ಬಂಟ್ವಾಳ: ಬಿ.ಸಿ.ರೋಡ್ ಬಸ್ ನಿಲ್ದಾಣ ಬಳಿ ಇಳಿಜಾರು ಸಮಸ್ಯೆ ಯಿಂದ ಪ್ರಯಾಣಿಕರು ಬೀಳುವ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಚರಂಡಿ ನಿರ್ಮಿಸಿ ಮಣ್ಣು ತುಂಬುವ ಕಾಮಗಾರಿ ನಡೆಸಲಾಗಿದೆ. ಆದರೂ ಕಾಮಗಾರಿಯನ್ನು ಪೂರ್ತಿಗೊಳಿಸದ ಪರಿಣಾಮ ಮಳೆ ಬಂದರೆ ಇನ್ನಷ್ಟು ತೊಂದರೆ ಅನುಭ ವಿಸುವ ಸಾಧ್ಯತೆ ಹೆಚ್ಚಿದೆ.
ಮಂಗಳೂರು ಭಾಗದಿಂದ ಆಗಮಿಸುವ ಬಸ್‌ಗಳು ಬಿ.ಸಿ.ರೋಡ್ ನಲ್ಲಿ ಹೆದ್ದಾರಿ ಬದಿ ಪ್ರಯಾಣಿಕರನ್ನು ಇಳಿಸುತ್ತಿದ್ದು, ಈ ಪ್ರದೇಶವು ತೀರಾ ಇಳಿಜಾರಿನಿಂದ ಕೂಡಿದೆ. ಪರಿ ಣಾಮ ಬಸ್‌ನಿಂದ ಇಳಿಯುವ ಪ್ರಯಾ ಣಿಕರು ನಿಯಂತ್ರಣ ಸಿಗದೆ ನಿತ್ಯವೂ ಬೀಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವ್ಯವಸ್ಥೆಯಿಂದ ಈ ಸ್ಥಿತಿ ಉಂಟಾಗಿದ್ದರೂ, ಪ್ರಾಧಿಕಾರ ಹೇಳುವ ಪ್ರಕಾರ ಅಲ್ಲಿ ಬಸ್‌ಗಳು ನಿಲ್ಲು ವಂತೆಯೇ ಇಲ್ಲ.
ಜತೆಗೆ ಅಲ್ಲಿ ಕಾಮಗಾರಿ ನಡೆಸುವುದಕ್ಕೂ ಎನ್‌ಎಚ್‌ಎಐನ ಅನುಮತಿಯೂ ಇಲ್ಲ. ಆದರೂ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ಸೂಚನೆಯಂತೆ ಗುತ್ತಿಗೆ ಸಂಸ್ಥೆಯು ಕಾಮಗಾರಿ ಆರಂಭಿಸಿ, ಹೆದ್ದಾರಿಯ ಬದಿಯಲ್ಲಿ ನೀರು ಹರಿಯುವುದಕ್ಕೆ ಚರಂಡಿ ನಿರ್ಮಿಸಿ ಬಳಿಕ ಇಳಿಜಾರು ಪ್ರದೇಶಕ್ಕೆ ಮಣ್ಣು ತುಂಬಿ ಎತ್ತರ ಮಾಡುವ ಕಾರ್ಯ ನಡೆಸಿತ್ತು. ಆದರೆ ಎಲ್ಲೆಂದರಲ್ಲಿ ಮಣ್ಣು ತುಂಬಲಾಗಿದ್ದು, ಇದೀಗ ಮಳೆ ಬಂದರೆ ತುಂಬಿರುವ ಮಣ್ಣಿನ ರಾಶಿ ಸ್ಥಳೀಯ ಅಂಗಡಿಗಳಿಗೆ ನುಗ್ಗುವ ಆತಂಕವೂ ಎದುರಾಗಿದೆ. ಹಾಕಿರುವ ಮಣ್ಣನ್ನು ವ್ಯವಸ್ಥಿತ ರೀತಿಯಲ್ಲಿ ಸಮತಟ್ಟು ಮಾಡುವ ಕಾರ್ಯವನ್ನೂ ಮಾಡಿಲ್ಲ. ಖಾಲಿ ಮಣ್ಣು ಹಾಕಿರುವ ಪರಿಣಾಮ ಮಳೆ ಬಂದರೆ ಕೆಸರಾಗುವ ಸಾಧ್ಯತೆಯೂ ಹೆಚ್ಚಿದೆ. ಇಳಿಜಾರಿನಲ್ಲಿ ಬೀಳುತ್ತಿದ್ದವರು ಮುಂದಿನ ದಿನಗಳಲ್ಲಿ ಕೆಸರಿನಲ್ಲಿ ಬೀಳುವ ಸಾಧ್ಯತೆಯೂ ಇದೆ. ಹೀಗಾಗಿ ಅರ್ಧಕ್ಕೆ ಬಿಟ್ಟಿರುವ ಕಾಮಗಾರಿಯನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಿ ಮಣ್ಣು ತುಂಬಿರುವ ಪ್ರದೇಶದಲ್ಲಿ ಇಂಟರ್‌ಲಾಕ್ ಅಳವಡಿಸಿದರೆ ಕೆಸರಾಗುವುದು ತಪ್ಪಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ನೀರು ಕೂಡ ನಿಲ್ಲುತ್ತಿದೆ
ಪ್ರಸ್ತುತ ಚರಂಡಿ ನಿರ್ಮಿಸಿದ ಸ್ಥಳದಲ್ಲಿ ಹೊಂಡದಂತಾಗಿ ಪೈಪ್‌ಲೈನ್‌ನಿಂದ ಹೊರಬರುವ ನೀರು ನಿಲ್ದಾಣದ ಪಕ್ಕದಲ್ಲೇ ನಿಲ್ಲುತ್ತಿದೆ. ಹಲವು ದಿನಗಳಿಂದ ಅದೇ ರೀತಿ ನೀರು ನಿಲ್ಲುತ್ತಿದ್ದು, ಮುಂದೆ ಮಳೆ ಬಂದರೆ ಇನ್ನಷ್ಟು ನೀರು ನಿಲ್ಲುವ ಆತಂಕವೂ ಇದೆ. ಕನಿಷ್ಠ ಪಕ್ಷ ನೀರನ್ನು ಚರಂಡಿಗೆ ಹೋಗುವ ರೀತಿ ಮಾಡಿದರೂ ಯಾವುದೇ ತೊಂದರೆ ಇರುತ್ತಿರಲಿಲ್ಲ.
ತಂಗುದಾಣ ಕೂಡ ಇಲ್ಲ
ಹಿಂದೆ ಇಳಿಜಾರು ಇದ್ದ ಪ್ರದೇಶ ಕಾಮಗಾರಿಯ ಬಳಿಕ ಸರಿಯಾಗಿದ್ದರೂ, ಅದರ ಸ್ವಲ್ಪ ಮುಂದಕ್ಕೆ ಅದೇ ರೀತಿಯ ಪರಿಸ್ಥಿತಿ ಇದೆ. ಅಲ್ಲೂ ಕೂಡ ವ್ಯವಸ್ಥಿತ ರೀತಿಯ ಕಾಮಗಾರಿ ನಡೆಸುವ ಅನಿವಾರ್ಯತೆ ಇದೆ. ಆ ಭಾಗದಲ್ಲಿ ಪೂರ್ತಿ ಉದ್ದಕ್ಕೆ ಹೆದ್ದಾರಿಯಷ್ಟೇ ಎತ್ತರಗೊಳಿಸಿದರೆ ಹೆದ್ದಾರಿಯಲ್ಲಿ ನಿಲ್ಲುವ ಬಸ್‌ಗಳು ಬದಿಗೆ ಬಂದು ನಿಂತರೆ ಇತರ ವಾಹನಗಳಿಗೂ ಅನು ಕೂಲವಾಗಲಿದೆ. ಬಿ.ಸಿ.ರೋಡ್‌ನಿಂದ ಪುತ್ತೂರು, ಧರ್ಮಸ್ಥಳ, ಉಪ್ಪಿನಂಗಡಿ, ವಿಟ್ಲ ಮೊದಲಾದ ಪ್ರದೇಶಗಳು ಸೇರಿ ಬೆಂಗಳೂರು, ಸುಳ್ಯ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು ಹೀಗೆ ಹತ್ತಾರು ಕಡೆಗಳಿಗೆ ಸಾಗುವ ಬಸ್ ಗಳು ಈ ಸ್ಥಳದಲ್ಲೇ ನಿಲ್ಲುತ್ತಿದ್ದು, ದಿನನಿತ್ಯ ಸಾವಿರಾರು ಪ್ರಯಾಣಿಕರು ಕಾಯುತ್ತಾರೆ. ಈ ಹಿಂದೆ ಇಲ್ಲಿ ತಂಗುದಾಣ ನಿರ್ಮಾಣವಾಗುತ್ತದೆ ಎಂದು ಹೇಳಿದ್ದರೂ ಅದು ನಿರ್ಮಾಣವಾಗಿಲ್ಲ ಎಂಬುದು ಸ್ಥಳೀಯರ ಆರೋಪ.