Advertisement

ಕೆರೆ ಅಭಿವೃದ್ಧಿಗೆ ಅವೈಜ್ಞಾನಿಕ ಮಾರ್ಗ: ಸ್ಥಳೀಯರು ಗರಂ

01:23 PM Aug 07, 2017 | Team Udayavani |

ಬೆಂಗಳೂರು: ಅವೈಜ್ಞಾನಿಕವಾಗಿ ಕೆರೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ಬಿಬಿಎಂಪಿಯ ಕ್ರಮವನ್ನು ಖಂಡಿಸಿ ಕಗ್ಗದಾಸಪುರ ಕೆರೆಯ ಸುತ್ತಮುತ್ತಲಿನ ಭಾಗದ ನಿವಾಸಿಗಳು ಕೆರೆಯಲ್ಲಿ ಹೂಳೆತ್ತುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. 

Advertisement

ಕಗ್ಗದಾಸಪುರ ಕೆರೆಯ ಅಭಿವೃದ್ಧಿಗಾಗಿ ಈಗಾಗಲೇ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಆದರೆ, ಅಧಿಕಾರಿಗಳು ಯೋಜನೆ ವರದಿಯನ್ನು ಬದಿಗಿಟ್ಟು ತಮಗೆ ಇಷ್ಟ ಬಂದ ಹಾಗೆ ಕೆರೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಸುತ್ತಮುತ್ತಲಿನ ಭಾಗಗಳ ನಿವಾಸಿಗಳು ಕೆರೆಯಲ್ಲಿನ ಹೂಳು ಹಾಗೂ ಜೊಂಡು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು. 

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬೈರಸಂದ್ರ ನಿವಾಸಿ ಮಂಜುನಾಥ್‌ ಅವರು, ಕೆರೆಯ ಅಭಿವೃದ್ಧಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈಗಾಗಲೇ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಆದರೆ, ಅಧಿಕಾರಿಗಳು ವರದಿಯಲ್ಲಿ ಅಂಶಗಳನ್ನು ಪಾಲನೆ ಮಾಡದೆ ತಮಗೆ ಬೇಕಾದ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತಿದ್ದು, ಪರಿಸ್ಥಿತಿ ಮುಂದುವರಿಸಿದರೆ ಬೆಳ್ಳಂದೂರು ಕೆರೆಯ ಸ್ಥಿತಿಗೆ ಕಗ್ಗದಾಸಪುರ ಕೆರೆಯೂ ಬರಲಿದೆ ಎಂದು ಆರೋಪಿಸಿದರು. 

ಯಾವುದೇ ಕೆರೆ ಅಭಿವೃದ್ಧಿಪಡಿಸುವ ಮೊದಲಿಗೆ ಕೆರೆಯಲ್ಲಿ ಜೊಂಡು, ಹುಲ್ಲು ಹಾಗೂ ಹೂಳೆತ್ತಿ ದಂಡೆ ರಚಿಸಬೇಕು. ಆದರೆ, ಅಧಿಕಾರಿಗಳು ಕೆರೆಯಲ್ಲಿನ ಹೂಳೆತ್ತುವ ಬದಲಿಗೆ ಬೇರೆ ಕಡೆಯಿಂದ ಮಣ್ಣು ತಂದು ಕೆರೆ ದಂಡೆಯನ್ನು ನಿರ್ಮಿಸಿ ಅಲ್ಲಿ ವಾಕಿಂಗ್‌ ಟ್ರ್ಯಾಕ್‌ ನಿರ್ಮಿಸಲು ಮುಂದಾಗಿದ್ದಾರೆ. ಮೊದಲು ಕೆರೆಯನ್ನು ಸ್ವತ್ಛಗೊಳಿಸಿದ ನಂತರ ಇಂತಹ ಕೆಲಸಗಳಿಗೆ ಅಧಿಕಾರಿಗಳು ಮುಂದಾಗಲಿ ಎಂದು ತಿಳಿಸಿದರು. 

ಕಗ್ಗದಾಸಪುರ ನಿವಾಸಿಯಾಸ ಸುರೇಶ್‌ ಅವರು ಮಾತನಾಡಿ, ಕೆರೆಯಲ್ಲಿ ಈಗಾಗಲೇ ನೊರೆ ಸಮಸ್ಯೆ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇಂತಹ ಸಂದರ್ಭದಲ್ಲಿ ಕೆರೆಯನ್ನು ಸ್ವತ್ಛಗೊಳಿಸಲು ಕ್ರಮಕೈಗೊಳ್ಳುವ ಬದಲಿಗೆ ಅಧಿಕಾರಿಗಳು ಮೇಲ್ನೋಟಕ್ಕೆ ಕಾಣುವ ಕೆರೆಗಳನ್ನು ಮಾಡಲು ಮುಂದಾಗಿರುದು ಖಂಡನೀಯ ಎಂದು ಆರೋಪಿಸಿದ್ದಾರೆ. 

Advertisement

ಭಾನುವಾರ ಸುಮಾರು 50ಕ್ಕೂ ಹೆಚ್ಚು ನಿವಾಸಿಗಳು ಕೆರೆಗೆ ಭೇಟಿ ಕೆರೆಯಲ್ಲಿನ ಜೊಂಡು ತೆರವುಗೊಳಿಸಲು ಮುಂದಾದರು. ಕಳೆದ ಐದು ವಾರಗಳಿಂದ ಇಂತಹ ಕೆಲಸವನ್ನು ಮಾಡಿಕೊಂಡು ಬಂದಿದ್ದು, ಕೆರೆಯನ್ನು ಪ್ರವೇಶಿಸಿಲು ನಿವಾಸಿಗಳೇ ಒಂದು ಬೋಟು ಮಾಡಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next