Advertisement

ಮಳೆಗಾಲದ ಅನಿರೀಕ್ಷಿತ ಅತಿಥಿಗಳು…

09:05 AM Sep 24, 2019 | Sriram |

ಮಳೆಗಾಲದಲ್ಲಿ ನೆಲೆ ಕಳೆದುಕೊಂಡ ಪ್ರಾಣಿಗಳು, ಹುಳ ಹುಪ್ಪಟೆಗಳು ಮನೆ ಹೊಕ್ಕಲು ಪ್ರಯತ್ನಿಸಬಹುದು. ಇವುಗಳಲ್ಲಿ ವಿಷಜಂತುಗಳೂ ಇರುವುದರಿಂದ, ನಾವು ವಿಶೇಷ ಕಾಳಜಿ ವಹಿಸಿ, ಸೂಕ್ತ ರಕ್ಷಣೆ ಪಡೆಯುವುದು ಒಳ್ಳೆಯದು.

Advertisement

ತಮ್ಮ ಪಾಡಿಗೆ ತಮ್ಮ ತಮ್ಮ ಗೂಡುಗಳಲ್ಲಿ ಅಡಗಿದ್ದ ಹಲವಾರು ಪ್ರಾಣಿಗಳು, ಮಳೆ ಜೋರಾಗಿ ಪ್ರವಾಹದಂತೆ ಸುರಿದರೆ, ಅವುಗಳ ಆಶ್ರಯತಾಣ ಮುಳುಗಡೆ ಆದರೆ, ಹೊಸ ಸುರಕ್ಷಿತ ತಾಣಗಳನ್ನು ಹುಡುಕುವುದು ಸಹಜ. ಇರುವುದರಲ್ಲಿ ಸುರಕ್ಷಿತ ತಾಣ ಎಂದರೆ, ಮನೆಗಳೇ ಆಗಿರುತ್ತದೆ. ಹಾಗಾಗಿ, ಮಳೆಗಾಲದಲ್ಲಿ ನೆಲೆ ಕಳೆದುಕೊಂಡ ಪ್ರಾಣಿಗಳು ಮನೆ ಹೊಕ್ಕಲು ಪ್ರಯತ್ನಿಸಬಹುದು. ಇವುಗಳಲ್ಲಿ ವಿಷಜಂತುಗಳೂ ಇರುವುದರಿಂದ ನಾವು ವಿಶೇಷ ಕಾಳಜಿ ವಹಿಸಿ, ಸೂಕ್ತ ರಕ್ಷಣೆ ಪಡೆಯುವುದು ಅಗತ್ಯ. ಹಾವು, ಚೇಳು, ಕಪ್ಪೆ ಇತ್ಯಾದಿಗಳ ಜೊತೆ ಕಂಬಳಿ ಹುಳ, ಜರಿ- ಸಾವಿರ ಕಾಲು ಹುಳಗಳೂ ಮನೆ ಪ್ರವೇಶಿಸಲು ತೊಡಗಬಹುದು. ಕೆಲವೊಮ್ಮೆ ಮಾಮೂಲಿ ಸಣ್ಣ ಇರುವೆಗಳು ಕಂಡುಬಂದರೆ ಆತಂಕ ಪಡುವ ಅಗತ್ಯ ಇರದಿದ್ದರೂ, ದೊಡ್ಡ ಗೊದ್ದಗಳು, ಕಚ್ಚುವ ಕೆಂಪಿರುವೆಗಳು ಸಾಲು ಸಾಲು ಪ್ರವೇಶಿಸಿದರೆ, ಹುಷಾರಾಗಿ ಇರಬೇಕು, ಅದರಲ್ಲೂ ಸಣ್ಣ ಮಕ್ಕಳು, ಹಿರಿಯರು ಮನೆಯಲ್ಲಿ ಇದ್ದರೆ, ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆ ಇರುತ್ತದೆ.

ಕಾಂಪೌಂಡ್‌ ಹೊರಗೇ ತಡೆಯಿರಿ
ನಿಮ್ಮ ಮನೆಯ ಸುತ್ತ ಸಾಕಷ್ಟು ಎತ್ತರದ ಗೋಡೆ ಇದ್ದರೆ, ಈ ನಾಲ್ಕಾರು ಅಡಿ ಏರಿ ಹರಿದಾಡುವ ಪ್ರಾಣಿಗಳು ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ ಮನೆಯ ಮುಂದಿರುವ ಗೇಟಿನ ಮೂಲಕವೇ ಒಳಬರುವ ಸಾಧ್ಯತೆ ಇರುವುದರಿಂದ, ಇದನ್ನು ಒಮ್ಮೆ ಪರಿಶೀಲಿಸಿ, ಸಂದಿಗೊಂದಿಗಳಿದ್ದರೆ, ಅದನ್ನು ಕಲಾತ್ಮಕವಾಗಿ ಮುಚ್ಚುವ ಕೆಲಸ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಮನೆಯ ಮುಂದೆ ಮಳೆ ನೀರು ಹರಿದು ಹೋಗಲು ಮೋರಿಗಳಿದ್ದು, ಇವುಗಳ ಮೇಲೆ ಕಲ್ಲು ಚಪ್ಪಡಿಯನ್ನೋ ಇಲ್ಲ ಕಾಂಕ್ರಿಟ್‌ ಸ್ಲಾ$Âಬ್‌ ಅನ್ನೋ ಹಾಕಲಾಗುತ್ತದೆ. ಇವುಗಳ ಮೇಲೆ ಹಾವು- ಚೇಳು ಸರಾಗವಾಗಿ ಓಡಾಡಬಲ್ಲವು. ಆದುದರಿಂದ ನಿಮ್ಮ ಪ್ರದೇಶದಲ್ಲಿ ಇವುಗಳ ಹಾವಳಿ ಹೆಚ್ಚಿದ್ದರೆ, ಮೋರಿ ಮೇಲೆ ಅಡ್ಡಡ್ಡವಾಗಿ ಸೂಕ್ತ ಆಧಾರದೊಂದಿಗೆ ಕಬ್ಬಿಣದ ಕೊಳವೆಗಳನ್ನು ಹಾಕಿ. ನಮ್ಮ ಕಾಲು ಒಳಗಿಳಿಯದಂತೆ, ಸುಮಾರು ಎರಡರಿಂದ ಮೂರು ಇಂಚು ಅಂತರದಲ್ಲಿ ಪೈಪುಗಳನ್ನು ಅಳವಡಿಸಬಹುದು. ಕೊಳವೆಗಳ ಮೇಲೆ ನುಣುಪಾಗಿರುವ ಈ ಸ್ಥಳಗಳನ್ನು ಸರಿದಾಡುವ ಹಾವುಗಳು ಬಳಸಲು ಬರುವುದಿಲ್ಲ. ಹಾಗಾಗಿ, ಗೇಟಿನ ಮೂಲಕ ಒಳಬರುವ ಮೊದಲೇ ಮೋರಿ ಹತ್ತಿರವೇ ಅವುಗಳನ್ನು ತಡೆದಂತೆ ಆಗುತ್ತದೆ. ಇನ್ನು ಚೇಳುಗಳಿಗೂ ಗುಂಡಗೆ ಇರುವ ಈ ಪೈಪುಗಳನ್ನು ಒಂದೆರಡು ಸುತ್ತು ಮೇಲೂ ಕೆಳಗೂ ಸುತ್ತಿ, ಸುಸ್ತು ಹೊಡೆದು, ಇದೇಕೋ ಸರಿಬರುತ್ತಿಲ್ಲ ಎಂದು ಮುಂದುವರೆಯುವ ಸಾಧ್ಯತೆ ಇರುತ್ತದೆ.

ಕಂಬಳಿ ಹುಳದ ಹಾವಳಿ ಇದ್ದರೆ…
ಮನೆ ಕಟ್ಟುವ ಮೊದಲು ಅಕ್ಕ ಪಕ್ಕದವರನ್ನು ವಿಚಾರಿಸಿ, ಕ್ರಿಮಿಕೀಟಗಳ ತೊಂದರೆಯ ಬಗ್ಗೆಯೂ ಮಾಹಿತಿ ಪಡೆಯುವುದು ಅಗತ್ಯ. ಕೆಲ ಪ್ರದೇಶಗಳಲ್ಲಿ, ಅದರಲ್ಲೂ ಮಳೆಗಾಲದಲ್ಲಿ ನೂರಾರು ಕಂಬಳಿ ಹುಳಗಳು ಪ್ರತ್ಯಕ್ಷ ಆಗಿಬಿಡುತ್ತವೆ. ಇನ್ನು ಅವುಗಳ ಸಾವಿರಾರು ಕೂದಲುಗಳು ಸೋಂಕಿದರಂತೂ ದಿನಗಟ್ಟಲೆ ತುರಿಕೆ ತಪ್ಪುವುದಿಲ್ಲ. ಕಂಬಳಿ ಹುಳಗಳ ಮೂಲ ಚಿಟ್ಟೆಗಳ ಮೊಟ್ಟೆಗಳೇ ಆಗಿರುತ್ತದೆ, ಹಾಗಾಗಿ ಇವುಗಳಿಗೆ ಮೊಟ್ಟೆ ಇಡಲು ಸೂಕ್ತ ಸ್ಥಳಾವಕಾಶ ಇರದಂತೆ ಮಾಡಿದರೆ, ಮುಂದೆ ಕಂಬಳಿಹುಳಗಳ ಹಾವಳಿಯೂ ಇರುವುದಿಲ್ಲ! ತಮ್ಮ ಮೊಟ್ಟೆಗಳಿಗಾಗಿ ಹುಷಾರಾಗಿ ಸುರಕ್ಷಿತ ತಾಣಗಳನ್ನು ಹುಡುಕುವ ಈ ಕಿಲಾಡಿಗಳು, ಮಳೆ ಬಿಸಿಲು ಬೀಳದ ಸ್ಥಳಗಳನ್ನು, ಸಾಮಾನ್ಯವಾಗಿ ತರಿತರಿಯಾಗಿರುವ ಒಳಮೂಲೆಗಳನ್ನು ಹುಡುಕುತ್ತವೆ. ಆದುದರಿಂದ ಕಿಟಕಿಗಳಿಗೆ ಮಾಮೂಲಿ ಸಜ್ಜಾಗಳ ಬದಲು, ಗಟ್ಟಿಗೊಳಿಸಿದ ದಪ್ಪಗಾಜಿನ ಸಜ್ಜಾಗಳನ್ನು ಅಳವಡಿಸಿ. ಇದನ್ನು ನಾವು ಮನೆ ಕಟ್ಟುವಾಗ ಮಾಡುವುದು ಸುಲಭ, ಮನೆ ಕಟ್ಟಿದ ಮೇಲೆ ಕಾಂಕ್ರಿಟ್‌ ಸಜ್ಜಾಗಳ ಕೆಳಗೆ ಗಾಜನ್ನು ಅಳವಡಿಸುವುದು ಸ್ವಲ್ಪ ಕಷ್ಟವಾದರೂ, ನೀವು ನಾಲ್ಕಾರು ವಿಧಾನ ಅನುಸರಿಸಿಯೂ, ಕಂಬಳಿ ಹುಳದ ಹಾವಳಿ ಸಜ್ಜಾ ಕೆಳಗೆ ಇದ್ದರೆ, ಒಂದು ಪದರ ಗಾಜನ್ನು ಅಳವಡಿಸಿ ನೋಡಬಹುದು. ಗಾಜಿನ ಸಜ್ಜಾದ ಮತ್ತೂಂದು ಅನುಕೂಲ ಎಂದರೆ- ಕಿಟಕಿಯ ಮುಂದೆ ತೆರೆದ ಸ್ಥಳ ಕಡಿಮೆ ಇದ್ದರೂ, ಗಾಜು ಪಾರದರ್ಶಕ ಆಗಿರುವುದರಿಂದ, ಸಾಕಷ್ಟು ಬೆಳಕು ನಿರಾಯಾಸವಾಗಿ ಕಿಟಕಿಯನ್ನು ಪ್ರವೇಶಿಸುತ್ತದೆ. ಗಾಜು ನುಣುಪಾಗಿ ಇರುವುದರಿಂದ, ಅದರ ಕೆಳಗೆ ಕ್ರಿಮಿಕೀಟಗಳು ಗೂಡು ಕಟ್ಟುವ ಸಾಧ್ಯತೆ ಕಡಿಮೆ ಇರುತ್ತದೆ.

ಮನೆಯಲ್ಲಿ ಕಣಜ, ಜೇನು ಗೂಡು
ಜೋರು ಮಳೆ ಹೊಡೆತಕ್ಕೆ ಗೂಡುಗಳು ಹಾನಿಗೊಳಗಾಗಿದ್ದರೆ, ತಮ್ಮ ಅಮೂಲ್ಯ ಆಸ್ತಿಪಾಸ್ತಿಗಳಿಗೆ ಹೊಸ ಆಶ್ರಯ ಹುಡುಕುತ್ತ ಮನೆಯ ಸುತ್ತಮುತ್ತ ಈ ಕುಶಲ ಕರ್ಮಿಗಳು ಸುತ್ತುವುದು ಸಾಮಾನ್ಯ. ತರಿತರಿಯಾಗಿರುವ ಸಜ್ಜಾ ಅಥವಾ ಬ್ಯಾಲ್ಕನಿ ಹೊರಚಾಚುಗಳ ಕೆಳಗೆ ಇವುಗಳು ಗೂಡುಕಟ್ಟಲು ಶುರು ಮಾಡಬಹುದು. ಇವುಗಳ ಗೂಡುಗಳು ಸಾಮಾನ್ಯವಾಗಿ ಮೇಲಿನಿಂದ ನೇತುಹಾಕಿದಂತೆ ಇರುವುದರಿಂದ, ಸೂಕ್ತ ಆಧಾರ ಕಲ್ಪಿಸಲು ತರಿತರಿಯಾಗಿ ಇರುವ ಸ್ಥಳವೇ ಸೂಕ್ತ. ನುಣ್ಣಗೆ ಇದ್ದರೆ, ಈ ಕೀಟಗಳ ಅಂಟು ಅಷ್ಟಾಗಿ ಹಿಡಿಯದೆ ಗೂಡು ಬಿದ್ದು ಹೋಗುತ್ತದೆ. ಆದುದರಿಂದ ಸಜ್ಜಾ ಹಾಗೂ ಬಾಲ್ಕನಿ ಕೆಳಗೆ ನುಣ್ಣಗೆ ಪ್ಲಾಸ್ಟರ್‌ ಮಾಡಿಸಿ, ಪಟ್ಟಿ ನೋಡಿ, ಎನಾಮೆಲ್‌ ಪೆಂಟ್‌ ಬಳಿಯುವುದು ಸೂಕ್ತ. ಮನೆಯಲ್ಲಿ, ಅದರಲ್ಲೂ ಹೊರಮುಖದಲ್ಲಿ, ಅನಗತ್ಯವಾಗಿ “ಎಲಿವೇಷನ್‌’ಗೆಂದು ಸಂದುಗೊಂದುಗಳಿರುವ ವಿನ್ಯಾಸಗಳನ್ನು ಮಾಡಬಾರದು. ಮೂಲೆಗಳು, ಅದರಲ್ಲೂ ಒಳ ಮೂಲೆಗಳು ಇದ್ದರಂತೂ ಕ್ರಿಮಿಕೀಟಗಳ ಗೂಡುಗಳ ಹಾವಳಿ ಹೆಚ್ಚಿರುತ್ತದೆ.

Advertisement

ಇರುವೆ ಗೊದ್ದಗಳಿಗೇನು ಮಾಡುವುದು?
ಸುಣ್ಣದ ಗಾರೆ ಗೋಡೆಗಳಿದ್ದಾಗ ಸುಲಭದಲ್ಲಿ ಗೂಡು ಕೊರೆಯುತ್ತಿದ್ದ ಇರುವೆಗಳಿಗೆ ಸಿಮೆಂಟ್‌ ಗಾರೆಯ ಗೋಡೆಗಳಲ್ಲಿ ತೂತು ಮಾಡುವುದು ಅಷ್ಟೊಂದು ಸುಲಭ ಅಲ್ಲ. ಹಾಗಾಗಿ, ನಿಮ್ಮ ಮನೆಯಲ್ಲಿ ಇವುಗಳ ಹಾವಳಿ ಇದ್ದರೆ ಅದು ಸಣ್ಣ ಸಣ್ಣ ಸೆಟಲ್‌ಮೆಂಟ್‌ ಕ್ರಾಕ್ಸ್‌ – ಮನೆ ಹೊಸದಾಗಿ ಕಟ್ಟಿದಾಗ ಸಿಮೆಂಟ್‌ ಗಟ್ಟಿಗೊಳ್ಳುವುದರಿಂದಾಗಿ ಕುಗ್ಗಿದಾಗ ಆಗುವ ಬಿರುಕುಗಳ ಮೂಲಕ ಒಳನುಸುಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆ ಕಟ್ಟಿದ ಒಂದೆರಡು ವರ್ಷ ಆದರೂ ಬಿರುಕುಗಳು ಏನಾದರೂ ಬಂದಿವೆಯೇ? ಎಂದು ಪರಿಶೀಲಿಸಿ ಅವುಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಬೇಕಾಗುತ್ತದೆ.

ಕ್ರಿಮಿಕೀಟಗಳಿಂದ ರಕ್ಷಣೆ
ಮನೆಯಲ್ಲಿ ಒಂದೆರಡು ಸ್ಥಳಗಳು ಸಾಕಷ್ಟು ತೆರೆದಂತೆ ಇರುವುದು ಅನಿವಾರ್ಯ. ಇಲ್ಲಿಯೇ ಬಟ್ಟೆಗಳನ್ನು ಒಣಗಿಸುವುದು, ಪಾತ್ರೆ ತೊಳೆಯುವುದು. ಹಾಗಾಗಿ, ಈ ಜಾಗದಲ್ಲಿ ಗಾಳಿ ಆಡುವುದು ಅನಿವಾರ್ಯ. ಆದರೆ ಈ ಪ್ರದೇಶದಲ್ಲಿ ಕ್ರಿಮಿಕೀಟಗಳ ಬಾಧೆಯೂ ಹೆಚ್ಚಾಗದಂತೆ ತಡೆಯಬೇಕಾಗುತ್ತದೆ. ಕಂಬಳಿ ಹುಳಗಳ ಮೂಲವಾದ ಅವುಗಳ ಮೊಟ್ಟೆಗಳನ್ನು ಚಿಟ್ಟೆಗಳು ಒಳಹೊಕ್ಕು ನೂರಾರು ಮೊಟ್ಟೆಗಳನ್ನು ನಮಗೆ ಅರಿವಿಲ್ಲದಂತೆಯೇ ಇಟ್ಟು ಹೋಗಿರುತ್ತವೆ. ಅದರಲ್ಲೂ ಗಿಡಗಂಟಿಗಳು ಹತ್ತಿರ ಇದ್ದರೆ, ಇವುಗಳ ಹಾವಳಿ ಅಧಿಕ. ಹಾಗಾಗಿ ಯುಟಿಲಿಟಿ ರಕ್ಷಣೆಗೆ ಬಹುಕಾಲ ಬಾಳಿಕೆ ಬರುವ ಪ್ಲಾಸ್ಟಿಕ್‌ ಅಥವ ಉಕ್ಕಿನ ಮೆಶ್‌ ಅಳವಡಿಸುವುದು ಅನಿವಾರ್ಯ ಆಗಬಹುದು. ತೆಳ್ಳಗೆ, ಕಣ್ಣಿಗೆ ಕಂಡೂ ಕಾಣದಂತೆ ಇರುವ ಈ ಪದರ, ನಮಗೆ ನಾನಾ ಥರಹದ ಕ್ರಿಮಿಕೀಟಗಳಿಂದಲೂ ರಕ್ಷಣೆ ನೀಡಬಲ್ಲದು. ಈ ಒಂದು ತೆಳು ಪರದೆಯಿಂದ ಸೊಳ್ಳೆ, ನೊಣದ ಜೊತೆಗೆ ಹಾವು ಚೇಳುಗಳ ಪ್ರವೇಶವನ್ನೂ ನಿರ್ಬಂಧಿಸಿದಂತೆ ಆಗುತ್ತದೆ!

 - ಆರ್ಕಿಟೆಕ್ಟ್ ಕೆ. ಜಯರಾಮ್‌

ಹೆಚ್ಚಿನ ಮಾಹಿತಿಗೆ ಫೋನ್‌: 9844132826

Advertisement

Udayavani is now on Telegram. Click here to join our channel and stay updated with the latest news.

Next