ಕುಷ್ಟಗಿ: ಕಾಂಗ್ರೆಸ್ ಎನ್ನುವುದು ಗಾಂಪರ ಗುಂಪು, ಅವರಿಗೆ ಮಾಡಲು ಏನೇನು ಕೆಲಸ, ಬೊಗಸೆ ಏನೇನೂ ಇಲ್ಲ. ಹೀಗಾಗಿ ಸಚಿವ ಈಶ್ವರಪ್ಪ ಅವರನ್ನು ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದೆ ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಟೀಕಿಸಿದರು.
ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಯಾವುದೇ ತನಿಖೆ ಎದುರಿಸಲು ಸಿದ್ದರಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಕೆಲಸವಿಲ್ಲದ ಕಾಂಗ್ರೆಸ್ಸಿಗರು ಅವರು ಪ್ರತಿಭಟನೆ ಮಾಡಲೇ ಬೇಕು, ಅವರಿಗೆ ಕೆಲಸವಾದರೂ ಏನಿದೆ? ಎಂದು ಕಿಡಿಕಾರಿದರು.
ಅನಿವಾರ್ಯವಾಗಿ ಪ್ರತಿಭಟಿಸಬೇಕಿದೆ, ಸಾಬೀತಾಗಲಿ ಗಲ್ಲು ಶಿಕ್ಷೆ ಅನುಭವಿಸಲು ಸಿದ್ದರಿರುವುದಾಗಿ ಈಶ್ವರಪ್ಪ ಹೇಳಿದ್ದಾರೆ. ಆದರೂ ತನಿಖೆಯಾಗಲಿ ನಿಜಾಂಶ ಹೊರಬರಲಿ ಅದರ ಬದಲಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅಂತವರು ಬೀದಿಗೆ ಇಳಿದಿರುವುದು ಅವರ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಈ ಹಿಂದೆ ವಿಧಾನಸೌಧದಲ್ಲಿ ಹಗಲು ರಾತ್ರಿ ಮಲಗಿಕೊಂಡರು, ಅಧಿವೇಶನದ ಮುಂದೂಡುತ್ತಿದ್ದಂತೆ ಅಲ್ಲಿಂದ ಎದ್ದು ಬಂದು ಧರಣಿ ಮಾಡುವುದಾಗಿ ಹೇಳಿ ಒಂದು ದಿನ ಧರಣಿ ಮಾಡಿ ಸುಮ್ಮನಾಗಿ ಅವಮಾನಿತರಾಗಿದ್ದು, ಇದೀಗ ಈ ಪ್ರಕರಣ ಸಿಕ್ಕಿದೆ ಎಂದರು.
ಇದನ್ನೂ ಓದಿ:ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ 24 ತಾಸು ಅಹೋರಾತ್ರಿ ಧರಣಿ: ಡಿ.ಕೆ. ಶಿವಕುಮಾರ್
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭ್ರಷ್ಟಾಚಾರದ ಕೂಪ. ಕಾಂಗ್ರೆಸ್ ಕಚೇರಿಯಲ್ಲಿ ಉಗ್ರಪ್ಪ ಹಾಗೂ ಸಲೀಂ ಅಹ್ಮದ್ ಅವರು 12 ಪರ್ಸೆಂಟೇಜ್ ಬಗ್ಗೆ ಮಾತನಾಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮತನಾಡಲು, ಡಿಕೆಶಿ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.