Advertisement

ಮರೆಯಲಾಗದ ಗುರುಗಳು

06:44 PM Jun 20, 2019 | mahesh |

ಆಗುಂಬೆ’ ಇದುವೇ ಪಶ್ಚಿಮಘಟ್ಟದ ಸೌಂದರ್ಯದ “ಗೊಂಬೆ’. ನಾನೇ ಎಲ್ಲ, ನನ್ನಿಂದಲೇ ಎಲ್ಲ ಎಂದು ಅಹಂಕಾರದಿಂದ ಬೀಗು ತ್ತಿರುವ ಮನುಷ್ಯನೆಡೆಗೆ ಕಿರುನಗೆ ಬೀರಿ, ಮರೆಮಾಚುವ ಸೂರ್ಯ. ಅಬ್ಟಾ ! ಇಂತಹ ಮನಮೋಹಕವಾದ ದೃಶ್ಯವನ್ನು ಕಣ್ತುಂಬಿಕೊಂಡು ಸಾಗಿಬರುತ್ತಿರುವಾಗ ಸಿಗುವ ಊರೇ “ಹೆಬ್ಬೇರಿ’.

Advertisement

ಹೆಬ್ಬೇರಿಯ ಕೇಂದ್ರ ಎಲ್ಲರೂ ಕೈ ಎತ್ತಿ ಮುಗಿಯುವ ವಿದ್ಯಾ ದೇಗುಲ, ಸರ್ವರ ಅಚ್ಚುಮೆಚ್ಚಿನ ಮನೆಮಾತಾಗಿರುವ ಶಾಲೆ. ಹಲವಾರು ದಶಕಗಳ ಇತಿಹಾಸವಿರುವ, ಇತಿಹಾಸದುದ್ದಕ್ಕೂ ಸಾಧನೆಯ ಶಿಖರವನ್ನೇರಿದ ಸಂಸ್ಥೆ. ಅಂದ ಹಾಗೆ, ನಮ್ಮ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ, ಬೆಳವಣಿಗೆಗೆ ಕಾರಣ ನನ್ನೆಲ್ಲ ಪೂಜ್ಯನೀಯ ಗುರುಗಳು. ನನ್ನ ಗುರುಗಳು ಪ್ರತಿವಿದ್ಯಾರ್ಥಿಗಳನ್ನು ಸಮಾನ ದೃಷ್ಟಿಯಿಂದ ನೋಡುವವರು. ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೆ, ಸಾಂಸ್ಕೃತಿಕ, ಕ್ರೀಡೆ, ವಿಜ್ಞಾನ ಹೀಗೆ ಪ್ರತಿಕ್ಷೇತ್ರದಲ್ಲಿಯೂ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೂ ಕೂಡ ತೀವ್ರವಾದ ಪೈಪೋಟಿಯನ್ನು ನೀಡುವಂತೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವವರು ನನ್ನೆಲ್ಲ ಗುರುಗಳು.

ಯಾವುದೇ ಒಂದು ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಲ್ಲಿ ಹಮ್ಮಿಕೊಂಡರೆ, ಆ ಪ್ರತಿ ಕಾರ್ಯಕ್ರಮಕ್ಕೂ ಅನಂತಪದ್ಮನಾಭನ ಉತ್ಸವಕ್ಕೆ ಜನಸ್ತೋಮ ಹರಿದು ಬರುವಂತೆ ಜನಸಾಗರವೇ ಸೇರುತ್ತಿತ್ತು. ಶಾಲಾ ವಾರ್ಷಿಕೋತ್ಸವದ ವಿಷಯಕ್ಕೆ ಬಂದರೆ, ಮನೆಯಲ್ಲಿ ಮದುವೆ-ಮುಂಜಿಗಳಲ್ಲಿ ಸಂತೋಷದ ವಾತಾವರಣವಿದ್ದಂತೆ, ನಮ್ಮ ಶಾಲೆಯಲ್ಲಿ ವಾರ್ಷಿಕೋತ್ಸವವೆಂದರೆ ಪ್ರತಿಯೊಬ್ಬರಿಗೂ ಮನೆಯ ಕಾರ್ಯಕ್ರಮವೇ. ಶಿಕ್ಷಕರೊಂದಿಗೆ ಕಾರ್ಯಕ್ರಮಗಳಿಗೆ ತಯಾರಿ ನಡೆಸುವ ಭರದಲ್ಲಿ, ಕೆಲವು ಪಾಠದ ಅವಧಿ ತಪ್ಪಿತಲ್ಲ ಎಂದು ನನ್ನಂಥ‌ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಸಂತೋಷ. ಅಂತೂ ಭರದಲ್ಲಿ ಸಿದ್ಧತೆ ನಡೆಯುತ್ತ ವಾರ್ಷಿಕೋತ್ಸವದ ದಿನ ಹತ್ತಿರ ಬಂದಂತೆ ಸಂತೋಷದ ನಡುವೆ ಎಲ್ಲೋ ಒಂದು ಕಡೆ, ಛೇ… ಇಷ್ಟುಬೇಗ ಮುಗಿಯಿತಲ್ಲ ಎನ್ನುವ ಬೇಸರ. ಅದನ್ನು ಮರೆಮಾಚಲು ಶಾಲಾ ಪ್ರವಾಸದ ದಿನವೂ ನಿಗದಿ. ನನ್ನ ನೆಚ್ಚಿನ ಗುರುಗಳೊಂದಿಗೆ ಪಾಲ್ಗೊಂಡ ಬಳ್ಳಾರಿ ಪ್ರವಾಸ ಜೀವನದಲ್ಲಿ ಮರೆಯಲಾಗದ ಅವಿಸ್ಮರಣೀಯ ನೆನಪು.

ಕೆಲವು ಶಿಕ್ಷಕರು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಯ ಜೊತೆಗೆ “ಅತ್ಯುತ್ತಮ ಶಿಕ್ಷಕ’ ರೆಂಬ ಬಿರುದನ್ನು ಸಹ ಪಡೆದವರು. ಕೆಲವರು ಭಾಷಣ, ಜ್ಞಾನ-ವಿಜ್ಞಾನ, ಕಲೆ ಸಾಹಿತ್ಯದಲ್ಲಿ ಅದ್ವಿತೀಯರು. ಇನ್ನು ಕೆಲವರು ಯಕ್ಷಗಾನ ಪ್ರಸಂಗವನ್ನೇ ರಚಿಸಿದ ಅನುಭವಿಗಳು. ಅಷ್ಟೇ ಅಲ್ಲದೆ, ಬೇರೆ ಬೇರೆ ಸಂಘಸಂಸ್ಥೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಊರಿನ ಜನರಿಗೆಲ್ಲ ಚಿರಪರಿಚಿತರು. ಒಟ್ಟಾರೆ ಹೇಳುವುದಾದರೆ, ಎಲ್ಲೋ ಬಿದ್ದಿದ್ದ ಕಲ್ಲನ್ನು ಕೆತ್ತಿ ಸುಂದರ ಶಿಲೆಯನ್ನಾಗಿ ಪರಿವರ್ತಿಸುವಲ್ಲಿ ಅವಿರತ ಪ್ರಯತ್ನವನ್ನು ಮಾಡುತ್ತಿರುವ ಶಿಲ್ಪಿಗಳು ಈ ಗುರುಗಳು.

ಅಕ್ಷಿತಾ ಕೆ. ಶೆಟ್ಟಿ
ಪ್ರಥಮ ಪಿಯುಸಿ, ಸ.ಪ.ಪೂ. ಕಾಲೇಜು, ಹೆಬ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next