ರಾಣಿಬೆನ್ನೂರ: ತಾಲೂಕಿನಲ್ಲಿ 2017-18 ಮತ್ತು ಪ್ರಸಕ್ತ ಸಾಲಿಗೆ 1599 ಕ್ಕೂ ಹೆಚ್ಚು ರೈತರು ವಿಮಾ ಕಂತು ತುಂಬಿದ್ದರೂ ಬೆಳೆ ವಿಮಾ ಹಣ ಬಾರದೇ ಅನ್ಯಾಯವಾಗಿದೆ. ಬೆಳೆವಿಮೆ ತುಂಬಿದ ಎಲ್ಲ ರೈತರಿಗೂ ತಕ್ಷಣವೇ ಬೆಳೆ ವಿಮಾ ಪರಿಹಾರ ಮೊತ್ತ ಬಿಡುಗಡೆ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಬೆಳೆ ವಿಮೆ ಬಿಡುಗಡೆ ಕುರಿತು ನಡೆದ ಸಭೆಯಲ್ಲಿ ತಹಶೀಲ್ದಾರ್ ಸಿ.ಎಸ್.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನಲ್ಲಿ ಬೆಳೆವಿಮೆ ಸಮಸ್ಯೆ ಸೇರಿದಂತೆ ಸರ್ಕಾರದಿಂದ ಬಂದಿರುವ ಪರಿಹಾರದ ಹಣ ಸಹಿತ ಸಾಲದ ಅಕೌಂಟ್‌ಗಳಿಗೆ ಜಮೆ ಮಾಡಿಕೊಂಡಿದ್ದಾರೆ. ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಹಣವನ್ನು ಬಿಟ್ಟಿಲ್ಲ. ಬ್ಯಾಂಕ್ ವ್ಯವಸ್ಥಾಪಕರು ತಮಗೆ ತಿಳಿಯದಂತೆ ಖಾತೆಯಲ್ಲಿನ ಹಣ ಸಾಲದ ಖಾತೆಗೆ ತೆಗೆದುಕೊಳ್ಳುತ್ತಿರುವ ನಿರ್ಧಾರದಿಂದ ರೈತ ಕಷ್ಟ ಅನುಭವಿಸುತ್ತಿದ್ದಾನೆ. ರೈತನಿಗೆ ಆದ ಅನ್ಯಾಯ ಸರಿಪಡಿಸಿ, ನ್ಯಾಯ ಒದಗಿಸಬೇಕೆಂದು ಕಂದಾಯ ಅಧಿಕಾರಿ, ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಇನ್ಸೂರೆನ್ಸ್ ಕಂಪನಿ ಅಧಿಕಾರಿಗಳಿಗೆ ಮನವಿ ಮೂಲಕ ಆಗ್ರಹಿಸಿದರು.
ರೈತರಿಗೆ ಬೆಳೆವಿಮೆ ಹಣ ಬಾರದಿರಲು ಅನೇಕ ಕಾರಣಗಳಿವೆ. ಯುನಿಯನ್ ಬ್ಯಾಂಕಿನಿಂದ 1528 ರೈತರು ಜೋಹಿಸರಹರಳಹಳ್ಳಿ ಯುನಿಯನ್ ಬ್ಯಾಂಕಿನಿಂದ 71 ರೈತರು ಬೆಳೆ ವಿಮೆ ತುಂಬಿದ್ದಾರೆ. ಯಾರಿಗೂ ವಿಮೆ ಹಣವೇ ಬಿಡುಗಡೆಯಾಗಿಲ್ಲ. ಬೆಳೆವಿಮೆ ಹಣ ಬಿಡುಗಡೆಯಾಗದಿದ್ದರೆ. 1599 ರೈತರನ್ನು ಕರೆದುಕೊಂಡು ಬಂದು ಬ್ಯಾಂಕ್ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ವಸಂತರಾವ್ ಪಾಟೀಲ ಹಾಗೂ ಸತ್ಯನಾರಾಯಣ ಅವರೊಂದಿಗೆ ಚರ್ಚಿಸಿದ ತಹಶೀಲ್ದಾರ್ ಸಿ.ಎಸ್.ಕುಲಕರ್ಣಿ, ರೈತರೊಂದಿಗೆ ನಿಮ್ಮ ಬ್ಯಾಂಕಿನ ವ್ಯಾಪ್ತಿಗೆ ಬರುವ ಶಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ವಾರದೊಳಗೆ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಆದೇಶಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡದೆ ಒಟಿಎಸ್ ಸೌಲಭ್ಯ ಕಲ್ಪಿಸಿ ಸಾಲಮರುಪಾವತಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಎಲ್ಲ ಬ್ಯಾಂಕಿನಲ್ಲಿಯೂ ಮರುಪಾವತಿ ಯೋಜನೆಗಳು ಜಾರಿಗೆ ತರಬೇಕು. ರೈತರಿಗೆ ಅನುಕೂಲ ಮಾಡಿಕೊಟ್ಟರೆ ಯಾವೊಬ್ಬ ರೈತರು ಆತ್ಮಹತ್ಯೆಯಂತಹ ಹಾದಿ ಹಿಡಿಯುವುದಿಲ್ಲ. ಎಲ್ಲ ಬ್ಯಾಂಕನಲ್ಲಿಯೂ ಇಂತಹ ರೈತಪರ ಯೋಜನೆಗಳು ಜಾರಿಗೆಯಾಗಬೇಕಾಗಿದೆ ಎಂದರು.
ರೈತ ಮುಖಂಡ ರವೀಂದ್ರಗೌಡ ಪಾಟೀಲ, ಎಸ್.ಡಿ.ಹಿರೇಮಠ, ಸುರೇಶಪ್ಪ ಗರಡಿಮನಿ, ಹರಿಹರಗೌಡ ಪಾಟೀಲ, ರಾಜು ದೊಡ್ಡಮನಿ, ಸುರೇಶ ಹುಚ್ಚುನಗೌಡ್ರ, ಜಗದೀಶ ಕೆರೂಡಿ, ಕರಬಸಪ್ಪ ಮೇಗಳಮನಿ, ದೇವರೆಡ್ಡ ಎರೆಕುಪ್ಪಿ, ಜಮಾಲಸಾಬ ಶೇತಸನದಿ, ಮಂಜು ಕಂಚಿಕೇರಿ, ಶಿವಪುತ್ರಪ್ಪ ಮಲ್ಲಾಡದ ಸೇರಿದಂತೆ ಮತ್ತಿತರರು ಇದ್ದರು.