Advertisement

ಅನ್ನದಾತರ ಹೃದಯ ಶ್ರೀಮಂತಿಕೆ ಅನನ್ಯ

02:42 PM Aug 02, 2018 | |

ಬಸವನಬಾಗೇವಾಡಿ: ಕೇವಲ ಮುತ್ತು, ರತ್ನ, ವಜ್ರ, ಬಂಗಾರ, ಹಣ ಇದ್ದವ ಶ್ರೀಮಂತನಲ್ಲ. ಯಾರ ಬಳಿ ನಿರಂತರವಾಗಿ ಅನ್ನ, ನೀರು ಇರುತ್ತದೆಯೋ ಆತ ನಿಜವಾದ ಶ್ರೀಮಂತ ವ್ಯಕ್ತಿ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Advertisement

ಬುಧವಾರ ಪಟ್ಟಣದ ರಾಧಾಕೃಷ್ಣ ನಗರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ಹಾಗೂ ಮಸಬಿನಾಳ ರಸ್ತೆಯ ಮುಗಳಖೋಡ ಮಠದಲ್ಲಿ ಸಾಮೂಹಿಕ ವಿವಾಹ, ಪ್ರಗತಿಪರ ರೈತರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

ಜಗತ್ತಿನಲ್ಲಿ ಮನುಷ್ಯ, ಪಶು ಪಕ್ಷಿಗಳು ಬದುಕಬೇಕಾದರೆ ಅನ್ನ, ನೀರು ಬೇಕೆ ಹೊರತು ಮುತ್ತು, ರತ್ನ, ವಜ್ರ, ವೈಭವ, ಬೆಳ್ಳಿ, ಬಂಗಾರ, ಹಣ ಇದ್ದರು ಅದರಿಂದ ಬದುಕಿಸಲು ಸಾಧ್ಯವಿಲ್ಲ. ಹೀಗಾಗಿ ನಿರಂತರವಾಗಿ ಬದುಕಿಸುವ ವ್ಯಕ್ತಿಯಾರಾದರು ಇದ್ದರೆ ಆತನೆ ಅನ್ನದಾತ ರೈತ ಎಂದು ಹೇಳಿದರು.

ಜಗತ್ತಿಗೆ ಅನ್ನ ನೀಡುವ ರೈತ ಈ ಜಗತ್ತನ್ನು ಮುನ್ನಡೆಸಿಕೊಂಡು ಹೋಗುತ್ತಾನೆ ಹೊರತು ಈ ದೇಶವನ್ನು ಜಗತ್ತನ್ನು ಆಳುವ ರಾಜ್ಯ ಮಹಾರಾಜರಲ್ಲ.ಯಾಕೆಂದರೆ ರೈತನು ಬೇವರು ಸುರಿಸಿ ಭೂಮಿ ಮಡಿಲನ್ನು ತುಂಬಿದಾಕ್ಷಣ ಇಡಿ ಜಗತ್ತಿನಲ್ಲಿನ ಮನುಷ್ಯ, ಪಶು ಪಕ್ಷಿಗಳು ಬದುಕಲು ಸಾಧ್ಯವಾಗುತ್ತದೆ. ಒಂದು ವೇಳೆ ಆ ರೈತ ಕೈ ಕಟ್ಟಿ ಕುಳಿತರೆ ಇಡಿ ಜಗತ್ತಿನಲ್ಲಿ ಇರುವ ಮನುಷ್ಯ, ಪ್ರಾಣಿ ಪಕ್ಷಿಗಳು ಕೂಡಾ ಬದುಕಲು ಸಾಧ್ಯವಿಲ್ಲ ಎಂದರು.

ಜಗತ್ತಿನಲ್ಲಿ ಸಂಪತ್ತು ಕೇವಲ ಎರಡು ಜಾಗೆಗಳಲ್ಲಿ ಮಾತ್ರ ಸಿಗುತ್ತದೆ. ಒಂದು ಭೂಮಿಯಲ್ಲಿ ಸಂಪತ್ತು ಸಿಗುತ್ತದೆ. ಇನ್ನೊಂದು ಭೂಮಿ ತಾಯಿಯೊಂದಿಗೆ ನಿರಂತರವಾಗಿ ಕಾರ್ಯ ನಿರ್ವಹಿಸುವ ರೈತನ ಹೃದಯದಲ್ಲಿ ಸಿಗುತ್ತದೆ. ಹೀಗಾಗಿಯೇ ಇಂದು ಜಗತ್ತು ಸುಂದರ ಸುಖಮಯವಾಗಿ ಸಾಗಲು ಸಾಧ್ಯವಾಗಿದೆ. ಜಗತ್ತಿನ ರಕ್ಷಣೆ ಮಾಡುವವನು ರೈತ. ರೈತನನ್ನು ರಕ್ಷಣೆ ಮಾಡುವವನು ದೇವರು ಎಂದು ಹೇಳಿದರು.

Advertisement

ಸಾನ್ನಿಧ್ಯ ವಹಿಸಿದ್ದ ಪಟ್ಟಣದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ, ರೈತರಿಗೆ ಆರ್ಥಿಕ ಶಕ್ತಿ ಬೇಕು,
ಅಂದಾಗ ಮಾತ್ರ ರೈತರು ಮುಂದೆ ಬರಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸರಕಾರಗಳು ಮತ್ತು ಸಹಕಾರಿ ಸಂಘ ಸಂಸ್ಥೆಗಳು ಸಕಾಲದಲ್ಲಿ ರೈತರಿಗೆ ಸಾಲ, ಬೀಜ, ಗೊಬ್ಬರ, ನೀರು, ವಿದ್ಯುತ್‌ ಪೂರೈಸಿದರೆ ರೈತರಿಗೆ ಬಲ ನೀಡಿದಂತಾಗುತ್ತದೆ ಎಂದರು. 

ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಸಮ್ಮುಖ ವಹಿಸಿದ್ದರು. ಜಂಬಲದಿನ್ನಿ ಶ್ರೀಗಳು, ಸಹಕಾರಿ ಮಹಾಮಂಡಳಿ ನಿರ್ದೇಶಕ
ಶಿವನಗೌಡ ಬಿರಾದಾರ, ಜಿ.ಟಿ. ಗಜ್ಜಿ, ಡಿಸಿಸಿ ಬ್ಯಾಂಕ್‌ ಅಧಿಕಾರಿ ಅಲ್ಲಾಬಾಕ್‌ ವಿಜಯಪುರ, ಕೆ.ಬಿ. ರಾಜಣ್ಣ, ಪಿ.ಬಿ. ಕಾಳಗಿ, ವಿ.ಪಿ. ನಾಯಕ, ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, ನಿರ್ದೇಶಕರಾದ ಸುರೇಶ ನಾಯಕ, ನಿಂಗಪ್ಪ ಅವಟಿ, ಸಿದ್ದರಾಮಪ್ಪ ಕೂಳಗೇರಿ, ಮಹಾಂತೇಶ ಹಾರಿವಾಳ, ಮಲ್ಲೇಶಿ ಕಡಕೊಳ, ಶ್ರೀಶೈಲ ಪರಮಗೊಂಡ, ಈರಣ್ಣ ವಂದಾಲ, ಗಂಗು ಕಡಲಿಮಟ್ಟಿ, ಮಹಾದೇವಿ ಮೈಲೇಶ್ವರ ಸೇರಿದಂತೆ ಅನೇಕರು ಇದ್ದರು.

ಪಿಕೆಪಿಎಸ್‌ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಪ್ರಾಸ್ತಾವಿಕ ಮಾತನಾಡಿದರು. ವ್ಯವಸ್ಥಾಪಕ ಪ್ರವೀಣ ಚಿಕ್ಕೊಂಡ ಸ್ವಾಗತಿಸಿದರು. ಶಿಕ್ಷಕ ಅಶೋಕ ಹಂಚಲಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next