Advertisement
ಲಂಕೆಯ ಅಧಿಪತಿ ರಾವಣನಿಗೆ ದೊರೆತ ಉಪದೇಶದ ಸಾರವೇ ಈ ಲಂಕಾವತಾರ ಸೂತ್ರ. ಈ ಕೃತಿಯಲ್ಲಿ ಹತ್ತು ಅಧ್ಯಾಯಗಳಿವೆ, ಅವುಗಳನ್ನು “ಪರಿವರ್ತ’ ಎಂದು ಕರೆಯಲಾಗಿದೆ. ಮೊದಲನೆಯ ಅಧ್ಯಾಯದಲ್ಲಿ ಲಂಕೆಯ ರಾಕ್ಷಸ ರಾಜನಾದ ರಾವಣ ಮತ್ತು ಬುದ್ಧನ ನಡುವೆ ಸಂಭಾಷಣೆಯಿದೆ. ರಾವಣನು ಭಗವಾನ್ ಬುದ್ಧನನ್ನು ಧರ್ಮ ಮತ್ತು ಅಧರ್ಮ ಕುರಿತು ಪ್ರಶ್ನೆ ಕೇಳುತ್ತಾನೆ. ಎರಡನೆಯ ಅಧ್ಯಾಯದಲ್ಲಿ ಬೋಧಿಸತ್ವ ಮಹಾಮತಿ ಎನ್ನುವವರು ಬುದ್ಧ ಭಗವಾನರಿಗೆ ನೂರು ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಕೇಳಿದ ಪ್ರಶ್ನೆಗಳಲ್ಲಿ ನಿರ್ವಾಣ ವೆಂದರೇನು, ಪ್ರಾಪಂಚಿಕ ಬಂಧನ, ಮುಕ್ತಿಯ ಸ್ವರೂಪ, ಆಲಯವಿಜ್ಞಾನ, ಮನೋವಿಜ್ಞಾನ ಮತ್ತು ಶೂನ್ಯತೆಯನ್ನು ಕುರಿತ ಪ್ರಶ್ನೆಗಳು ಸೇರಿದ್ದವು. ಮೂರನೆಯ ಅಧ್ಯಾಯವು ತಥಾಗತರ ಮೌನಕ್ಕೆ ಸಂಬಂಧಿಸಿದ್ದು. ಅಂದರೆ, ತಥಾಗತರು ಸಮ್ಯಕ್‌ಜ್ಞಾನ (ಸಂಬೋಧಿ) ಗಳಿಸಿದ ರಾತ್ರಿಗೂ, ಅವರು ಮಹಾಪರಿನಿರ್ವಾಣ ಗಳಿಸಿದ ರಾತ್ರಿಗೂ ಇರುವ ಅವಧಿಯಲ್ಲಿ ಅವರು ಏನೂ ಮಾತನಾಡಿರಲಿಲ್ಲ. ಅಂದರೆ ಮೌನವೆನ್ನುವುದು ಎಷ್ಟು ಮುಖ್ಯ ಎಂಬುದರ ಮೇಲೆ ಈ ಪ್ರಸಂಗ ಬೆಳಕು ಚೆಲ್ಲುತ್ತದೆ. ಬೌದ್ಧ ಧರ್ಮದಲ್ಲಿ ಧ್ಯಾನ ಮತ್ತು ಮೌನಕ್ಕೆ ಮಹತ್ವವಿದ್ದು , ಅದನ್ನು ಈ ಕೃತಿಯು ಎತ್ತಿ ಹಿಡಿಯುತ್ತದೆ. ಇಂಥ ಅನುಷ್ಠಾನಗಳು ಇರದಿದ್ದರೆ ತಾತ್ವಿಕ ಚರ್ಚೆಗಳು ಒಣಬೌದ್ಧಿಕ ಚರ್ಚೆಗಳಾಗುತ್ತವೆ. ಲಂಕಾವತಾರ ಸೂತ್ರ ಈ ಅಪಾಯದಿಂದ ಬಚಾವಾಗಿದೆ. ಅಚ್ಚರಿಯ ಸಂಗತಿಯೆಂದರೆ ಇದೇ ಅಧ್ಯಾಯದಲ್ಲಿ ಚಕ್ರವರ್ತಿ, ಮಾಂಡಲಿಕ ಮುಂತಾದ ವಿಷಯಗಳ ಬಗ್ಗೆ ಪ್ರಶ್ನೋತ್ತರಗಳಿವೆ. ಅದೇ ರೀತಿ ಬುದ್ಧ ಭಗವಾನರು ಜನಿಸಿದ ಶಾಕ್ಯವಂಶದ ಕುರಿತು ಚರ್ಚೆಗಳಿವೆ.
ಬೌದ್ಧಾ ಬುದ್ಧ ಇತಿ ಪ್ರಮಾಣ ಪಟವಃ ಕತೇìತಿ ನೈಯಾಯಿಕಾಃ
ಅರ್ಹಂತಮ್ ಶ್ಚೇತಿ ಜೈನಶಾಸನಮತೈಃ ಕರ್ಮೇತಿ ಮೀಮಾಂಸಕಃ
ಸೋ ಯಂ ವೋ ವಿದಧಾತು ವಾಂಛಿತಫಲಂ ಶ್ರೀ ಕೇಶವಃ ಸರ್ವದಾ
(ಎಪಿಗ್ರಾಪಿಯಾ ಕರ್ನಾಟಿಕಾ ಸಂಪುಟ 5, ಬೇಲೂರು, ಶಾಸನ 3)
ಅವನು ಶೈವರ ಶಿವ, ವೇದಾಂತಿಗಳ ಬ್ರಹ್ಮ, ಬೌದ್ಧರ ಬುದ್ಧ, ಜೈನರ ಅರ್ಹಂತ , ನೈಯಾಯಿಕರ ಕರ್ತಾ, ಮೀಮಾಂಸಕರ ಪಾಲಿಗೆ ಅವನೇ ಕರ್ಮ. ಹೀಗಿರುವ ಕೇಶವನು ಯಾರು ಏನನ್ನು ಬೇಡಿದರೋ ಅವರಿಗೆ ಅದನ್ನು ನೀಡುತ್ತಾನೆ ಎಂದು ಹೇಳಿದೆ. ಬೇಲೂರಿನ ಶಾಸನದಲ್ಲಿ ಕೇಶವನ ಗರ್ಭದಿಂದ ಬುದ್ಧ, ಜಿನ ಎಲ್ಲರೂ ಬಂದರೆ, ಲಂಕಾವತಾರ ಸೂತ್ರದ ಪ್ರಕಾರ ವಿಷ್ಣು, ವೃಷಭ ಮುಂತಾದವರು ತಥಾಗತ ಬುದ್ಧನ ಗರ್ಭದಿಂದ ಬಂದವರು.
Related Articles
Advertisement
ಯಂ ವಿಶ್ವಂ ವೇದವೇದ್ಯಂ ಜನನಜಲನಿಧೇರ್ ಭಂಗಿಣಪಾರದಶ್ವಾìಪೌರ್ವಾಪರ್ಯಾವಿರುದ್ಧಾಂ ವಚನಂ ಅನುಪಮಂ ನಿಶ್ಕಲಂಕಂ ಯದೀಯಂ
ತಂ ವಂದೇ ಸಾಧುವಂದ್ಯಂ ಸಕಲ ಗುಣನಿಧಿಂ ಧ್ವಸ್ತದೋಷದ್ವಿಷಂತಂ
ಬುದ್ಧಂ ವಾ ವರ್ಧಮಾನಂ ಶತದಲನಿಲಯಂ ಕೇಶವಂ ವಾ ಶಿವಂ ವಾ
ಬುದ್ಧ-ವರ್ಧಮಾನ-ಕೇಶವ-ಶಿವ ಎಲ್ಲರಿಗೂ ನಮಸ್ಕರಿಸುವ ಜೈನ ಪದ್ಯವಿದು. ಒಟ್ಟಿನಲ್ಲಿ ಬುದ್ಧನೇ ಕೇಶವ, ಕೇಶವನೇ ಬುದ್ಧ , ಅವನೇ ಜಿನ ಎಂಬ ಅಂಶದಲ್ಲಿ ಭಾರತೀಯ ಮಾನಸಿಕತೆಯಲ್ಲಿ ಏಕಾಭಿಪ್ರಾಯವಿದೆ. ಆಯಾ ಧರ್ಮದವರು ತಮ್ಮ ಗ್ರಂಥಗಳಲ್ಲಿ ಸಹಜವಾಗಿ ತಮ್ಮ ದೈವಕ್ಕೆ ಹೆಚ್ಚಿನ ಸ್ಥಾನ ನೀಡುತ್ತಾರೆ. ಲಂಕಾವತಾರ ಸೂತ್ರದ ಈ ಅಧ್ಯಾಯದಲ್ಲಿ ಮುಂದುವರಿದು ತಥಾಗತನನ್ನು ಈಶ್ವರ, ಕಪಿಲ, ಭೂತಾಂಶ, ಭಾಸ್ಕರ, ಅರಿಷ್ಟನೇಮಿ, ರಾಮ, ವ್ಯಾಸ, ಶುಕ್ರ, ಇಂದ್ರ, ಬಲಿ, ವರುಣ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಅದೇ ರೀತಿ ಅವನನ್ನು ನಿರ್ವಾಣ ಎಂದೂ, ಧರ್ಮಧಾತುವೆಂದೂ, ಶೂನ್ಯತಾ ಎಂದೂ, ತಥತಾ ಎಂದೂ, ಸತ್ಯ ಎಂದೂ ಕರೆಯಲಾಗಿದೆ. ಜತೆಗೆ ಅನಿರೋಧಾನುತ್ಪಾದ ಶೂನ್ಯತಾ ಎಂದೂ ಸಂಬೋಧಿಸಲಾಗಿದೆ. ಈ ಗ್ರಂಥ ಬೌದ್ಧರಲ್ಲಿ ಇದ್ದ ಧಾರ್ಮಿಕ ಸೌಜನ್ಯವನ್ನು ಬಿಂಬಿಸುತ್ತದೆ.
ಎರಡರಿಂದ ಏಳನೆಯ ಅಧ್ಯಾಯದಲ್ಲಿ ವಿಜ್ಞಾನವಾದ ಕುರಿತ ಚರ್ಚೆಯಿದೆ. ಎಂಟನೆಯ ಅಧ್ಯಾಯ ಮಾಂಸಾಹಾರ ನಿಷೇಧದ ವಿಚಾರ ಬಂದಿದೆ. ಜೈನರಂತೆ ಬೌದ್ಧರೂ ಮಾಂಸಾಹಾರಕ್ಕೆ ಅಧ್ಯಾತ್ಮ ಸಾಧನೆಯಲ್ಲಿ ವಿರೋಧ-ನಿಷೇಧ ಎರಡೂ ವ್ಯಕ್ತಪಡಿಸಿದ್ದರು. ಹತ್ತನೆಯ ಅಧ್ಯಾಯದಲ್ಲಿ ವ್ಯಾಕರಣ ಕುರಿತು ಚರ್ಚೆಯಿದೆ. ಬುದ್ಧನ ನಂತರ ಯಾರು ಎಂಬ ವಿಷಯವು ಇಲ್ಲಿ ಬಂದಿದೆ.ವ್ಯಾಸ, ಕಣಾದ, ಋಷಭ, ಕಪಿಲ ಜನನ ಎಂದು ಭಗವಾನ್ ಬುದ್ಧ ಹೇಳುತ್ತಾನೆ. ತಮ್ಮ ನಿರ್ವಾಣದ ನೂರು ವರ್ಷದ ನಂತರ ವ್ಯಾಸ, ಕೌರವ, ಪಾಂಡವ, ರಾಮ, ಮೌರ್ಯ (ಚಂದ್ರಗುಪ್ತ) ಇವರ ಜನನವಾಗುತ್ತದೆ ಎಂದು ಸಹ ಬುದ್ಧನ ವಚನವಿದೆ. ಮುಂದೆ ಜನಿಸುವ ಪಾಣಿನಿ, ಅಕ್ಷಪಾದ, ಬೃಹಸ್ಪತಿ, ಕಾತ್ಯಾಯನ, ಯಾಜ್ಞವಲ್ಕ್ಯ, ವಾಲ್ಮೀಕಿ, ಕೌಟಿಲ್ಯ, ಆಶ್ವಲಾಯನರ ಕುರಿತು ವಿಷಯಗಳು ಬಂದಿವೆ. ಲಂಕಾವತಾರದ ಈ ಅಧ್ಯಾಯ ಗುಪ್ತಸಾಮ್ರಾಜ್ಯದ ನಂತರದ್ದು ಎಂದು ಆಚಾರ್ಯ ನರೇಂದ್ರ ಮೊದಲಾದ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಮನಸ್ಸಿನ ಆಟ, ಅದು ಒಂದು ವಸ್ತುವನ್ನು ಇನ್ನೊಂದಕ್ಕಿಂತ ಉತ್ತಮ, ಅಧಮ ಎಂದು ನೋಡಲು ಬಲವಂತಪಡಿಸಿ ನಮ್ಮನ್ನು ಗಲಿಬಿಲಿಗೊಳಿಸುತ್ತದೆ. ಆದರೆ ಪ್ರಜ್ಞೆ, ವಿಜ್ಞಾನವೊಂದೇ ಸತ್ಯ ಎಂಬುದನ್ನು ಈ ಸೂತ್ರ ತಿಳಿಸುತ್ತದೆ. ಎಲ್ಲವೂ ಮನಸ್ಸಿನಿಂದ ಬರುತ್ತಿದೆ ಎಂಬುದನ್ನು ಅರಿಯಿರಿ, ಜನನ, ಜೀವನ ಮತ್ತು ಕಣ್ ಮರೆಯಾಗುವಿಕೆಯನ್ನು ತಿರಸ್ಕರಿಸಬೇಕು. ನಾವು ಹೇಗಿದ್ದೇವೆ ಎಂದರೆ, ಈ ದರ್ಶನದ ಪ್ರಕಾರ- ಮಣ್ಣಿನಲ್ಲಿ ಅದ್ದಿದ ಆಭರಣದಂತೆ. ಸದಾ ಶುದ್ಧವಾದ-ನಿಶ್ಚಲವಾದ ತಥಾಗತಗರ್ಭವು ಐದು ಸ್ಕಂಧಗಳಿಂದ ಕೂಡಿ ಮಲಿನಗೊಂಡ ಆಭರಣದಂತಿದೆ. ಅದಕ್ಕೆ ದುರಾಸೆ, ಕ್ರೋಧ, ಭ್ರಮೆಯ ಮಾಲಿನ್ಯ ಅಂಟಿದೆ. ಇದರಿಂದ ಬಿಡುಗಡೆಯಾಗುವ ಉಪಾಯವನ್ನು ಲಂಕಾವತಾರ ಸೂತ್ರ ತಿಳಿಸುತ್ತದೆ. ಈಗಿರುವ ಅಜ್ಞಾನದ ಆವರಣ ದಾಟುವವರೆಗೂ ಬುದ್ಧನ ಅರಿವು ಬರುವುದಿಲ್ಲ, ಮನಸ್ಸಿನ ಗೋಡೆಯನ್ನು ದಾಟಬೇಕು ಎಂದು ತಿಳಿಸಿ, ಅದಕ್ಕೆ ದಾರಿಯನ್ನು ಲಂಕಾವತಾರ ಸೂತ್ರ ತಿಳಿಸಿಕೊಡುತ್ತದೆ. ಡಿ.ಟಿ. ಸುಜುಕಿ ಎಂಬ ವಿದ್ವಾಂಸರು ಈ ಸೂತ್ರವನ್ನು ಕುರಿತು ದೀರ್ಘವಾದ ಬರೆಹವನ್ನು ಮಾಡಿದ್ದು, ಇಂದಿಗೂ ಅದು ವಿಶ್ವಾಸಾರ್ಹ ಮೂಲವೆಂದು ಪರಿಗಣಿಸಲ್ಪಟ್ಟಿದೆ. ಯಾರು ಟಿಬೆಟನ್, ಚೀನೀ, ಜಪಾನೀ ಭಾಷೆ ಓದಬಲ್ಲರೋ ಅವರು ಮೂಲದಲ್ಲಿ ಅಲ್ಲಿ ಇದಕ್ಕಿರುವ ವ್ಯಾಖ್ಯಾನಗಳನ್ನು ನೋಡಬಹುದು. ಬೌದ್ಧಧರ್ಮವು ಭಾರತದಾಚೆ ಹೋಗಿ ಸ್ಥಾಪನೆಗೊಳ್ಳುವುದರಲ್ಲಿ ಲಂಕಾವತಾರ ಸೂತ್ರದ ಪಾಲಿದೆ. ಚೀನಾ, ಟಿಬೆಟ್, ಜಪಾನ್ ದೇಶಗಳಲ್ಲಿ ಈ ಗ್ರಂಥಕ್ಕೆ ಭಾರಿ ಗೌರವವುಂಟು. ಜಿ. ಬಿ. ಹರೀಶ