Advertisement

ಗ್ರಾಪಂನಲ್ಲಿ ಅವಿಶ್ವಾಸ ಅಸಾಧ್ಯ

06:00 AM Dec 16, 2018 | Team Udayavani |

ಬೆಂಗಳೂರು: ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಂಬಂಧ ಸರ್ಕಾರ ಈವರೆಗೂ ನಿಯಮಗಳನ್ನು ರೂಪಿಸದ ಕಾರಣ, ಸದ್ಯ ಅಂತಹ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಶನಿವಾರ ಹೇಳಿದೆ.

Advertisement

ಈ ಕುರಿತಂತೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ. ಅರ್ಜಿದಾರರ ಪರ ವಾದ ಮಂದಿಸಿದ್ದ ವಕೀಲರು, 30 ತಿಂಗಳ ಅಧಿಕಾರಾವಧಿಯೊಳಗೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಕೇಳಿ ಬರುವ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಮತ್ತಿತರ ಗಂಭೀರ ಸ್ವರೂಪದ ಆರೋಪಗಳಿಗೆ ಗ್ರಾಮ ಸ್ವರಾಜ್‌ ಕಾಯ್ದೆ ಪ್ರಕಾರ ಯಾವುದೇ ಸಂದರ್ಭದಲ್ಲಾದರೂ ಅವರು ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಹುದೆಂದು ಹೇಳಲಾಗಿದೆ. ಆದರೆ, ಯಾವ ರೀತಿ ಕ್ರಮ ಜರುಗಿಸಬಹುದೆಂಬ ಬಗ್ಗೆ ಸರ್ಕಾರ ಇಲ್ಲಿ ತನಕ ನಿಯಮಗಳನ್ನು ರೂಪಿಸಿಲ್ಲ. ಹಾಗಾಗಿ, ಅರ್ಜಿದಾರರಿಗೆ ಉಪವಿಭಾಗಾಧಿಕಾರಿ ಜಾರಿಗೊಳಿಸಿದ ನೋಟಿಸ್‌ ಕಾನೂನು ಬಾಹಿರ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಅವಿಶ್ವಾಸ ನಿರ್ಣಯದ ನೋಟಿಸ್‌ ಬಂದಾಗ ಸಭೆ ಕರೆದು ಉಪವಿಭಾಗಾಧಿಕಾರಿಗಳು ಮುಂದಿನ ಕ್ರಮ ಜರುಗಿಸಬೇಕಾಗುತ್ತದೆ ಎಂದು ಉಪವಿಭಾಗಾಧಿಕಾರಿಗಳ ಕ್ರಮವನ್ನು ಸಮರ್ಥಿಸಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಜ್ಯ ಸರ್ಕಾರ ಇನ್ನೂ ನಿಯಮಗಳನ್ನು ರೂಪಿಸಿಲ್ಲ. ಹಾಗಾಗಿ, ಉಪವಿಭಾಗಾಧಿಕಾರಿ ಜಾರಿಗೊಳಿಸಿರುವ ನೋಟಿಸ್‌ ಈ ಹಂತದಲ್ಲಿ ಊರ್ಜಿತವಾಗುವುದಿಲ್ಲ. ಅದೇ ರೀತಿ 30 ತಿಂಗಳ ಅವಧಿ ಮುಗಿಸಿದ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದರೆ ಅದಕ್ಕೆ ನೋಟಿಸ್‌ ಜಾರಿಗೊಳಿಸಲು ಉಪವಿಭಾಗಾಧಿಕಾರಿಗಳು ಸ್ವತಂತ್ರರಿದ್ದಾರೆ ಎಂದು ಅಭಿಪ್ರಾಯಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next