ಬಳ್ಳಾರಿ: ಬಾಬು ಜಗಜೀವನ್‌ರಾಮ್ ಭವನ ದಶಕ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಅನುದಾನದ ಕೊರತೆಯನ್ನೂ ಎದುರಿಸುತ್ತಿದ್ದು, ಇದೀಗ ಹೆಚ್ಚುವರಿ ಅನುದಾನಕ್ಕಾಗಿ ಜಿಲ್ಲಾಡಳಿತ ಪುನಃ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ಜಿಲ್ಲೆಯ ದಲಿತ ಸಂಘಟನೆಗಳ ಮನವಿಯ ಮೇರೆಗೆ 2010-11ನೇ ಸಾಲಿನಲ್ಲಿ ಕೆರೆಕಟ್ಟೆ ಪ್ರದೇಶದಲ್ಲಿನ ಒಂದುವರೆ ಎಕರೆ ಜಮೀನನ್ನು ಜಿಲ್ಲಾಡಳಿತ ಕಂದಾಯ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ನೀಡಿತು. ಭವನ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡ ನಿರ್ಮಿತಿ ಕೇಂದ್ರ, ಮೂರು ಕೋಟಿ ರೂ. ವೆಚ್ಚದ ಯೋಜನೆಯನ್ನು ಸಿದ್ಧಪಡಿಸಿ ನೀಡಿತು. ಅದರಂತೆ ಸಮಾಜ ಕಲ್ಯಾಣ ಇಲಾಖೆಯಿಂದ 2 ಕೋಟಿ ರೂ., ಮಹಾನಗರ ಪಾಲಿಕೆಯಿಂದ 1 ಕೋಟಿ ರೂ. ಅನುದಾನ ನೀಡುವಂತೆ ಕೋರಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯಿಂದ ನಾಲ್ಕು ಕಂತುಗಳಲ್ಲಿ ತಲಾ 50 ಲಕ್ಷ ರೂ. ಬಿಡುಗಡೆ ಮಾಡಿ ಭವನ ನಿರ್ಮಾಣಕ್ಕೆ ಮುಂದಾಗಿದ್ದು, ಪಾಲಿಕೆಯಿಂದ ನೀಡಬೇಕಿದ್ದ 1 ಕೋಟಿ ರೂ. ಅನುದಾನ ನೀಡಲಿಲ್ಲ.
2014-15ನೇ ಸಾಲಿನಲ್ಲಿ ಪಾಲಿಕೆ ಅಂದಿನ ಆಯುಕ್ತರು, ಪಾಲಿಕೆಯಲ್ಲಿ ಸದ್ಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ನೀವು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ರಾಜ್ಯ ಸರ್ಕಾರದಿಂದಲೇ ಪಡೆಯುವಂತೆ ಅಂದಿನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಅದರಂತೆ ಜಿಲ್ಲಾಧಿಕಾರಿಗಳು ಪುನಃ ಸರ್ಕಾರಕ್ಕೆ ಪತ್ರ ಬರೆದು ಒಂದು ಕೋಟಿ ರೂ. ಬಿಡುಗಡೆ ಮಾಡುವಂತೆ ಕೋರಿದ್ದು, 2016-17ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 1 ಕೋಟಿ ರೂ. ಬಿಡುಗಡೆಯಾಗಿದ್ದು, ಇದನ್ನೂ ಸಹ ಭವನ ನಿರ್ಮಾಣ ಕಾಮಗಾರಿಗಾಗಿ ನಿರ್ಮಿತಿ ಕೇಂದ್ರಕ್ಕೆ ನೀಡಲಾಯಿತು. ಕಾಮಗಾರಿ 5 ವರ್ಷ ವಿಳಂಬವಾಗಿದ್ದರಿಂದ ಯೋಜನಾ ವೆಚ್ಚವೂ ಹೆಚ್ಚಳವಾಗಿದ್ದು, 2018-19ನೇ ಸಾಲಿನಲ್ಲಿ ಪುನಃ ಜಿಲ್ಲಾಧಿಕಾರಿಗಳು ಪುನಃ ಸರ್ಕಾರಕ್ಕೆ ಪತ್ರ ಬರೆದಿದ್ದು, ಹೆಚ್ಚುವರಿಯಾಗಿ ಒಂದು ಕೋಟಿ ರೂ. ಅನುದಾನ ಕೋರಿದ್ದಾರೆ. 50 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಸೇರಿ ಇನ್ನಿತರೆ ಕಾಮಗಾರಿಗೆ ಬಳಕೆ ಮಾಡಲಾಗುತ್ತದೆ. ಇನ್ನುಳಿದ 50 ಲಕ್ಷ ರೂ. ವೆಚ್ಚದಲ್ಲಿ ಭವನದಲ್ಲಿ ಬಾಕಿ ಕಾಮಗಾರಿಯನ್ನು ನಿರ್ಮಿಸಿ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜ್ ಆನಂದರೆಡ್ಡಿಯವರು ಸ್ಪಷ್ಟಪಡಿಸಿದ್ದಾರೆ.
ಮೂರು ಅಂತಸ್ತಿನ ಭವನ
ಜಗಜೀವನ್ ರಾಮ್ ಭವನ ನೆಲಮಹಡಿ ಸೇರಿ ಮೂರು ಅಂತಸ್ತು ಹೊಂದಿದೆ. ಮೂರನೇ ಮಹಡಿಯಲ್ಲಿ ಸಭಾಂಗಣವಿದ್ದು, ಸಭೆ, ಸಮಾರಂಭ, ಮದುವೆ ಸಮಾರಂಭ ಆಯೋಜನೆ ಮಾಡಬಹುದು. ಎರಡನೇ ಮಹಡಿಯಲ್ಲಿ ನಾಲ್ಕು ಕೊಠಡಿಗಳು ಇದ್ದು, ನೆಲಮಹಡಿಯಲ್ಲಿ ಊಟದ ವ್ಯವಸ್ಥೆ ಮಾಡಲು ಅವಕಾಶವಿದೆ. ಕಟ್ಟಡಕ್ಕೆ ಈಗಾಗಲೇ ಬಣ್ಣ ಬಳಿಯಲಾಗಿದ್ದು, ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಉಳಿದಿದ್ದು, ಅಧಿಕಾರಿಗಳು ಮುತುವರ್ಜಿ ವಹಿಸಿದಲ್ಲಿ ತ್ವರಿತವಾಗಿ ಪೂರ್ಣಗೊಳ್ಳಲಿದೆ.
ಕುಡುಕರ ಅಡ್ಡವಾದ ಭವನ
ದಶಕದಿಂದ ನಿರ್ಮಾಣ ಹಂತದಲ್ಲೇ ಇರುವ ಜಗಜೀವನ್‌ರಾಮ್ ಭವನ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕುಡುಕರ ಅಡ್ಡೆಯಾಗಿದೆ. ರಾತ್ರಿ ವೇಳೆ ಭವನದ ಮೆಟ್ಟಿಲುಗಳ ಮೇಲೆಯೇ ಕಿಡಿಗೇಡಿಗಳು ಮದ್ಯಸೇವಿಸಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಕಿಟಕಿ, ಬಾಗಿಲು ಅಳವಡಿಸಿದ್ದರೂ ಬೀಗ ಹಾಕದ ಭವನದೊಳಗೆ ಧೂಳು ಆವರಿಸಿದ್ದು, ದುಷ್ಚಟಗಳ ತಾಣವಾಗಿದೆ.
ಕೆರೆಕಟ್ಟೆ ಪ್ರದೇಶದಲ್ಲಿ ಜಗಜೀವನ್‌ರಾಮ್ ಭವನ ನಿರ್ಮಾಣಕ್ಕೆ 2011-12ನೇ ಸಾಲಿನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಚಾಲನೆ ನೀಡಲಾಯಿತು. ವಿಳಂಬವಾಗಿದ್ದ ಕಾಮಗಾರಿಯನ್ನು ಡಿಎಂಎಫ್ ನಿಧಿ ಬಳಸಿ ತ್ವರಿತವಾಗಿ ಪೂರ್ಣಗೊಳಿಸಲು ಚಿಂತನೆ ನಡೆಸಿತ್ತಾದರೂ, ಅದರಲ್ಲಿ ಅವಕಾಶವಿಲ್ಲ. ಹಾಗಾಗಿ ಸರ್ಕಾರದಿಂದಲೇ ಹೆಚ್ಚುವರಿಯಾಗಿ 1 ಕೋಟಿ ರೂ. ಅನುದಾನ ಪಡೆಯಲಾಗುತ್ತಿದ್ದು, ತ್ವರಿತವಾಗಿ ಪೂರ್ಣಗೊಳಿಸಲಾಗುವುದು.
– ತೇಜ್‌ಆನಂದ್‌ರೆಡ್ಡಿ, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬಳ್ಳಾರಿ