ದುಬೈ: ನಿರುದ್ಯೋಗ ಮತ್ತು ಆರ್ಥಿಕ ಬೆಳವಣಿಗೆ ಕುಂಠಿತಗೊಂಡ ಪರಿಣಾಮ ಹಲವು ಅರಬ್ ದೇಶಗಳಲ್ಲಿ ಸಾಮಾಜಿಕ ಉದ್ವಿಗ್ನ ಪರಿಸ್ಥಿತಿ ಹಾಗೂ ಭಾರೀ ಪ್ರತಿಭಟನೆಗೆ ಕಾರಣವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೋಮವಾರ ತಿಳಿಸಿದೆ.
ಈ ಅಶಾಂತಿಯಿಂದ ಮಧ್ಯ ಪ್ರಾಚ್ಯ ಮತ್ತು ಉತ್ತರ ಆಫ್ರಿಕಾ(ಎಂಇಎನ್ ಎ) ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆಗೆ ಹೊಡೆತ ಬೀಳಲಿದ್ದು, ಇದರೊಂದಿಗೆ ಜಾಗತಿಕ ವ್ಯಾಪಾರ ಬಿಕ್ಕಟ್ಟು, ತೈಲ ಬೆಲೆ ಏರುಪೇರು, ಬ್ರೆಕ್ಸಿಟ್ ಪ್ರಕ್ರಿಯೆ ದೊಡ್ಡ ಪರಿಣಾಮ ಬೀರುತ್ತಿದೆ ಎಂದು ಐಎಂಎಫ್ ಬಿಡುಗಡೆ ಮಾಡಿರುವ ವರದಿಯಲ್ಲಿ ವಿವರಿಸಿದೆ.
ಬೃಹತ್ ಆರ್ಥಿಕ ಅಭಿವೃದ್ಧಿ ಹೊಂದಿದ್ದ ಸೌದಿ ಅರೇಬಿಯಾ, ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಭಾರೀ ಆರ್ಥಿಕ ಬೆಳವಣಿಗೆ ಕುಸಿತ ಕಾಣುತ್ತಿರುವುದಾಗಿ ಐಎಂಎಫ್ ತಿಳಿಸಿದೆ. ಜಾಗತಿಕ ಅವಲಂಬನೆಯ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ವರದಿ ಹೇಳಿದೆ. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಅಗತ್ಯವಿರುದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಈ ದೇಶಗಳ ಆರ್ಥಿಕ ಬೆಳವಣಿಗೆ ಕುಸಿತ ಕಂಡಿರುವುದಾಗಿ ವಿವರಿಸಿದೆ.
ಈ ದೇಶಗಳಲ್ಲಿನ ಯುವ ನಿರುದ್ಯೋಗ ಸಮಸ್ಯೆ ಶೇ.25ರಿಂದ ಶೇ.30ರಷ್ಟು ಕುಸಿತ ಕಂಡಿದೆ. ಈ ನಿರುದ್ಯೋಗ ಸಮಸ್ಯೆ ಸರಿದೂಗಿಸಲು ಆರ್ಥಿಕ ಬೆಳವಣಿಗೆ ಶೇ.1-2ರಷ್ಟು ಹೆಚ್ಚಾಗಬೇಕಾಗಿದೆ ಎಂದು ಐಎಂಎಫ್ ನ ಮಧ್ಯಪ್ರಾಚ್ಯ ಮತ್ತು ಮಧ್ಯಏಷ್ಯಾದ ನಿರ್ದೇಶಕ ಜಿಹಾಡ್ ಅಝೌರ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಅರಬ್ ದೇಶಗಳಲ್ಲಿನ ನಿರುದ್ಯೋಗ ಸಮಸ್ಯೆ ಹೆಚ್ಚಳದಿಂದಾಗಿ ತೀವ್ರ ಸಾಮಾಜಿಕ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ ಎಂದು ಐಎಂಎಫ್ ವರದಿ ಹೇಳಿದೆ. ಈ ದೇಶಗಳಲ್ಲಿನ ನಿರುದ್ಯೋಗ ಪ್ರಮಾಣ ಶೇ.11ರಷ್ಟಿದೆ. ಇದರಲ್ಲಿ ಮಹಿಳೆಯರು ಮತ್ತು ಯುವ ಪೀಳಿಕೆ ಕೆಲಸದಿಂದ ಹೊರಗೆ ಉಳಿದಿದ್ದಾರೆ. ಶೇ.18ರಷ್ಟು ಮಹಿಳೆಯರು ಉದ್ಯೋಗರಹಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.
2010ರಿಂದ ಅರಬ್ ದೇಶಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಆರಂಭಗೊಂಡಿವೆ. ಸಿರಿಯಾ, ಯೆಮೆನ್ ಮತ್ತು ಲಿಬಿಯಾ ದೇಶಗಳಲ್ಲಿ ಈ ಪ್ರತಿಭಟನೆ ರಕ್ತದೋಕುಳಿ ಹರಿಸಿದೆ ಎಂದು ಹೇಳಿದೆ. ಇನ್ನುಳಿದಂತೆ ಅಲ್ಜೀರಿಯಾ, ಸೂಡಾನ್, ಇರಾಕ್, ಲೆಬನಾನ್ ಗಳಲ್ಲಿ ಪ್ರತಿಭಟನೆಯ ಕಾವು ಹೊಸ ಅಲೆಯನ್ನ ಎಬ್ಬಿಸುತ್ತಿದ್ದು, ಆರ್ಥಿಕ ಸುಧಾರಣೆ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಒತ್ತಡ ಹೆಚ್ಚಾಗಿದೆ ಎಂದು ವರದಿ ವಿವರಿಸಿದೆ.
ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಬೆಳವಣಿಗೆ ತೀವ್ರ ಕುಸಿತ ಕಾಣುತ್ತಿದ್ದು, ರಾಜಕೀಯ ವ್ಯವಸ್ಥೆಯ ಬದಲಾವಣೆಗೆ ಆಗ್ರಹಿಸಿ ಲೆಬನಾನ್ ನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ ಎಂದು ಅಝೌರ್ ತಿಳಿಸಿದ್ದಾರೆ.
ಅರಬ್ ದೇಶಗಳಲ್ಲಿ ಜಿಡಿಪಿ(ಒಟ್ಟು ದೇಶಿಯ ಉತ್ಪಾದನೆ) ಶೇ.85ರಷ್ಟು ಕುಸಿತ ಕಂಡಿದೆ. ಅರಬ್ ದೇಶಗಳ ಸಾಲ ಹೊರೆಯು ಮಿತಿಮೀರಿದೆ ಎಂದು ಐಎಂಎಫ್ ವರದಿ ತಿಳಿಸಿದೆ.