Advertisement
ಮಾಹಿತಿ ಕ್ರಾಂತಿಯ ವರ್ತಮಾನ ಸಮಯದಲ್ಲಿ ಮಾಹಿತಿಯ ಮೂಲಗಳು ನೂರಾರು ಲಭ್ಯವಿದೆಯಾದರೂ ಅವುಗಳ ಸಾಚಾತನ ಮತ್ತು ವಿಶ್ವಾಸಾರ್ಹತೆಯನ್ನು ಅಳೆಯುವುದು ಸುಲಭವಲ್ಲ. ಸಟೆಯನ್ನು ದಿಟವನ್ನಾಗಿಸುವ ದಕ್ಷತೆ, ಕಳಪೆಯನ್ನು ಉತ್ಕೃಷ್ಟವನ್ನಾಗಿಸುವ ಕುಶಲತೆ ಕರಗತ ಮಾಡಿಸಿಕೊಂಡ ಖದೀಮರು ಸರ್ವಾಂತರ್ಯಾಮಿಯಾಗಿದ್ದಾರೆ. ಯಾವುದೋ ಶರೀರಕ್ಕೆ ಯಾವುದೋ ಶಿರವನ್ನು ಜೋಡಿಸಿ ನಕಲಿ ವಿಡಿಯೋ ಗಳನ್ನು ಜಾಲತಾಣಗಳಿಗೆ ಹಂಚಿ ತಮ್ಮ ವಾದವನ್ನು ಪುಷ್ಟೀಕರಿ ಸುವ ಭೂಪರಿಗೆ ಎಲ್ಲೂ ಕೊರತೆಯಿಲ್ಲ. ಯಾರೋ ಯಾವಾಗಲೋ ನೀಡಿದ ಹೇಳಿಕೆಗಳನ್ನು ಸಂದರ್ಭದ ಹೊರಗೆ ಇನ್ನಾವಗಲೋ ಹರಿಯ ಬಿಟ್ಟು ಜನಾಭಿಪ್ರಾಯಕ್ಕೆ ಹೊಸ ದಿಕ್ಕು ನೀಡುವ ತಂತ್ರ ಹೆಣೆಯುವ ವೃತ್ತಿಪರ ತಂತ್ರಜ್ಞರ ಕುತಂತ್ರವನ್ನು ಅರಿಯುವುದು ಸಾಮಾನ್ಯರಿಗೆ ಅಂದುಕೊಂಡಷ್ಟು ಸುಲಭವಲ್ಲ. ಬ್ರಾಂಡ್ ನೇಮ್ ಪ್ರಚಾರ ಕೇವಲ ಸರಕುಗಳಿಗಷ್ಟೇ ಸೀಮಿತ ವಾಗಿಲ್ಲ. ವ್ಯಕ್ತಿಗಳು, ಸಂಘಟನೆಗಳು, ಸಂಸ್ಥೆಗಳು ಸಹಾ ನಾನಾ ಪ್ರಚಾರ ತಂತ್ರಗಳಿಗೆ ಮೊರೆ ಹೋಗುತ್ತವೆ. ಯಾವುದನ್ನು ನಂಬ ಬೇಕು, ಯಾವುದನ್ನು ಬಿಡಬೇಕು ಎನ್ನುವುದನ್ನು ತೋಚದೇ ನಾವು ಕಕ್ಕಾಬಿಕ್ಕಿಯಾಗಬೇಕಾಗುತ್ತದೆ.
Related Articles
Advertisement
ಒಂದೇ ಕೆಲಸ ಎರಡೆರಡು ಬಾರಿ ಉದ್ಘಾಟನೆ, ಶಂಕು ಸ್ಥಾಪನೆ ನಡೆಯುವುದೂ ಉಂಟು. ಪ್ರಾಯೋಜಕರಿಂದಲೇ ನಡೆಯುವ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಇರಿಸಲಾದ ಸೀಟ್‌ಗಳನ್ನೆಲ್ಲಾ ಭಟ್ಟಂಗಿಗಳೇ ಆಕ್ರಮಿಸಿಕೊಂಡು ವಿಜೃಂಭಿಸುತ್ತಿರುವ, ಅರ್ಹರಿಗೆ ಒಂದೋ ಎರಡೋ ಮೆರಿಟ್ ಕೋಟಾ ಕೂಡಾ ಇಲ್ಲದೇ ಇರುವ ಸ್ಥಿತಿ ಹಳ್ಳಿ ಪಟ್ಟಣಗಳೆಂಬ ಭೇದವಿಲ್ಲದೇ ಎಲ್ಲೆಡೆ ಕಾಣಬಹುದು.
ಸೈನಿಕರ ಸಮ್ಮಾನ, ಹುತಾತ್ಮರ ಸ್ಮರಣೆ, ಸಾಧಕರಿಗೆ ಪುರಸ್ಕಾರ, ನೊಂದವರಿಗೆ ಸಹಾಯ ಎಂದೆಲ್ಲಾ ನಡೆಯುವ ಸಮಾರಂಭಗಳು ಯಾರಲ್ಲೋ ಹೆಗ್ಗಳಿಕೆಯನ್ನು, ಇನ್ನಾರದೋ ಉದಾರತೆಯನ್ನು ಮೆರೆಯುವ, ಮತ್ತಾರಲ್ಲೋ ಅದೃಷ್ಟಕ್ಕೆ ಮೆರುಗು ನೀಡುವ ಇವೆಂಟ್‌ಗಳಾಗುತ್ತಿರುವುದು ವಿಪರ್ಯಾಸ. ಮಾಜಿ ಸೈನಿಕರನ್ನು ಸಮ್ಮಾನಿಸುವ ಸಮಾರಂಭವೊಂದರಲ್ಲಿ ಸನ್ಮಾನಿತರನ್ನು ಹಿಂದೆ ತಳ್ಳಿ ಪ್ರಾಯೋಜಕ ಸಂಸ್ಥೆಯ ಪದಾಧಿಕಾರಿಗಳು, ಆಯೋಜಕರು, ಸಂಘಟಕರು ಫೋಟೋಗಾಗಿ ನಡೆಸುವ ಮೇಲಾಟಗಳು ಅಸಹ್ಯಕಾರಿ ಎನಿಸುತ್ತದೆ. ಸತ್ಕಾರ್ಯದ ಹೆಸರಲ್ಲಿ ಶ್ರೇಯಸ್ಸು ಪಡೆಯಲು ನಡೆಸುವ ಕಾರ್ಯಗಳು ಯಾರಲ್ಲೋ ವ್ಯಕ್ತಿತ್ವವನ್ನು ವೈಭವೀಕರಿಸುವ ಸಮಾರಂಭಗಳಾಗಿ ಕಾಣುವುದು ಬದಲಾಗುತ್ತಿ ರುವ ನಮ್ಮ ಜೀವನ ಮೌಲ್ಯಗಳಿಗೆ ಕನ್ನಡಿ ಹಿಡಿದಂತೆ ಭಾಸವಾ ಗುತ್ತದೆ. ಅರ್ಹರಿಗೆ ದಕ್ಕದ ಪ್ರಶಸ್ತಿಗಳು, ಪುರಸ್ಕಾರಗಳು, ಸಮ್ಮಾನ ಗಳು ಮಾರ್ಕೆಟಿಂಗ್ ಯೋಗ್ಯತೆ ಇದ್ದವರಿಗೆ ಸುಲಭವಾಗಿ ಒಲಿದು ಬಿಡುತ್ತದೆ. ಪ್ರತಿಭೆಗೆ ಇಲ್ಲದ ಕಿಮ್ಮತ್ತು, ಇಲ್ಲದ್ದನ್ನು ಇದೆಯೆಂದು ತೋರಿಸುವ, ಇದ್ದುದನ್ನು ಇದ್ದದ್ದಕ್ಕಿಂತ ಅಧಿಕವಾಗಿ ತೋರಿಸುವ ಕಲೆ ಗೊತ್ತಿರುವವರು ಮಾತ್ರ ಸೊಂಪಾಗಿ ಬೆಳೆಯ ಬಹುದಾದ ಪ್ರಸ್ತುತ ಸನ್ನಿವೇಶದಲ್ಲಿ ಅಸಲಿ-ನಕಲಿ ಬೇಧ ಅರಿಯು ವುದು ಕಷ್ಟಸಾಧ್ಯದ ಕೆಲಸ. ಕಲೆ, ಸಾಹಿತ್ಯದ ಪುರಸ್ಕಾರ ಗಳು, ಸಮಾಜಸೇವೆ ಶೈಕ್ಷಣಿಕ ಗೌರವಗಳು ಯಾರಲ್ಲೋ ವಶೀಲಿ, ಇನ್ನಾರಲ್ಲೋ ಪ್ರಾಯೋಜಕತ್ವ ದೊರೆತವರಿಗೆ ಮಾತ್ರ ಲಭ್ಯ ಎನ್ನುವುದನ್ನು ಹೆಚ್ಚು ಕಡಿಮೆ ನಾವು ಒಪ್ಪಿಕೊಂಡೇ ಬಿಟ್ಟಿದ್ದೇವೆ.
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು ಎನ್ನುವ ಗಾದೆ ಮಾತಿನಂತೆ ಮುಖವಾಡಗಳನ್ನು ಧರಿಸಿ ಎತ್ತರಕೆತ್ತರಕ್ಕೆ ಬೆಳೆಯು ತ್ತಿರುವ ದೈತ್ಯ ವ್ಯಕ್ತಿತ್ವದ ಠಕ್ಕತನಕ್ಕೆ ಮಾರುಹೊಗದಿರುವ ರಕ್ಷಣಾತ್ಮಕ ನೀತಿ ನಮ್ಮದಾಗಬೇಕಿದೆ. ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಅಧಿಕ ಅಪಾಯಕಾರಿ. ನಿಮಗಾದ್ದಕ್ಕೆ ಅಸಲಿ ಬೆಲೆಗೆ ಮಾರುವೆ ಎನ್ನುವ ವ್ಯಾಪಾರಿಯ ಸೋಗಿನ ನುಡಿಗೂ ವೈಚಾರಿಕ ನುಡಿಗಳನ್ನಾಡುತ್ತಾ ಇನ್ನಾರಲ್ಲೋ ಹಿತ ಸಾಧಿಸುವ ಹೊಣೆ ಹೊತ್ತಿರುವ (ಪ್ರಾಯೋಜಕತ್ವದ) ವಿಷ ಜಂತುಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳೋಣ. ಪ್ರತಿಯೊಂದು ಕಾರ್ಯದಲ್ಲೂ ಲಾಭ-ನಷ್ಟ ಹುಡುಕುವ ವ್ಯಾಪಾರಿ ಬುದ್ಧಿ(ಯ)ಜೀವಿಗಳ ಪರ-ವಿರೋಧದ ಹಿಂದಿರುವ ನಿಗೂಢತೆಯನ್ನು ಭೇಧಿಸುವುದು ಕಷ್ಟಕರವಾದರೂ ಸಮಾಜದ ವಿಶಾಲ ಹಿತಕ್ಕಾಗಿ ಶ್ರಮಿಸೋಣ. ಅಂತೆಕಂತೆಗಳು ಅಪ್ಪಟ ಬಂಗಾರವೇನಲ್ಲ, ಉಜ್ಜಿ ನೋಡಿದರೆ ಗಿಲೀಟು ಗೊತ್ತಾಗುತ್ತದೆ. ಮಾಧ್ಯಮಗಳಲ್ಲಿ ಬಂದದ್ದೆಲ್ಲಾ ಸಥ್ಯವಲ್ಲ ಎನ್ನುವ ಪಾಠ ಕಲಿಯೋಣ. ವಿಮರ್ಶಿ ಸುವ ಬುದ್ಧಿಗೆ ಒಂದಿಷ್ಟು ಸಾಣೆ ಹಚ್ಚೋಣ.