Advertisement

ಅವೈಜ್ಞಾನಿಕ ಕಾಮಗಾರಿ:ಕಿರಿಕಿರಿ

04:09 PM Nov 27, 2017 | Team Udayavani |

ಬಂಗಾರಪೇಟೆ: ಪ್ರತಿಷ್ಠಿತ ಎತ್ತಿನಹೊಳೆ ನೀರಾವರಿ ಯೋಜನೆಯ ಎಸ್‌ಸಿಪಿ ಅನುದಾನದಡಿ ತಾಲೂಕಿನ ಎಸ್ಸಿ, ಎಸ್ಟಿ ಕಾಲೋನಿಗಳಲ್ಲಿ ಮಂಜೂರಾಗಿರುವ ಸಿಮೆಂಟ್‌ ರಸ್ತೆಗಳ ಅನುದಾನ ಅಭಿವೃದ್ಧಿ ಕಾಣದೇ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ(ಕೆಆರ್‌ ಐಡಿಎಲ್‌) ಎಂಜಿನಿಯರ್‌ಗಳ ಜೇಬು ಸೇರುತ್ತಿದೆ. ಅಲ್ಲದೇ, ಕೆಆರ್‌ಐಡಿಎಲ್‌ ಎಂಜಿನಿಯರ್‌ಗಳ ಅವೈಜ್ಞಾನಿಕ ಕಾಮಗಾರಿಯಿಂದ ಗ್ರಾಮಸ್ಥರು ಕಿರಿಕಿರಿ ನುಭವಿಸುವಂತಾಗಿದೆ.

Advertisement

ಎತ್ತಿನಹೊಳೆ ನೀರಾವರಿ ಯೋಜನೆ ವಿಶ್ವೇಶ್ವರಯ್ಯ ಜಲ ನಿಗಮದ ಮೂಲಕ ಪ್ರತಿ ವರ್ಷ 3 ರಿಂದ 4 ಕೋಟಿ ರೂ.
ಅನುದಾನ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗುತ್ತದೆ. ಬಂಗಾರಪೇಟೆ ಕ್ಷೇತ್ರಕ್ಕೆ 2016-17ನೇ ಸಾಲಿಗೆ ಮಂಜೂರಾಗಿದ್ದ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಕೆಆರ್‌ಐಡಿಎಲ್‌ ಸಂಸ್ಥೆಗೆ ವಹಿಸಲಾಗಿತ್ತು. ಆದರೆ, ಕಳಪೆ ಕಾಮಗಾರಿಯಿಂದ ಅನುದಾನ ಪೋಲಾಗುತ್ತಿದೆ.

ಬಂಗಾರಪೇಟೆ ತಾಲೂಕಿನ ಕೇತ ಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಮಾಕಾರ ಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ಅನುದಾನವನ್ನು ಮೀಸಲಿಟ್ಟಿದ್ದು, ಇದರಲ್ಲಿ ಚರಂಡಿ, ಸಿಮೆಂಟ್‌ ರಸ್ತೆ ಮತ್ತು ಮೋರಿಗಳನ್ನು ನಿರ್ಮಾಣ ಮಾಡುವ ಬಗ್ಗೆ ಅಂದಾಜು ಪಟ್ಟಿ ತಯಾರಿಸಿದ್ದರೂ ಕೇವಲ ಶೇ.40 ರಷ್ಟು ಮಾತ್ರ ಚರಂಡಿ ಮತ್ತು ಸಿಮೆಂಟ್‌ ನಿರ್ಮಾಣ ಮಾಡಿ ಮೋರಿ ನಿರ್ಮಾಣ ಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ.

ದುರ್ವಾಸನೆಯಿಂದ ಕಿರಿಕಿರಿ: ತಾಲೂಕಿನ ಮಾಕಾರಹಳ್ಳಿ ಗ್ರಾಮದಲ್ಲಿ ಚರಂಡಿ ನಿರ್ಮಾಣ ಮಾಡಿದ್ದು, ಕಾಮಗಾರಿಯನ್ನು ಗ್ರಾಮದ ಮುಖ್ಯ ಸರ್ಕಲ್‌ಗೆ ಸ್ಥಗಿತಗೊಳಿಸಲಾಗಿದೆ. ಕೊಳಚೆ ನೀರು ಚರಂಡಿಯಲ್ಲಿ ಜಮಾವಣೆಯಾಗಿ ರಸ್ತೆ ಮೇಲೆ ಹರಿಯುತ್ತಿದೆ.ಇದರಿಂದ ಸಾರ್ವಜನಿಕರು ದುರ್ವಾಸನೆಯ ತೊದರೆಯಾಗುತ್ತಿದೆ. 

ಎಂಜಿನಿಯರ್‌ ಬೇಜವಾಬ್ದಾರಿ ಉತ್ತರ: ರಸ್ತೆಗೆ ಚರಂಡಿ ನೀರನ್ನು ಅವೈಜ್ಞಾನಿಕವಾಗಿ ಬಿಟ್ಟಿರುವುದರಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರ ಬಗ್ಗೆ ಸಂಬಂಧಪಟ್ಟ ಜೂನಿಯರ್‌ ಎಂಜಿನಿಯರ್‌ರನ್ನು ಪ್ರಶ್ನಿಸಿದರೆ ಬೇಜವಾಬ್ದಾರಿಉತ್ತರ ನೀಡುತ್ತಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೆಆರ್‌ಡಿಎಲ್‌ ಸಂಸ್ಥೆಯಿಂದ ನಿರ್ವಹಣೆ ಮಾಡಿರುವ ಕಾಮಗಾರಿ ಸಿಮೆಂಟ್‌ ರಸ್ತೆ ಎದ್ದು ಹೋಗುತ್ತಿದೆ. ಚರಂಡಿಯಲ್ಲಿ ಸಿಮೆಂಟ್‌ ಉದುರುತ್ತಿದೆ. ಗ್ರಾಮದಲ್ಲಿ ಕೆಲವು ಕಡೆ ಮಾತ್ರ ಚರಂಡಿ ಕಾಮಗಾರಿ ಮಾಡಿ ಒಂದು ಚರಂಡಿಯಿಂದ ಮತ್ತೂಂದು ಚರಂಡಿಗೆ ಲಿಂಕ್‌ ಕೊಡದ್ದರಿಂದ ಕೊಳಚೆ ನೀರು ದುರ್ವಾಸನೆ ಬೀರುತ್ತಿದೆ.

Advertisement

ಎತ್ತಿನಹೊಳೆ ಯೋಜನೆ ಅಧಿಕಾರಿಗಳು ಈ ಕಾಮಗಾರಿಗಳನ್ನು ನಿರ್ವಹಣೆ ಮಾಡದೇ ಕೆಆರ್‌ಐಡಿಎಲ್‌ ಸಂಸ್ಥೆಗೆ ನೀಡಿರುವುದರಿಂದ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳು ತೀರಾ ಕಳಪೆಯಾಗಿವೆ. ಕಾಮಗಾರಿಯ
ಅಂದಾಜು ಪಟ್ಟಿಯಂತೆ ಕೆಲಸ ಮಾಡದೇ ಕೇವಲ ಅಂದಾಜು ಪಟ್ಟಿಯ ಶೇ.40 ಮಾತ್ರ ಕಾಮಗಾರಿ ಮಾಡಿ ಸರ್ಕಾರದ
ಬೊಕ್ಕಸಕ್ಕೆಗೆ ನಷ್ಟವುಂಟು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಡೀಸಿ ಕ್ರಮ ಕೈಗೊಳ್ಳಲಿ: ಎತ್ತಿನಹೊಳೆ ಯೋಜನೆ ಮೂಲಕ ಮಾಕಾರಹಳ್ಳಿ ಗ್ರಾಮದಲ್ಲಿ ಚರಂಡಿ, ಸಿಮೆಂಟ್‌ ರಸ್ತೆ
ಹಾಗೂ ಎರಡೂ ಕಡೆ ಮೋರಿಗಳನ್ನು ನಿರ್ಮಾಣ ಮಾಡುವ ಬಗ್ಗೆ ಕೆಆರ್‌ ಐಡಿಎಲ್‌ ಅಧಿಕಾರಿಗಳು ಗ್ರಾಮಕ್ಕೆ ಬಂದು
ಅಳತೆ ಮಾಡಿಕೊಂಡು ಹೋಗಿದ್ದರು. ನಂತರ ಗುರುತು ಮಾಡಿದ್ದ ಸ್ಥಳದವರೆಗೂ ಕೆಲಸ ಮಾಡದೇ ಅಲ್ಲಲ್ಲಿ ಅಲ್ಪಸ್ವಲ್ಪ ಕೆಲಸ ಮಾಡಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೀರಾ ತೊಂದರೆಯಾಗಿದೆ.

ನಡು ರಸ್ತೆಯಲ್ಲಿ ಚರಂಡಿ ನೀರು ಬಿಟ್ಟಿರುವುದರಿಂದ ದುರ್ವಾಸನೆ ಬೀರುತ್ತಿದೆ. ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕೇತಗಾನಹಳ್ಳಿ ಗ್ರಾಪಂ ಸದಸ್ಯೆ ಮಾಕಾರಹಳ್ಳಿ ಗ್ರಾಮದ ರತ್ನಮ್ಮ ನಾರಾಯಣಪ್ಪ ಮನವಿ ಮಾಡಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಬಿಟ್ಟು ಉಳಿದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಎತ್ತಿನಹೊಳೆ ಯೋಜನೆಯ ಎಸ್‌ ಸಿಪಿ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ ಸಂಸ್ಥೆಗೆ ವಹಿಸಲಾಗಿದೆ. 2016-17ನೇ ಸಾಲಿನಲ್ಲಿ ಕೈಗೊಂಡಿರುವ ಕಾಮಗಾರಿಗಳ ವರದಿಯನ್ನು ಇನ್ನೂ ನೀಡಿಲ್ಲ. ಕೆಆರ್‌ ಐಡಿಎಲ್‌ ಸಂಸ್ಥೆಯಿಂದ ವರದಿ ಬಂದ ನಂತರ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. 
ಶ್ರೀಕಾಂತ್‌, ಎಇ, ಎತ್ತಿನಹೊಳೆ ಯೋಜನೆ

ಬಂಗಾರಪೇಟೆ ತಾಲೂಕಿನ ಮಾಕಾರಹಳ್ಳಿ ಗ್ರಾಮದಲ್ಲಿ ಅಂದಾಜು ಪಟ್ಟಿಯಂತೆ ಕೆಲಸ ನಿರ್ವಹಿಸುವಂತೆ ಸಂಬಂಧಪಟ್ಟ ಕಿರಿಯ ಅಭಿಯಂತರರಿಗೆ ವಹಿಸಲಾಗಿತ್ತು. ಗ್ರಾಮಸ್ಥರಿಗೆ ಸಮರ್ಪಕವಾಗಿ ಕೆಲಸ ಮಾಡದಿದ್ದಲ್ಲಿ ಕೂಡಲೇ ಎಇಇ ಅಧಿಕಾರಿಗಳನ್ನು ಪರಿಶೀಲನೆ ನಡೆಸಲು ಕಳುಹಿಸಿ ಕ್ರಮಕೈಗೊಳ್ಳಲಾಗುವುದು.
ಆರ್‌.ವಿ.ಮಂಜುನಾಥ್‌, ಇಇ, ಕೆಆರ್‌ಐಡಿಎಲ್‌, ಕೋಲಾರ.

ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next