Advertisement

Kundapura: ಚುನಾವಣ ಅಕ್ರಮ ತಡೆಗೆ ಕಡಲಿನಲ್ಲೂ ಕಣ್ಗಾವಲು

10:15 AM Mar 30, 2024 | Team Udayavani |

ಕುಂದಾಪುರ: ಸಮುದ್ರ ಮಾರ್ಗವಾಗಿಯೂ ಚುನಾವಣ ಅಕ್ರಮಗಳನ್ನು ಎಸಗುವ ಸಾಧ್ಯತೆ ಇರುವುದರಿಂದ ರಾಜ್ಯದ ಕರಾವಳಿ ಕಾವಲು ಪಡೆಯು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ನಿಗಾ ವಹಿಸಿದೆ. ಕರಾವಳಿಯ 3 ಜಿಲ್ಲೆಗಳ 320 ಕಿ.ಮೀ. ವ್ಯಾಪ್ತಿಯಲ್ಲಿ 13 ಬೋಟ್‌ಗಳಲ್ಲಿ ದಿನಕ್ಕೆ ಕನಿಷ್ಠ 4 ಗಂಟೆ ಗಸ್ತು (ಪ್ಯಾಟ್ರೋಲಿಂಗ್‌) ನಡೆಸಲಾಗುತ್ತಿದೆ.

Advertisement

ರಸ್ತೆ ಮಾರ್ಗವಾಗಿ ಮಾತ್ರವಲ್ಲದೆ ಸಮುದ್ರದ ಮೂಲಕವೂ ಮತದಾರರಿಗೆ ಕೊಡಲು ಹಣ, ಮದ್ಯ, ಇನ್ನಿತರ ಉಡುಗೊರೆ ಗಳನ್ನು ಸಾಗಿಸುವ ಸಾಧ್ಯತೆ ಇರುವುದರಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರಾವಳಿ ಕಾವಲು ಪಡೆಯ ಪೊಲೀಸರು ಕಡಲಿನಲ್ಲಿ ಮುಂಜಾಗ್ರತೆ ವಹಿಸಿದ್ದಾರೆ.

ರ್‍ಯಾಂಡಮ್‌ ತಪಾಸಣೆ: ಕರಾವಳಿಯ 3 ಜಿಲ್ಲೆಗಳಲ್ಲಿ 115 ಅಧಿಕೃತ ಹಾಗೂ 44 ಅನಧಿಕೃತ ಮೀನು ಇಳಿಸುವ ತಂಗುದಾಣಗಳಿವೆ. ಇಲ್ಲಿಗೆ ಬರುವ ಬೋಟು, ದೋಣಿಗಳ ಮೇಲೆ ನಿಗಾ ಇಡಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ 29, ಉಡುಪಿಯಲ್ಲಿ 34 ಹಾಗೂ ಉ.ಕ.ದಲ್ಲಿ 96 ಫಿಶ್‌ ಲ್ಯಾಂಡಿಂಗ್‌ ಪಾಯಿಂಟ್‌ ಗಳಿವೆ. ಮಂಗಳೂರು, ಮಲ್ಪೆ, ಗಂಗೊಳ್ಳಿ, ಮರವಂತೆ, ಹೆಜಮಾಡಿ, ಶಿರೂರು, ಕಾರವಾರ, ಹೊನ್ನಾವರ, ಭಟ್ಕಳ, ಬೇಲೆಕೇರಿ, ತದಡಿ ಪ್ರಮುಖವಾಗಿವೆ. ಇದಿಷ್ಟೇ ಅಲ್ಲದೆ ಸಮುದ್ರದಲ್ಲಿ ಗಸ್ತು ತಿರುಗುವ ಕರಾವಳಿ ಕಾವಲು ಪಡೆಯ ಪೊಲೀಸರು ಸಹ ರ್‍ಯಾಂಡಮ್‌ ಆಗಿ ಬೋಟು, ದೋಣಿಗಳನ್ನು ತಪಾಸಣೆ ಮಾಡುತ್ತಿದ್ದಾರೆ.

13 ಬೋಟ್‌ಗಳಿಂದ ನಿತ್ಯ ಗಸ್ತು

ಒಟ್ಟು 12 ಕರಾವಳಿ ಕಾವಲು ಪಡೆ ಠಾಣೆಗಳ ದ.ಕ. 1, ಉಡುಪಿ 3 ಹಾಗೂ ಉ.ಕ.ದಲ್ಲಿ 9 ಸೇರಿ ಒಟ್ಟು 13 ಬೋಟುಗಳಿವೆ. ಮಲ್ಪೆಯಲ್ಲಿ ಮಾತ್ರ ಹೆಚ್ಚುವರಿ ಬೋಟಿದೆ. ಕಾಸರಗೋಡು ಗಡಿಯಿಂದ ಕಾರವಾರದವರೆಗಿನ ರಾಜ್ಯದ 320 ಕಿ.ಮೀ. ಕರಾವಳಿಯಲ್ಲಿ ನಿತ್ಯ ದಿನದಲ್ಲಿ 4 ಗಂಟೆ ಕರಾವಳಿ ಕಾವಲು ಪಡೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

Advertisement

ಗೋವಾದಿಂದ ಮದ್ಯ ಸಾಗಾಟ ಪತ್ತೆ

ಚುನಾವಣ ನೀತಿ ಸಂಹಿತೆ ಆರಂಭವಾದ ಬಳಿಕ ಸಮುದ್ರದಲ್ಲಿ ಅಕ್ರಮ ಎಸಗಿರುವ ಮೊದಲ ಪ್ರಕರಣ ಎರಡು ದಿನದ ಹಿಂದೆ ಪತ್ತೆಯಾಗಿದೆ. ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಬೋಟನ್ನು ಕಾರವಾರದಲ್ಲಿ ಕಾವಲು ಪಡೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳೆದ ಬಾರಿಯೂ ಕಾರವಾರದಲ್ಲಿ ಬೋಟ್‌ ಮೂಲಕ ಅಕ್ರಮವಾಗಿ ಮದ್ಯ ಸಾಗಾಟ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ಫಿಶ್‌ ಲ್ಯಾಂಡಿಂಗ್‌ ಪಾಯಿಂಟ್‌ ಗಳಲ್ಲಿ ನಿತ್ಯವೂ ನಿಗಾ ವಹಿಸಲಾಗುತ್ತಿದೆ. ಇದಲ್ಲದೆ ಸಮುದ್ರದಲ್ಲಿ ಗಸ್ತು ತಿರು ಗುವ ವೇಳೆಯೂ ರ್‍ಯಾಂಡಮ್‌ ತಪಾಸಣೆಯೂ ಮಾಡ ಲಾಗುತ್ತಿದೆ. ಗೋವಾ ಗಡಿ ಭಾಗದಲ್ಲಿ ಮಾತ್ರ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ನಿತ್ಯ ಪ್ಯಾಟ್ರೋಲಿಂಗ್‌ ಮಾಡಲಾ ಗುತ್ತಿದೆ. – ಮಿಥುನ್‌ ಎಚ್‌.ಎನ್‌. ಕರಾವಳಿ ಕಾವಲು ಪಡೆ ಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next