Advertisement
ಕೋವಿಡ್ ನಿಂದಾಗಿ ವಿಶ್ವಾದ್ಯಂತ ನಿಯಮಿತ ಸ್ವಾಸ್ಥ್ಯ ಸೇವೆಗಳಿಗೆ ತೊಂದರೆಯಾಗಿರುವುದರಿಂದ, ಐದು ವರ್ಷಕ್ಕೂ ಕಡಿಮೆ ವಯೋಮಾನದ ಮಕ್ಕಳಲ್ಲಿನ ಮರಣ ಪ್ರಮಾಣ ವಿಪರೀತ ಹೆಚ್ಚಾಗಲಿದೆ.
Related Articles
Advertisement
ಅನೇಕ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಚಿಕಿತ್ಸಾ ವಿಭಾಗಗಳನ್ನೇ ಬಂದ್ ಮಾಡಲಾಗಿದೆ. ಸಾಮಾನ್ಯ ರೋಗಿಗಳನ್ನು ನೋಡುವ ಪ್ರಮಾಣ ಬಹಳ ತಗ್ಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಮಕ್ಕಳ ಸ್ವಾಸ್ಥ್ಯ ಮತ್ತು ಪ್ರಸೂತಿಗೆ ಸಂಬಂಧಿಸಿದ ಸೇವೆ ಸಲ್ಲಿಸುವ ಸಿಬಂದಿಯೂ ಕೂಡ ಈಗ ಕೋವಿಡ್ ವಿರುದ್ಧದ ಹೋರಾಟದಲ್ಲಿ ವ್ಯಸ್ತವಾಗಿದ್ದಾರೆ.
ಪ್ರಸೂತಿ ಹಾಗೂ ಮಕ್ಕಳ ಸ್ವಾಸ್ಥ್ಯ ಸೇವೆಯ ವಿಷಯದಲ್ಲಿ ಶ್ರಮಿಸುತ್ತಿದ್ದ ಪ್ರಾಥಮಿಕ ಆರೋಗ್ಯ ವಲಯದ ಸಿಬಂದಿ ಮತ್ತು ಆಶಾ ಕಾರ್ಯಕರ್ತೆಯರೂ ಕೂಡ ಈ ಸಾಂಕ್ರಾಮಿಕದ ವಿರುದ್ಧ ಜಾಗರೂಕತೆ ಮೂಡಿಸುವಲ್ಲಿ ವ್ಯಸ್ತರಾಗಿದ್ದಾರೆ. ಹೀಗಾಗಿ, ಅನೇಕ ಹಳ್ಳಿಗಳಲ್ಲಿ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಮಹಿಳೆಯರು ಅಸುರಕ್ಷಿತ ವಾತಾವರಣದಲ್ಲಿ ಹೆರಿಗೆ ಮಾಡಿಕೊಳ್ಳುತ್ತಿರುವ ಬಗ್ಗೆ ವರದಿಯಾಗುತ್ತಿದೆ.
ಇದಷ್ಟೇ ಅಲ್ಲದೇ, ಮಕ್ಕಳಿಗೆ 5 ವರ್ಷಗಳವರೆಗೆ ನೀಡಲಾಗುವ ಔಷಧ ಹಾಗೂ ಅಗತ್ಯ ಲಸಿಕೆ ಕಾರ್ಯಕ್ಕೂ ಪೆಟ್ಟು ಬಿದ್ದಿದೆ. ಆದಾಗ್ಯೂ, ಈ ಸೌಲಭ್ಯಗಳೆಲ್ಲ ನಿಂತುಹೋಗಿವೆ ಎಂದೇನೂ ಅಲ್ಲ. ಆದರೆ, ಆಸ್ಪತ್ರೆಗಳಿಗೆ, ಆರೋಗ್ಯ ಘಟಕಗಳಿಗೆ ತೆರಳಲು ತಾಯಂದಿರಿ, ಗರ್ಭಿಣಿಯರು ಹಿಂಜರಿಯುತ್ತಿರುವ ಬಗ್ಗೆ ವರದಿಯಾಗುತ್ತಿದೆ.
ಭಾರತದಂಥ ರಾಷ್ಟ್ರಗಳಲ್ಲಿ ಪೌಷ್ಟಿಕತೆಯಿಲ್ಲದೇ, ಅಗತ್ಯ ಸುರಕ್ಷಾ ಕ್ರಮಗಳಿಲ್ಲದೇ, ನಿಯಮಿತ ತಪಾಸಣೆಯಾಗದೆ, ಗರ್ಭಾವಸ್ಥೆಯ ಸಮಯದಲ್ಲಿ ಸರಿಯಾದ ಪೋಷಣೆ ಸಿಗದೇ, ನಿಯಮಿತ ಲಸಿಕೆ ಲಭ್ಯವಾಗದೇ ಅಗಣಿತ ಮಕ್ಕಳು ಮರಣವನ್ನಪ್ಪುತ್ತವೆ.
ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ತಾಯಿ-ಶಿಶು ಮರಣ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆಯಾದರೂ ಸಾಗಬೇಕಾದ ದಾರಿ ತುಂಬಾ ದೊಡ್ಡದಿದೆ. ಇಂಥ ಹೊತ್ತಲ್ಲೇ ಕೋವಿಡ್ ಕಂಟಕ ಎದುರಾಗಿ ಸ್ವಾಸ್ಥ್ಯ ಸೇವೆಗಳಿಗೆ ವಿವಿಧ ಆಯಾಮಗಳಿಂದ ಕಗ್ಗಂಟು ಎದುರಾಗಿರುವುದು ದುರಂತವೇ ಸರಿ.
ಏನೇ ಇದ್ದರೂ ಭಾರತ ಸರಕಾರ, ರಾಜ್ಯ ಸರ್ಕಾರಗಳು, ಆರೋಗ್ಯ ಇಲಾಖೆಗಳು ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಅಗತ್ಯ ಹೆಜ್ಜೆಗಳನ್ನು ತ್ವರಿತವಾಗಿ ಇಡುವಂತಾಗಲಿ.