ಹೊಸದಿಲ್ಲಿ : ಲಕ್ನೋ ದ ಅಂತರ್ ಮತೀಯ ದಂಪತಿಗೆ ಪಾಸ್ ಪೋರ್ಟ್ ನೀಡಲಾದ ವಿಷಯದಲ್ಲಿ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ಟ್ವಿಟರ್‌ನಲ್ಲಿ ಟ್ರೋಲ್ ಆಗಿದ್ದಾರೆ; ಇದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿ ಆಕೆಯ ಬೆಂಬಲಕ್ಕೆ ನಿಂತಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು “ಪಾಸ್ ಪೋರ್ಟ್ ಮಂಜೂರಾಗುವುದಕ್ಕೂ ಸಚಿವೆ ಸುಶ್ಮಾ ಅವರಿಗೂ ಯಾವುದೇ ಸಂಬಂಧ ಇಲ್ಲ’ ಎಂದು ಹೇಳಿದ್ದಾರೆ.
ಮೊಹಮ್ಮದ್ ಅನಾಸ್ ಸಿದ್ದಿಕಿ ಎಂಬವರ ಪತ್ನಿ ತನ್ವಿ ಸೇಟ್ ಅವರಿಗೆ ಪಾಸ್ ಪೋರ್ಟ್ ದೊರಕುವಲ್ಲಿ ಅಲ್ಲಿನ ಅಧಿಕಾರಿಯೋರ್ವರು “ಮದುವೆಯ ಬಳಿಕ ನೀವೇಕೆ ನಿಮ್ಮ ಹೆಸರನ್ನು ಮುಸ್ಲಿಂ ಹೆಸರಿಗೆ ಬದಲಾಯಿಸಿಕೊಂಡಿಲ್ಲ” ಎಂದು ಮಾನಸಿಕ ಕಿರುಕುಳ ನೀಡಿದ್ದರು ಎನ್ನಲಾದ ಪ್ರಕರಣದಲ್ಲಿ ಸಚಿವೆ ಸುಶ್ಮಾ ಸ್ವರಾಜ್ ವಿರುದ್ಧ ಟ್ವಿಟರ್‌ನಲ್ಲಿ ಅತ್ಯಂತ ತೀಕ್ಷ್ಣವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿ ಟ್ರೋಲಿಂಗ್ ನಡೆದಿತ್ತು.
”ಮನಸ್ಸಿಗೆ ನೋವಾಗುವ ರೀತಿಯಲ್ಲಿ ಅಸಭ್ಯ ಪದಗಳನ್ನು ಬಳಸಿಕೊಂಡು ಟ್ವೀಟ್ ಮಾಡುವವರು ಹೆಚ್ಚು ಜವಾಬ್ದಾರಿಯುತರಾಗಿರಬೇಕು” ಎಂದಿರುವ ಸಚಿವ ಗಡ್ಕರಿ, ವಿದೇಶ ವ್ಯವಹಾರಗಳ ಸಚಿವೆಯ ವಿರುದ್ಧ ಟ್ವಿಟರ್ ಟ್ರೋಲ್ ಬಗ್ಗೆ ತಮ್ಮ ಅಸಮಾಧಾನ, ಆಕ್ಷೇಪವನ್ನು ಪ್ರಕಟಿಸಿದರು.
“ಸುಶ್ಮಾ ಸ್ವರಾಜ್ ವಿರುದ್ಧ ಅಸಭ್ಯ ಪದಗಳ ಟ್ವಿಟರ್ ಟ್ರೋಲ್ ನಡೆದಿರುವುದು ದುರದೃಷ್ಟಕರ; ಆಕೆಯ ವಿರುದ್ಧ ಈ ರೀತಿಯ ಅಪಪ್ರಚಾರ ಸರ್ವಥಾ ಸರಿಯಲ್ಲ; ನಾನು ಈ ಬಗ್ಗೆ ಆಕೆಯೊಂದಿಗೆ ಮಾತನಾಡಿದ್ದೇನೆ. ಪಾಸ್ ಪೋರ್ಟ್ ಮಂಜೂರು ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದ ಸಂದರ್ಭದಲ್ಲಿ ಆಕೆ ದೇಶದಲ್ಲಿ ಇರಲಿಲ್ಲ. ಮೇಲಾಗಿ ಇದಕ್ಕೂ ಆಕೆಗೂ ಯಾವುದೇ ಸಂಬಂಧವಿಲ್ಲ; ಟ್ರೋಲ್ ಮಾಡಿರುವವರು ಬಳಸಿರುವ ಪದಗಳನ್ನು ಯಾರೂ ಇಷ್ಟಪಡಲಾರರು. ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಗೆ ಅನುಗುಣವಾಗಿ ನಡೆದುಕೊಳ್ಳಬೇಕು; ಆದರೆ ಇಲ್ಲೀಗ ಆಗಿರುವುದು ನಿಜಕ್ಕೂ ದುರದೃಷ್ಟಕರ’ ಎಂದು ಕೇಂದ್ರ ಸಾರಿಗೆ ಮತ್ತು ನೌಕಾ ಸಚಿವರಾಗಿರುವ ಗಡ್ಕರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಸುಶ್ಮಾ ಸ್ವರಾಜ್ ಅವರು ತನ್ನ ವಿರುದ್ಧ ಟ್ವಿಟರ್‌ನಲ್ಲಿ ನಡೆದಿರುವ ಟ್ರೋಲ್ ಬಗ್ಗೆ ಜನಾಭಿಪ್ರಾಯ ಕೇಳಿದ್ದರು : ನೀವಿದನ್ನು ಸಮ್ಮತಿಸುವಿರಾ, ಇಲ್ಲವಾ ? ಶೇ.43 ಜನರು ಹೌದು ಎಂದು ಉತ್ತರಿಸಿದ್ದರೆ ಶೇ.57 ಮಂದಿ ಇಲ್ಲ ಎಂದು ಉತ್ತರಿಸಿದ್ದರು.
“ಪ್ರಜಾಸತ್ತೆಯಲ್ಲಿ ಭಿನ್ನಾಭಿಪ್ರಾಯ ಇರುವುದು ಸಹಜ; ಟೀಕಿಸಬೇಕು, ಆದರೆ ಕೆಟ್ಟ ಪದಗಳನ್ನು ಬಳಸಬಾರದು; ಶಿಷ್ಟ ಭಾಷೆಯ ಟೀಕೆ ಸದಾ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ’ ಎಂದು ಸ್ವರಾಜ್ ಟ್ರೋಲಿಗರಿಗೆ ಉತ್ತರವಾಗಿ ಟ್ವೀಟ್ ಮಾಡಿದ್ದರು.