ಟೈಲರ್ ಹಲ್ಲು ಗಿಂಜುತ್ತಾ- “ಮೇಡಂ, ನೀವು ಕೊಟ್ಟ ಅಳತೆಯ ಬ್ಲೌಸ್ ಸುಟ್ಟು ಹೋಗಿದೆ. ತಿಳಿಯದೇ ಅದರ ಮೇಲೆ ಇಸ್ತ್ರಿ ಪೆಟ್ಟಿಗೆ ಇಟ್ಟುಬಿಟ್ಟೆ. ಎರಡು ದಿನ ಟೈಂ ಕೊಡಿ, ಹೊಸಾ ಬ್ಲೌಸ್ ಹೊಲಿದು ಕೊಡುತ್ತೇನೆ… ಸಾರಿ’ ಅಂದ!
ನನಗೂ, ಅಕ್ಕನಿಗೂ ನಡುವೆ ಮೂರು ವರ್ಷ ಅಂತರವಿದೆ. ಅಕ್ಕ- ತಂಗಿ ಅಂದ್ಮೇಲೆ ಕೇಳಬೇಕೇ? ನಮ್ಮ ನಡುವೆ ಪ್ರೀತಿ, ಜಗಳ, ಮುನಿಸು ಎಲ್ಲವೂ ಇದೆ. ಎಲ್ಲರಿಗಿಂತ ಚಿಕ್ಕವಳೆಂದು ಮನೆಯಲ್ಲಿ ಎಲ್ಲರೂ ನನ್ನನ್ನು ತುಸು ಹೆಚ್ಚು ಮುದ್ದು ಮಾಡುತ್ತಾರೆ. ಅದಕ್ಕೇ ಅವಳಿಗೆ ನನ್ಮೆàಲೆ ಚೂರು ಹೊಟ್ಟೆಯುರಿ. ಅವಳ ಬಟ್ಟೆಗಳನ್ನೆಲ್ಲ ನಾನು ಹೇಳದೆ ಕೇಳದೆ ಎಗರಿಸುತ್ತೇನೆ ಅಂತಲೂ ಸಿಟ್ಟು.
ಎಷ್ಟೇ ಜಗಳವಾಡಿದರೂ, ನಮ್ಮಿಬ್ಬರ ನಡುವೆ ಪ್ರೀತಿಗೇನೂ ಕೊರತೆ ಇಲ್ಲ. ಪ್ರತಿವರ್ಷ ಅವಳು ನನ್ನ ಹುಟ್ಟಿದಹಬ್ಬಕ್ಕೆ ಏನಾದರೂ ಚಂದದ ಗಿಫ್ಟ್ ಕೊಟ್ಟೇ ಕೊಡುತ್ತಾಳೆ. ಚಿಕ್ಕವಳಿದ್ದಾಗ ತನ್ನ ಪಾಕೆಟ್ ಮನಿಯನ್ನೆಲ್ಲ ಒಟ್ಟುಗೂಡಿಸಿ, ನನಗೆ ಗಿಫ್ಟ್ ತರುತ್ತಿದ್ದಳು. ಆದ್ರೆ ನಾನು ಒಂದು ಸಲವೂ ಅವಳಿಗೆ ಗಿಫ್ಟ್ ಕೊಟ್ಟಿಲ್ಲ. ಅಪ್ಪ ಕೊಟ್ಟ ಪಾಕೆಟ್ ಮನಿ ನನಗೇ ಸಾಲುತ್ತಿರಲಿಲ್ಲ. ಇನ್ನು ಅವಳಿಗೇನು ಕೊಡಿಸೋದು ಹೇಳಿ? “ನಾನು ದುಡಿಯಲು ಶುರು ಮಾಡಿದಮೇಲೆ ದೊಡ್ಡ ಗಿಫ್ಟ್ ಕೊಡ್ತೀನಿ, ನೋಡ್ತಾ ಇರು’ ಅಂತ ಪ್ರತಿ ಹುಟ್ಟುಹಬ್ಬದ ದಿನವೂ ಅವಳಿಗೆ ಆಶ್ವಾಸನೆ ಕೊಡುತ್ತಿದ್ದೆ. ಅಂದುಕೊಂಡಂತೆ ಕಳೆದ ವರ್ಷ ನನಗೆ ಕೆಲಸವೂ ಸಿಕ್ಕಿತು. ಕೆಲಸ ಸಿಕ್ಕ ಐದು ತಿಂಗಳಲ್ಲಿ ಅಕ್ಕನ ಹುಟ್ಟಿದ ದಿನವಿತ್ತು. ಈ ಸಲ ದೊಡ್ಡ ಸರ್‌ಪ್ರೈಸ್ ಗಿಫ್ಟ್ ಕೊಡಲೇಬೇಕು ಅಂತ ನಿರ್ಧರಿಸಿ, ಸಂಬಳದ ಹಣ ಉಳಿಸತೊಡಗಿದೆ. ಆ ಹಣದಲ್ಲಿ ಒಂದು ಮೈಸೂರು ಸಿಲ್ಕ್ ಸೀರೆ ಖರೀದಿಸಿದೆ. ಮೊದಲೇ ಅಕ್ಕನಿಗೆ ಸೀರೆ ಅಂದ್ರೆ ಪ್ರಾಣ. ಈ ನವಿಲಿನ ಬಣ್ಣದ ಸೀರೆ ಅವಳಿಗೆ ಖಂಡಿತಾ ಇಷ್ಟವಾಗುತ್ತದೆ ಅಂದುಕೊಂಡೆ. ಬರೀ ಸೀರೆಯಷ್ಟೇ ಅಲ್ಲ, ಬ್ಲೌಸ್ ಕೂಡಾ ಹೊಲಿಸಿ ಕೊಡುತ್ತೇನೆ. ಆಗ, ಅವಳು ಬರ್ಥ್ಡೇ ದಿನ ಇದೇ ಸೀರೆ ಉಡಬಹುದು ಅಂತ ಲೆಕ್ಕಾಚಾರ ಹಾಕಿದೆ.
ಆದರೆ, ಬ್ಲೌಸ್ ಹೊಲಿಸಲು ಅಳತೆ ಕೊಡಬೇಕಲ್ಲ! ಅವಳನ್ನು ಕೇಳಲಾಗದು, ಅಮ್ಮನಿಗೂ ಗೊತ್ತಾಗಬಾರದು. ಸರಿ, ಅವಳ ಒಂದು ಬ್ಲೌಸ್ ಅನ್ನು ಅವಳಿಗೆ ಗೊತ್ತಾಗದಂತೆ ಬೀರುವಿನಿಂದ ತೆಗೆದು (ಅವಳ ಬಟ್ಟೆ ಎಗರಿಸುವುದನ್ನು ನನಗೆ ಹೇಳಿಕೊಡಬೇಕೆ?) ಟೈಲರ್‌ಗೆ ಕೊಟ್ಟು, ಇದರ ಅಳತೆಗೆ ರವಿಕೆ ಹೊಲಿಯಿರಿ ಅಂತ ಹೇಳಿದೆ. ಬರ್ಥ್ಡೇಗೂ ಐದು ದಿನ ಮುಂಚೆಯೇ ಬ್ಲೌಸ್ ರೆಡಿಯಾಗಿರುತ್ತದೆ ಅಂತ ಟೈಲರ್ ಹೇಳಿದ.
ಎರಡ್ಮೂರು ದಿನಗಳ ನಂತರ ಅಕ್ಕ, ನಾನು ತೆಗೆದುಕೊಂಡಿದ್ದ ಬ್ಲೌಸ್‌ಗಾಗಿ ಹುಡುಕಾಟ ನಡೆಸಬೇಕೆ? (ಅವಳು ಉಪನ್ಯಾಸಕಿಯಾದ್ದರಿಂದ ದಿನವೂ ಸೀರೆ ಉಡಬೇಕು) ಕಾಲೇಜಿನಲ್ಲಿ ಸರಸ್ವತಿ ಪೂಜೆ ಇದೆ. ನನ್ನ ಬಿಳಿ ಸೀರೆ ಎಲ್ಲಿ ಅಂತ ಗೋಳಾಡುತ್ತಾ, ಬೀರುವಿನಲ್ಲಿದ್ದ ಬಟ್ಟೆಗಳನ್ನೆಲ್ಲ ಹೊರಗೆ ಎಸೆದು ಹುಡುಕತೊಡಗಿದಳು. ಅಮ್ಮ ನನ್ನತ್ತ ನೋಡಿ- “ನೀನು ತೆಗೆದುಕೊಂಡಿದ್ದರೆ ಕೊಟ್ಟುಬಿಡು’ ಅಂತ ಕಣ್ಣಲ್ಲಿಯೇ ಗದರಿಸಿದಳು. “ನಾನೆಲ್ಲಿ ಸೀರೆ ಉಡ್ತೀನಿ?’ ಅಂತ ನಾನೂ ಕಣ್ಣಲ್ಲೇ ಉತ್ತರಿಸಿದೆ. ಸೀರೆಯೆಂದರೆ ಮಾರು ದೂರು ಓಡುವ ನನ್ನ ಬಗ್ಗೆ ಅಕ್ಕನಿಗೂ ಅನುಮಾನವಿರಲಿಲ್ಲ. ಅರ್ಧ ಗಂಟೆ ಹುಡುಕಾಡಿದ ಅಕ್ಕ, ಬ್ಲೌಸ್ ಸಿಗದುದಕ್ಕೆ ಬೇಸತ್ತು ಸುಮ್ಮನಾದಳು. ನನಗೆ ಒಳಗೊಳಗೇ ಪಾಪ ಅನ್ನಿಸಿತು. ಬಾಯಿ ಬಿಟ್ಟರೆ ಸರ್‌ಪ್ರೈಸ್ ಹಾಳಾಗುತ್ತದೆ ಅಂತ ಸುಮ್ಮನಿದ್ದೆ.
ಟೈಲರ್ ಹೇಳಿದ ದಿನ ಬ್ಲೌಸ್ ತೆಗೆದುಕೊಂಡು ಬರಲು ಅಂಗಡಿಗೆ ಹೋದೆ. ಅವನು ಹಲ್ಲು ಗಿಂಜುತ್ತಾ- “ಮೇಡಂ, ನೀವು ಕೊಟ್ಟ ಅಳತೆಯ ಬ್ಲೌಸ್ ಸುಟ್ಟು ಹೋಗಿದೆ. ತಿಳಿಯದೇ ಅದರ ಮೇಲೆ ಇಸಿŒ ಪೆಟ್ಟಿಗೆ ಇಟ್ಟುಬಿಟ್ಟೆ. ಎರಡು ದಿನ ಟೈಂ ಕೊಡಿ, ಹೊಸಾ ಬ್ಲೌಸ್ ಹೊಲಿದು ಕೊಡುತ್ತೇನೆ… ಸಾರಿ’ ಅಂದ! ಸಿಟ್ಟು ಬಂತಾದರೂ, ಆಗಿ ಹೋದದ್ದಕ್ಕೆ ಬೈದು ಏನು ಪ್ರಯೋಜನ ಅಂತ ಸುಮ್ಮನಾದೆ. ಹುಟ್ಟುಹಬ್ಬದ ದಿನ ಅಕ್ಕನಿಗೆ ಮೈಸೂರು ಸಿಲ್ಕ್ ಸೀರೆ ಕೊಟ್ಟಾಗ, ಅವಳಿಗೆ ಕುಣಿದು ಕುಪ್ಪಳಿಸುವಷ್ಟು ಖುಷಿಯಾಯ್ತು. ಬ್ಲೌಸ್ ಕೂಡಾ ರೆಡಿ ಮಾಡಿಸಿದ್ದೇನೆ ಅಂದಾಗ, “ನಿನಗೆ ಅಳತೆ ಹೇಗೆ ಗೊತ್ತಾಯ್ತು?’ ಅಂತ ಹುಬ್ಬೇರಿಸಿದಳು. “ಅದೂ ಅದೂ, ನಿನ್ನ ಬಿಳಿ ಸೀರೆಯ ಬ್ಲೌಸ್ ತಗೊಂಡು ಹೋಗಿ ಟೈಲರ್‌ಗೆ ಕೊಟ್ಟಿದ್ದೆ’ ಅಂತ ಬಾಯ್ಬಿಟ್ಟೆ. “ಅಯ್ಯೋ ಕತ್ತೆ, ಮೊನ್ನೆ ಬಾಯಿ ಬಿಟ್ಟಿದ್ದರೆ ನಿನ್ನ ಗಂಟು ಹೋಗ್ತಿತ್ತಾ…’ ಅಂತ ಬೈಯತೊಡಗಿದಳು. ಅವಳನ್ನು ಮಧ್ಯದಲ್ಲೇ ತಡೆದು, “ಆ ಬ್ಲೌಸ್ ಈಗಿಲ್ಲ. ಅದನ್ನು ಟೈಲರ್ ಸುಟ್ಟು ಹಾಕಿಬಿಟ್ಟಿದ್ದಾನೆ. ಹೊಸ ಬ್ಲೌಸ್ ಫ್ರೀಯಾಗಿ ಹೊಲಿದುಕೊಡ್ತಾನೆ’ ಅಂತ ಹೇಳಿದೆ. ಆಗ ಅವಳು- “ನಂಗದೆಲ್ಲಾ ಗೊತ್ತಿಲ್ಲ. ಇವತ್ತು ಸಂಜೆಯೊಳಗೆ ನನಗೆ ಆ ಬ್ಲೌಸ್ ಬೇಕು’ ಅಂತ ಅವಳ ಸ್ಟೈಲ್‌ನಲ್ಲಿ ಆವಾಜ್ ಹಾಕಿದಳು. ಸರ್‌ಪ್ರೈಸ್ ಕೊಡಲು ಹೋಗಿ ಬೇಸ್ತು ಬಿದ್ದ ನಾನು ನಾಲಗೆ ಹೊರ ಚಾಚಿ ಅಣಕಿಸುತ್ತಾ ಅಲ್ಲಿಂದ ಓಡಿ ಹೋದೆ.
ನಿಖಿತಾ ಕೆ.