Advertisement

ಅತೃಪ್ತ ಗಂಡನೂ, ಆಶಾಭಾವದ ಪತ್ನಿಯೂ…

06:00 AM Sep 05, 2018 | |

ಬಂದವರು ಅರವತ್ತೆರಡರ ಭಾನು. ಮುಖದಲ್ಲಿ ದಿವ್ಯ ಕಳೆ! ಸಲಹೆಗೆ ಬಂದ ಪ್ರತಿಯೊಬ್ಬರನ್ನೂ ಖುರ್ಚಿಯಿಂದ ಎದ್ದು ಕೈಜೋಡಿಸಿ ಸ್ವಾಗತಿಸುತ್ತೇನೆ. ಅವರು ಕುಳಿತ ಮೇಲೆ ಕುಳಿತುಕೊಂಡೆ. ಈ ಗೌರವ ಸೂಚಕ ನಡವಳಿಕೆ ಮನೋಸೌಖ್ಯವನ್ನು ಕೊಡುತ್ತದೆ. ಡಯಾಬಿಟಾಲಜಿಸ್ಟ್ ಸಲಹೆಯ ಮೇರೆಗೆ ನನ್ನ ಬಳಿ ಬಂದಿದ್ದರು. ಮಾನಸಿಕ ಒತ್ತಡದವಿದ್ದರೆ ಸಕ್ಕರೆ ನಿಯಂತ್ರಣಕ್ಕೆ ಬರುವುದಿಲ್ಲ.

Advertisement

  ಹದಿನೆಂಟಕ್ಕೆ ಮದುವೆಯಾಗಿ, ವಯಸ್ಸು ಮೂವತ್ತೈದು ತಲುಪುವ ಹೊತ್ತಿಗೆ ಭಾನು ಆರು ಮಕ್ಕಳ ತಾಯಿ; ಗಂಡ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಸ್ತಿಯಿತ್ತು- ಮಕ್ಕಳ ಜವಾಬ್ದಾರಿಯಿತ್ತು. ತಾಯಿ ಮತ್ತೂಂದು ಮದುವೆ ಮಾಡಿದರು. ಪತಿ ಶಿವಾ ಅವರಿಗೂ ಮೂವತ್ತೈದು. ಮದುವೆಯಾಗಿ ಐದು ವರ್ಷ ಎಲ್ಲಾ ಚೆನ್ನಾಗಿಯೇ ಇತ್ತು. ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಭಾನು ಒಂದು ವಾರ ಆಸ್ಪತ್ರೆ ಸೇರಿ ವಾಪಸು ಮನೆಗೆ ಬರುವ ಹೊತ್ತಿಗೆ ಮನೆ ನಿಯಂತ್ರಣ ತಪ್ಪಿದೆ ಅನ್ನಿಸತೊಡಗಿತು. ದೊಡ್ಡ ಮಗಳು ಬಜಾರಿಯಾಗಿದ್ದಳು. ಮಗ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದ. ಬೆಳೆದ ಮಗ- ಮಗಳು ಒಂದು ವಾರದಲ್ಲಿ ಬದಲಾಗುವುದಕ್ಕೆ ಗಂಡ ಶಿವಾ ಅವರೇ ಕಾರಣ ಎಂದು ಹೇಳಬೇಕಿರಲಿಲ್ಲ. ಜೀವನದ ಸವಾಲುಗಳು ನಮಗೆ ಪಾಠವಾದಾಗ ಪರಿಹಾರವಾಗುತ್ತವೆ ಎಂದರು ಭಾನು.

   ವಯಸ್ಸಿಗೆ ಬಂದ ಮಗಳು ಮತ್ತು ಅತೃಪ್ತ ಎರಡನೇ ಗಂಡ ಒಂದೇ ಕಡೆ ಇರಬಾರದು ಎಂದು ಮಗಳಿಗೆ ಅಮೆರಿಕದಲ್ಲಿದ್ದ ಗೆಳತಿಯ ಮಗನಿಗೆ ಕೊಟ್ಟು ಮದುವೆ ಮಾಡಿದರು. ಮಗನನ್ನು ಹೆಚ್ಚಿನ ವ್ಯಾಸಂಗಕ್ಕೆಂದು ಅಮೆರಿಕಕ್ಕೇ ಕಳಿಸಿ, ಅಳಿಯನನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು, ಮಗ- ಮಗಳ ಜೀವನದ ದೃಷ್ಟಿಕೋನವನ್ನು ಉತ್ತಮಗೊಳಿಸುವಲ್ಲಿ ಯಶಸ್ವಿಯಾದರು. “ತಾಯಿ ಎಂದರೆ ಗಾಳಿಗಾರದ ದೀಪರೀ’ ಎನ್ನುವ ಅವರ ಮಾತಿನಲ್ಲಿ ದೃಢತೆಯಿತ್ತು.

  ಗಂಡನನ್ನು ಪ್ರಶ್ನಿಸದೆ, ವ್ಯಾಪಾರದಲ್ಲಿ ತೊಡಗಿಸಿಕೊಳ್ಳಲು ಹಣ ನೀಡಿ, ಮಾವ- ಅಳಿಯನನ್ನು ಬೇರೆ ಮಾಡಿದರು. ವಿಧವೆಯ ಪುನರ್ವಿವಾಹ ಕಷ್ಟಾರೀ. ಗಂಡಸು ಗಂಡನಾಗಿ ಮನೆಗೆ ಬಂದರೂ, ಮಕ್ಕಳಿಗೆ ತಂದೆಯಾಗಲು ಸಾಧ್ಯವಿಲ್ಲ, ಯಾರದೋ ಮಕ್ಕಳು ಇವರನ್ನು ತಂದೆಯೆಂದು ಒಪ್ಪಲು ಸಾಧ್ಯವಿಲ್ಲ ಮತ್ತೆ ನಾನೂ ಹೆಂಡತಿಯಾಗಲಿಲ್ಲ, ಮತ್ತೆ ಮದುವೆಯಾಗಿ ಶಿವಾ ಅವರಿಗೆ ಅತೃಪ್ತಿಯಲ್ಲದೇ ಏನು ಸಿಕ್ಕಿದೆ? ಮಾವನ ಕೈಕೆಳಗೆ ಕೆಲಸ, ಸ್ವಾತಂತ್ರ್ಯವಿಲ್ಲ. ಆದರೆ, ಶಿವಾ ವ್ಯಾಪಾರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ. ದಾಂಪತ್ಯ ಸುಖವಿಲ್ಲದ ಗಂಡನಿಗೆ ಈಗ ಹುಡುಗಿಯರ ಸಹವಾಸ. ಭಾನೂವಿಗೆ ಒತ್ತಡ ಊಂಟುಮಾಡಿತ್ತು. ಅಷ್ಟು ಹೆಣ್ಣುಗಳ ಜೊತೆ ತಿರುಗಿದರೂ ಆತ್ಮಸುಖವಿಲ್ಲ. ಮಾತಾಡುತ್ತಾ ಮಾತಾಡುತ್ತಾ, ಏನೋ ಅರ್ಥವಾದವರಂತೆ ದಿಗ್ಗನೆ ಎದ್ದರು ಭಾನು. ತೇರು ಬೀದಿಯೆಲ್ಲಾ ಸುತ್ತಿದರೂ ದೇವಸ್ಥಾನಕ್ಕೇ ವಾಪಸು ಬರಬೇಕು. “ನಾನು ಅವರನ್ನು ಕಳೆದುಕೊಂಡಿಲ್ಲ, ಅಲ್ವಾ ಶುಭಾ? ನಾನು ಅವರೊಟ್ಟಿಗೆ ಮತ್ತೆ ಜೀವನ ಕಟ್ಟಿಕೊಳ್ಳುತ್ತೇನೆ’ ಎಂದರು. ಮಂದಹಾಸವಿತ್ತು.

  ನೋವುಗಳನ್ನು ಅರಗಿಸಿಕೊಂಡವರಿಗೆ ನಮ್ಮ ಸಲಹೆ/ ಚಿಕಿತ್ಸೆ ಬೇಕಿರುವುದಿಲ್ಲ. ನೋವಿನ ಮಾತುಗಳಿಗೆ ಕಿವಿಗಡಕ್ಕಿಚ್ಚಿಸುವ ಮೌನವಾಗುವುದೇ ಚಿಕಿತ್ಸಾ ಮನೋವಿಜ್ಞಾನ. ಅದೇ Witnessing the unwinding.

Advertisement
Advertisement

Udayavani is now on Telegram. Click here to join our channel and stay updated with the latest news.

Next