿದ ವಿಜಯ್‌ಕುಮಾರ್, ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ಕಿತ್ತೂರು ರಾಣಿ ಚನ್ನಮ್ಮ ಹೆಸರಿನಲ್ಲಿ 5000 ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ಬಿಇಒ ಆರ್. ಕರಿಗೌಡ, ಪುರಸಭಾ ಅಧ್ಯಕ್ಷ ವೇಣುಗೋಪಾಲ್ ಮತ್ತು ಪ್ರಾಂಶುಪಾಲೆ ನಾಗಮ್ಮ ಮಾತನಾಡಿದರು. ಎಸ್‌ಕೆಎಸ್‌ಟಿ ಪ್ರೌಢಶಾಲೆಯ ಪ್ರಾಂಶುಪಾಲೆ ಲೀಲಾವತಿ, ಎಸ್‌ಡಿಎಂಸಿ ಅಧ್ಯಕ್ಷ ಸತೀಶ್, ಉಪಾಧ್ಯಕ್ಷೆ ಕವಿತಾ, ಎಪಿಎಂಸಿ ಸದಸ್ಯ ಮೋಹನ್ ಕುಮಾರ್, ಸದಸ್ಯರಾದ ಕುಮಾರ್, ರಾಜ ಶೇಖರ್, ಶಿವಣ್ಣ, ಪದ್ಮ, ರತ್ನಮ್ಮ, ಯಶೋಧ, ವೆಂಕಟೇಶ್, ಮುಖಂಡರಾದ ಕಾಂತರಾಜು, ಶಿಕ್ಷಕರಾದ ಶಿವಣ್ಣ, ಸುಜಾತ, ಪೋಷಕರು ಹಾಜರಿದ್ದರು.