Advertisement

ಮಾಲಿನ್ಯ ತಡೆಗೆ ಏಕೀಕೃತ ಭೂಸಾರಿಗೆ ಪ್ರಾಧಿಕಾರ

12:58 PM Aug 16, 2018 | Team Udayavani |

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ, ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯಕ್ಕೆ ತುರ್ತು ಪರಿಹಾರ ಕೈಗೊಳ್ಳುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನನ್ನ ಅಧ್ಯಕ್ಷತೆಯಲ್ಲಿ “ಏಕೀಕೃತ ಭೂಸಾರಿಗೆ ಪ್ರಾಧಿಕಾರ’ ರಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

Advertisement

ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ 72ನೇ ಸ್ವಾತಂತ್ರೋತ್ಸವ ದಿನಾಚರಣೆಯ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಯನ್ನುದ್ದೇಶಿಸಿ ಮುಖ್ಯಮಂತ್ರಿಗಳು ಮಾಡಿದ ಭಾಷಣದಲ್ಲಿ ಏಕೀಕೃತ ಭೂಸಾರಿಗೆ ಪ್ರಾಧಿಕಾರ ರಚನೆಯ ಬಗ್ಗೆ ಪ್ರಸ್ತಾಪಿಸಿದರು.

ಪರಿಸರ ಮಾಲಿನ್ಯ ಸಮಸ್ಯೆ ನಿವಾರಣೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಸಾರ್ವಜನಿಕ ಸಾರಿಗೆ ಬಳಕೆ-ಪರಿಸರ ಸಂರಕ್ಷಣೆಗೆ ನಾವು ನೀಡಬಹುದಾದ ಬಹುದೊಡ್ಡ ಕಾಣಿಕೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉತ್ತಮಪಡಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ.

ವಿಶೇಷವಾಗಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯಕ್ಕೆ ತುರ್ತು ಪರಿಹಾರ ಕೈಗೊಳ್ಳುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನನ್ನ ಅಧ್ಯಕ್ಷತೆಯಲ್ಲಿ “ಏಕೀಕೃತ ಭೂಸಾರಿಗೆ ಪ್ರಾಧಿಕಾರ’ ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ಬಿಎಂಸಿಟಿಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಬಳಕೆ ಒಂದು ಹೊಸ ಹೆಜ್ಜೆಯಾಗಿದೆ ಎಂದರು.

ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಮೆಟ್ರೋ 2ನೇ ಹಂತ, ಫೆರಿಫೆರಲ್‌ ರಿಂಗ್‌ ರೋಡ್‌, ಉಪ ನಗರ ರೈಲು ಯೋಜನೆಗಳನ್ನು ಶೀಘ್ರವಾಗಿ ಸಾಕಾರಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಬೆಂಗಳೂರಿನ ಕೆರೆಗಳ ಸಂರಕ್ಷಣೆ, ವೈಜ್ಞಾನಿಕ ಕಸ ವಿಲೇವಾರಿ ಕುರಿತೂ ಸಹ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಬೆಂಗಳೂರಿಗೆ ವಿಶ್ವದರ್ಜೆಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕಾದದ್ದು ಸರ್ಕಾರದ ಮುಂದಿರುವ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಇರುವ ತೊಡಕುಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲಾಗುತ್ತಿದೆ ಎಂದರು.

Advertisement

ಕ್ರೀಡಾಸಾಧಕರಿಗೆ ಸನ್ಮಾನ: ಮೌಂಟ್‌ಎವರೆಸ್ಟ್‌ ಏರಿಸಿದ ಸಾಹಸಿ ಅರಣ್ಯ ರಕ್ಷಕ ಸಿ.ವಿಕ್ರಮ್‌, ಕಾಮನ್‌ವೆಲ್ತ್‌ ಗೇಮ್‌ನಲ್ಲಿ ಬೆಳ್ಳಿ ಪದಕ ಪಡೆದ ಪಿ.ಗುರುರಾಜ್‌ ಹಾಗೂ ಬ್ಯಾಡ್ಮಿಂಟನ್‌ ತಾರೆ ಅಶ್ವಿ‌ನಿ ಪೊನ್ನಪ್ಪ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸನ್ಮಾನಿಸಿದರು.

ಹಸಿರು ಕರ್ನಾಟಕ ಯೋಜನೆಗೆ ಚಾಲನೆ: ಮನೆಗೊಂದು ಮರ, ಊರಿಗೊಂದು ವನ ನಿರ್ಮಿಸುವ ಕಾರ್ಯಕ್ರಮವಾದ ಹಸಿರು ಕರ್ನಾಟಕ ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿ, ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು. ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್‌, ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಮೊದಲಾದ ಅಧಿಕಾರಿಗಳಿಗೆ ಮತ್ತು ಶಾಲಾ ಮಕ್ಕಳಿಗೆ ಸಸಿ ವಿತರಿಸಿದರು.

“ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನಲ್ಲಿ ನಡೆಯುವ “ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನ ಈಗಾಗಲೇ ವಿಶ್ವದ ಗಮನ ಸೆಳೆದಿದೆ. ಈ ಪ್ರತಿಷ್ಠಿತ ಪ್ರದರ್ಶನದ ಸ್ಥಳಾಂತರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರಧಾನಮಂತ್ರಿ ಹಾಗೂ ಕೇಂದ್ರ ರಕ್ಷಣಾ ಸಚಿವರಿಗೆ ನಾನು ಪತ್ರ ಬರೆದಿದ್ದೇನೆ. ಸಾರ್ವಜನಿಕ ಅಭಿಪ್ರಾಯಕ್ಕೆ ಕೇಂದ್ರ ಸ್ಪಂದಿಸುವ ನಿರೀಕ್ಷೆ ನನ್ನದು’.
-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ. 

Advertisement

Udayavani is now on Telegram. Click here to join our channel and stay updated with the latest news.

Next