ಶಹಾಬಾದ: ಮಳೆ ಅಭಾವದಿಂದ ಬೆಂದಿದ್ದ ಜನತೆಗೆ ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ ಹರ್ಷ ತರಿಸಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ನಗರದ ನದಿ, ಹಳ್ಳ, ಕೆರೆಗಳಲ್ಲಿ ನೀರು ಬರಲು ಪ್ರಾರಂಭಿಸಿದೆ. ಸೋಮವಾರದಿಂದ ಶುರುವಾದ ಮಳೆ ಎಡೆ ಬಿಡದೇ ಸುರಿಯುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಮೋಡ ಮುಸುಕಿದ ವಾತಾವರಣವಿತ್ತು. ಆದರೆ ಮಳೆ ಆಗದೆ ಕುಡಿಯಲು ನೀರಿಲ್ಲದೆ, ದನಕರುಗಳಿಗೆ
ಮೇವಿಲ್ಲದೇ ಕಷ್ಟಪಟ್ಟಿದ್ದರು. ಆದರೀಗ ಮಳೆ ಆಗುತ್ತಿರುವುದರಿಂದ ರೈತರಲ್ಲಿ ಆಶಾಭವನೆ ಮೂಡಿದೆ.
ಹೆಸರು, ಉದ್ದು, ಹತ್ತಿ ಹಾಗೂ ಈ ಭಾಗದ ವಾಣಿಜ್ಯ ಬೆಳೆ ತೊಗರಿಯನ್ನೇ ರೈತರು ಬಿತ್ತನೆ ಮಾಡಿದ್ದಾರೆ. ಸುಮಾರು 18070 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ. 45ರಷ್ಟು ಪ್ರಗತಿಯಾಗಿದೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಇನ್ನು ಭೂಮಿ ಹದ ಮಾಡುತ್ತಿದ್ದಾರೆ. ಕಳೆದ ವರ್ಷ ಬಿಟ್ಟರೆ, ಪ್ರತಿವರ್ಷ ತೊಗರಿ ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನೆಯಾಗುತ್ತಿಲ್ಲ. ಇದಕ್ಕೆ ಕಾರಣ ವಾತಾವರಣದ ವೈಪರಿತ್ಯ, ನೆಟೆ ರೋಗ , ಕೀಟ ಬಾಧೆ ಹಾಗೂ ಬೀಜೋಪಚಾರ ಮಾಡದೇ ಇರುವುದು ಎಂದು ಕೃಷಿ ಅಧಿ ಕಾರಿಗಳು ತಿಳಿಸಿದ್ದಾರೆ.
ಚಿಂಚೋಳಿ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ರೈತ ವರ್ಗದಲ್ಲಿ ಹರ್ಷ ಉಂಟಾಗಿದೆ.
ಮುಂಗಾರಿನ ಹಂಗಾಮಿನಲ್ಲಿ ಜೂನ್ ತಿಂಗಳಲ್ಲಿ ನಿರೀಕ್ಷೆಯಂತೆ ಮಳೆ ಆಗದೆ ಇದ್ದುದರಿಂದ ಬಿತ್ತನೆ ಮಾಡಿದ ತೊಗರಿ, ಉದ್ದು, ಹೆಸರು, ಸೋಯಾಬಿನ್, ಸಜ್ಜೆ, ನವಣಿ ಬೆಳೆಗಳು ಭೂಮಿಯಲ್ಲಿನ ತೇವಾಂಶ ಹಾಗೂ ಮಳೆ ಅಭಾವದಿಂದ ಬೆಳವಣಿಗೆ ಕುಂಠಿತವಾಗಿತ್ತು. ಬುಧವಾರ ಸಂಜೆಯಿಂದ ಗುರುವಾರ ದಿನವಡಿ ಸುರಿದ ಜಿಟಿ ಜಿಟಿ ಮಳೆಯಿಂದಾಗಿ ಬೆಳೆಗಳು ಚೇತರಿಸಿಕೊಳ್ಳುವಂತೆ ಆಗಿದೆ.ಕುಂಚಾವರಂ, ವೆಂಕಟಾಪುರ, ಸುಲೇಪೇಟ, ಕೋಡ್ಲಿ, ಐನಾಪುರ, ನಿಡಗುಂದಾ, ಚಿಮ್ಮನಚೋಡ, ರಟಕಲ್, ಗಡಿಕೇಶ್ವಾರ, ಕರ್ಚಖೇಡ, ಹಸರಗುಂಡಗಿ, ಸಾಲೇಬೀರನಳ್ಳಿ, ಕನಕಪುರ, ಮಿರಿಯಾಣ ಗ್ರಾಮಗಳಲ್ಲಿ ಹೆಸರು, ಉದ್ದಿನ ಬೆಳೆಗಳಲ್ಲಿ ಹುಲ್ಲು ಕೀಳುವ ಕೆಲಸ ಬಿಡುವಿಲ್ಲದೇ ನಡೆಯುತ್ತಿವೆ.