ಬೆಂಗಳೂರು: ಬಿಬಿಎಂಪಿ ಹಾಗೂ ರಕ್ಷಣಾ ಇಲಾಖೆಯ ನಡುವಿನ ತಿಕ್ಕಾಟ ಮುಂದುವರಿದಿದ್ದು, ರಕ್ಷಣಾ ಇಲಾಖೆಯ ಭೂಮಿ ದೊರೆಯದೆ ಕಾಮಗಾರಿ ಆರಂಭಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಬೇಕಾಗುವ ರಕ್ಷಣಾ ಇಲಾಖೆ ಜಾಗ ಹಸ್ತಾಂತರಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅನುಮತಿದ್ದು, ಈ ಕುರಿತಂತೆ ರಾಜ್ಯ ಸಕಾರದೊಂದಿಗೂ ಒಡಂಬಡಿಕೆ ಮಾಡಿಕೊಂಡಿದ್ದರು.
ಆ ಹಿನ್ನೆಲೆಯಲ್ಲಿ ಶನಿವಾರ 16 ಕೋಟಿ ರೂ. ವೆಚ್ಚದಲ್ಲಿ ಕಾವಲ್‌ಭೈರಸಂದ್ರದಿಂದ ಮೋದಿ ಗಾರ್ಡನ್‌ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯ ನೆರವೇರಿಸಲು ಪಾಲಿಕೆ ಸಿದ್ಧತೆ ನಡೆಸಿಕೊಂಡಿದ್ದರು. ಆದರೆ, ರಕ್ಷಣಾ ಇಲಾಖೆ ಅಧಿಕಾರಿಗಳು ಕೇಂದ್ರ ರಕ್ಷಣಾ ಇಲಾಖೆಯಿಂದ ನಮಗೆ ಯಾವುದೇ ಲಿಖೀತ ಆದೇಶ ಬಂದಿಲ್ಲ. ಹೀಗಾಗಿ ಸದ್ಯಕ್ಕೆ ಕಾಮಗಾರಿ ನಡೆಸುವುದು ಬೇಡ ಎಂದು ತಿಳಿಸಿದ್ದಾರೆ.
ರಕ್ಷಣಾ ಇಲಾಖೆ ಅಧಿಕಾರಿಗಳ ವಿರೋಧದಿಂದಾಗಿ ಬಿಬಿಎಂಪಿ ಶನಿವಾರದ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸದೆ ವಾಪಸಾಗಿದ್ದಾರೆ. ಅಲ್ಲದೆ, ಈ ಕುರಿತಂತೆ ಸೋಮವಾರ ಕೇಂದ್ರ ರಕ್ಷಣಾ ಸಚಿವಾಲಯದೊಂದಿಗೆ ಮಾತನಾಡಲು ಬಿಬಿಎಂಪಿ ನಿರ್ಧರಿಸಿದ್ದು, ಅಲ್ಲಿಯವರೆಗೆ ರಕ್ಷಣಾ ಇಲಾಖೆ ಜಾಗದಲ್ಲಿ ನಡೆಯಬೇಕಿದ್ದ ಕಾಮಗಾರಿಗಳು ಆರಂಭದಿರಲು ನಿರ್ಧರಿಸಿದೆ.
ಜಾಗ ಹಸ್ತಾಂತರ ಕುರಿತು ಸೂಕ್ತ ಆದೇಶ ಬಂದಿಲ್ಲ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಶನಿವಾರ ನಡೆಯಬೇಕಿದ್ದ ಕಾವಲ… ಭೈರಸಂದ್ರದಿಂದ ಮೋದಿ ಗಾರ್ಡನ್‌ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನಡೆದಿಲ್ಲ. ಸೋಮವಾರ ಈ ಕುರಿತು ರಕ್ಷಣಾ ಇಲಾಖೆ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಲಾಗುವುದು.
-ಸಂಪತ್‌ರಾಜ್, ಮೇಯರ್