Advertisement
51ರಿಂದ 106 ರೂ.ಗೆ ಜಂಪ್!ಸುಬ್ರಹ್ಮಣ್ಯದಿಂದ ಮಂಗಳೂರಿಗೆ 51 ರೂ. ದರ ತೆತ್ತು ಪ್ರಯಾಣಿಸುತ್ತಿದ್ದವರು ಈಗ 106 ರೂ. ನೀಡುವಂತಾಗಿದೆ. ಕಡಬದಿಂದ 46 ರೂ. ಇದ್ದ ದರ 86 ರೂ.ಗೆ ಏರಿದೆ. ಸುಬ್ರಹ್ಮಣ್ಯ – ಉಪ್ಪಿನಂಗಡಿ ಮಧ್ಯೆ ಇದ್ದ ದರವೂ 40 ರೂ.ಗಳಿಂದ 55 ರೂ.ಗೆ ಏರಿಕೆಯಾಗಿದೆ. ಕಡಬದಿಂದ ಉಪ್ಪಿನಂಗಡಿಗೆ 28 ರೂ. ಟಿಕೆಟ್ ಇತ್ತು. ಈಗ 33 ರೂ. ಕೊಡಬೇಕು. ರಾಮಕುಂಜ, ಆಲಂಕಾರು, ನೆಟ್ಟಣ, ಬಿಳಿನೆಲೆ ಮುಂತಾದೆಡೆ ಹತ್ತಿ, ಇಳಿಯುವ ಪ್ರಯಾಣಿಕರ ಮೇಲೂ 10ರಿಂದ 15 ರೂ. ಹೆಚ್ಚುವರಿ ಹೊರೆ ಬಿದ್ದಿದೆ. ಈ ಏರಿಕೆ ಮಂಗಳೂರು ಡಿಪೋದ ಬಸ್ ಗಳಲ್ಲಿ ಮಾತ್ರ ಎಂಬುದು ಪ್ರಯಾಣಿಕರ ಆರೋಪ.
ದರ ಏರಿಕೆಯ ಕಾರಣದಿಂದಾಗಿ ಪ್ರಯಾಣಿಕರು ಮತ್ತು ಬಸ್ ನಿರ್ವಾಹಕರ ನಡುವೆ ದಿನಂಪ್ರತಿ ಜಗಳ ನಡೆಯುತ್ತಿದೆ. ನಿರ್ವಾಹಕರಲ್ಲಿ ಪ್ರಶ್ನಿಸಿದರೆ ಎಕ್ಸ್‌ಪ್ರೆಸ್ ಬಸ್ ಎನ್ನುವ ಉತ್ತರ ಸಿಗುತ್ತದೆ. ಆದರೆ ಶಟ್ಲ ಬಸ್ ನಂತೆ ಎಲ್ಲ ಕಡೆ ಜನರನ್ನು ಹತ್ತಿಸುವುದು, ಇಳಿಸುವುದು ನಡೆದೇ ಇದೆ. ಎಕ್ಸ್‌ಪ್ರೆಸ್ ಬಸ್ಸಿನ ದರ ತೆತ್ತು ಜನರು ಸಾಮಾನ್ಯ ಬಸ್ ಗಳಲ್ಲಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ನಿರ್ವಾಹಕರು ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಸಂಜೆ ಬಸ್ ನಾಪತ್ತೆ
ಕಳೆದ 25 ವರ್ಷಗಳಿಂದ ಕಡಬದಿಂದ ಮಂಗಳೂರಿನತ್ತ ಸಂಜೆ 6.45ಕ್ಕೆ ಕೊನೆಯ ಬಸ್ ಸಂಚರಿಸುತ್ತಿತ್ತು. ಸುಬ್ರಹ್ಮಣ್ಯದಿಂದ 6.15 ಕ್ಕೆ ಹೊರಡುತ್ತಿದ್ದ ಆ ಬಸ್ ಒಂದು ತಿಂಗಳಿನಿಂದ ನಾಪತ್ತೆಯಾಗಿದೆ. ಸಂಜೆಯ ವೇಳೆಗೆ ಮಂಗಳೂರಿನತ್ತ ಪ್ರಯಾಣಿಸುವ ಅನಿವಾರ್ಯತೆ ಉಳ್ಳವರು ಬಸ್ ತಂಗುದಾಣದಲ್ಲಿಯೇ ಚಡಪಡಿಸುತ್ತ ಬೇರೆ ವಾಹನಗಳಿಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳೂ ತೀವ್ರ ತೊಂದರೆ ಎದುರಿಸುವಂತಾಗಿದೆ.
Related Articles
ಬೇಕಾಬಿಟ್ಟಿ ದರ ಏರಿಕೆ ಮಾಡಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವ ಕುರಿತು ಮಂಗಳೂರು ವಿಭಾಗದ
KSRTC ಅಧಿಕಾರಿಗಳಲ್ಲಿ ವಿಚಾರಿಸಿದರೆ ಬೇಜವಾಬ್ದಾರಿಯ ಉತ್ತರ ಸಿಗುತ್ತದೆ. ಸಂಜೆಯ ವೇಳೆ ಉಪ್ಪಿನಂಗಡಿ ಮತ್ತು ಮಂಗಳೂರಿನತ್ತ ಹೆಚ್ಚುವರಿ ಬಸ್ ಬೇಕು ಎನ್ನುವ ಬೇಡಿಕೆ ಇರುವಾಗಲೇ ಇದ್ದ ಬಸ್ ನ್ನು ರದ್ದು ಮಾಡಿದ್ದಾರೆ. ದೂರು ನೀಡಲು ಹೋದರೆ ಕೇಳಿಸಿಕೊಳ್ಳುವ ವ್ಯವಧಾನ ಅಧಿಕಾರಿಗಳಲ್ಲಿಲ್ಲ. ಮಾಹಿತಿ ಬೇಕಾದರೆ ಲಿಖಿತ ದೂರು ನೀಡಿ ಎಂದು ಉದ್ಧಟತನದಿಂದ ಮಾತನಾಡುತ್ತಾರೆ. ಜನಪ್ರತಿನಿಧಿಗಳು ಮಧ್ಯೆಪ್ರವೇಶಿಸಿ, ಸಮಸ್ಯೆ ಬಗೆಹರಿಸಬೇಕು.
– ಶಿವರಾಮ ಎಂ.ಎಸ್., ಅಧ್ಯಕ್ಷರು, ಕಡಬ ವರ್ತಕ ಸಂಘ
Advertisement
— ನಾಗರಾಜ್ ಎನ್.ಕೆ.