ಬೆಂಗಳೂರು: ಕಚೇರಿ ಕಟ್ಟಡದ ಪರವಾನಗಿ ನವೀಕರಣ ಮಾಡದೆ ಅದನ್ನು ತೆರವುಗೊಳಿಸುವಂತೆ ಬಿಬಿಎಂಪಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ “ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ’ (ಯುಎನ್‌ಐ) ಸುದ್ದಿ ಸಂಸ್ಥೆ ಪ್ರತಿಭಟನಾರ್ಥವಾಗಿ ಭಾನುವಾರದಿಂದ ತಾತ್ಕಾಲಿಕವಾಗಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಯುಎನ್‌ಐ ಸಂಸ್ಥೆ, ಜಾಗದ ಗುತ್ತಿಗೆ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಕಚೇರಿ ತೆರವು ಮಾಡುವಂತೆ ಬಿಬಿಎಂಪಿ ನಿರಂತರವಾಗಿ ಬೆದರಿಕೆ ಹಾಕುತ್ತಿದೆ. ನಾವಾಗಿಯೇ ತೆರವುಗೊಳಿಸದಿದ್ದರೆ ಖುದ್ದು ತಾವೇ ತೆರವುಗೊಳಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಯುಎನ್‌ಐ ಬೆಂಗಳೂರು ಮುಖಸ್ಥರಿಗೆ ಎಚ್ಚರಿಕೆ ನೀಡಿದ್ದು, “ಇದು ಮಾಧ್ಯಮಗಳ ಮೇಲಿನ ದಾಳಿ’ಎಂದು ಆರೋಪಿಸಿದೆ.
2013ಕ್ಕೆ ಕೊನೆಗೊಳ್ಳಲಿರುವ ಜಮೀನು ಗುತ್ತಿಗೆ ಪರವಾನಗಿ ನವೀಕರಿಸುವಂತೆ ಸತತವಾಗಿ ಮನವಿ ಮಾಡಲಾಗಿದೆ. ಆದರೆ, 2010ರಿಂದ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ, ಈಗ ಸುದ್ದಿ ಸಂಸ್ಥೆಯ ಸ್ಥಳೀಯ ಮುಖ್ಯಸ್ಥರು ಹಾಗೂ ಸಿಬ್ಬಂದಿಗೆ ಕಚೇರಿಯಿಂದ ಹೊರಹಾಕುತ್ತೇವೆ ಎಂದು ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಯಾವುದೇ ನೋಟಿಸ್ ಅಥವಾ ಆದೇಶ ನೀಡದೆ ಅಧಿಕಾರಿಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ಪತ್ರಿಕಾ ವಿರೋಧಿ ಧೋರಣೆ ಪ್ರತಿಭಟಿಸಿ ಕರ್ನಾಟಕದಿಂದ ಸುದ್ದಿಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಯುಎನ್‌ಐ ವ್ಯವಸ್ಥಾಪಕ ಮಂಡಳಿ ನಿರ್ಧರಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಈ ಸಂಬಂಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಇತರ ಹಿರಿಯ ಸಚಿವರು ಸೇರಿ ರಾಜ್ಯ ಸರ್ಕಾರಕ್ಕೆ ಹಲವು ಮನವಿಗಳನ್ನು ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಕಟಣೆಯಲ್ಲಿ ದೂರಲಾಗಿದೆ.
ಬಿಎಸ್‌ವೈ ಖಂಡನೆ: ಯುಎನ್‌ಐ ಸುದ್ದಿ ಸಂಸ್ಥೆಯ ಕಚೇರಿ ಕಟ್ಟಡವನ್ನು ತೆರವುಗೊಳಿಸಲು ಮುಂದಾಗಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತೆರವಿಗೆ 3 ದಿನ ಗಡುವು ನೀಡಿರುವುದು ನಾಚಿಕೆಗೇಡಿನ ಸಂಗತಿ. ಗುತ್ತಿಗೆಯನ್ನು 30 ವರ್ಷ ಮುಂದುವರಿಸಬೇಕು. ಸುದ್ದಿ ಸಂಸ್ಥೆಯ ಕಟ್ಟಡ ಖಾಲಿ ಮಾಡಿಸುವ ಪ್ರಯತ್ನಕ್ಕೆ ಮುಂದಾದರೆ ದೊಡ್ಡ ಮಟ್ಟದ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.