Advertisement
ಹತ್ಯೆ ಪ್ರಕರಣದಲ್ಲಿ 9ನೇ ಆರೋಪಿಯಾಗಿರುವ ಭೂಗತ ಪಾತಕಿ ಉಡುಪಿ ಮೂಲದ ಬನ್ನಂಜೆ ರಾಜಾ, ಉತ್ತರ ಪ್ರದೇಶದ ಜಗದೀಶ್ ಪಟೇಲ್, ವಿಜಯಪುರದ ಅಂಬಾಜಿ ಬಂಡುಗೋರ, ಕಾರ್ಕಳದ ಮಂಜುನಾಥ ನಾರಾಯಣ ಭಟ್, ಕೇರಳದ ಕೆ.ಎಂ. ಇಸ್ಮಾಯಿಲ್, ಅಚ್ಚಂಗಿ ಮಹೇಶ, ಸುಳ್ಯ ಸಂತೋಷ, ಜಗದೀಶಚಂದ್ರರಾಜ್ ಅರಸ್, ಅಂಕಿತಕುಮಾರ ಕಶ್ಯಪ್ ದೋಷಿ ಎಂದು ಸಾಬೀತಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ಭಾಗಿಯಾದ ಈ ಎಲ್ಲ ಆರೋಪಿಗಳಿಗೆ ಶಿಕ್ಷೆ ಪ್ರಮಾಣವನ್ನು ನ್ಯಾಯಾಧೀಶರು ಏ.4ರಂದು ಪ್ರಕಟಿಸುವುದಾಗಿ ತಿಳಿಸಿದ್ದಾರೆ.
Related Articles
Advertisement
ಏನಿದು ಘಟನೆ? ಅಂಕೋಲಾದ ಉದ್ಯಮಿ ಆರ್.ಎನ್. ನಾಯ್ಕ ಅವರಿಗೆ 3 ಕೋಟಿ ರೂ. ಹಫ್ತಾ ನೀಡುವಂತೆ ಬನ್ನಂಜೆ ರಾಜಾ ಬೇಡಿಕೆ ಇಟ್ಟಿದ್ದ. 2012ರಲ್ಲಿ ವಿದೇಶದಿಂದಲೇ ಎರಡು ಸಲ ಇಂಟರ್‌ನೆಟ್ ಕರೆ ಮಾಡಿ ಬೆದರಿಕೆ ಹಾಕಿದ್ದ. ಹಣ ನೀಡಲು ನಿರಾಕರಿಸಿದ್ದಕ್ಕೆ ಉದ್ಯಮಿಯನ್ನು ಹತ್ಯೆಗೈಯಲು ಪ್ಲ್ರಾನ್ ಮಾಡಿದ್ದ. ಈ ಬಗ್ಗೆ ನಾಯ್ಕ ಅಂಕೋಲಾದಲ್ಲಿ ದೂರು ನೀಡಿ ಭದ್ರತೆಗೆ ಗನ್ ಮ್ಯಾನ್ ಇಟ್ಟುಕೊಂಡಿದ್ದರು. ಆರ್.ಎನ್. ನಾಯ್ಕ ಅವರು ಚೇರಮನ್ ಆಗಿದ್ದ ದ್ವಾರಕಾ ಕೋ ಆಪರೇಟಿವ್ ಸೊಸೈಟಿಯಿಂದ 2013, ಡಿ.21ರಂದು ಮಧ್ಯಾಹ್ನ 1:30ರ ಸುಮಾರಿಗೆ ಕಾರಿನಲ್ಲಿ ಮನೆಯತ್ತ ತೆರಳುತ್ತಿದ್ದರು. ಈ ವೇಳೆ ಕೆ.ಸಿ. ರಸ್ತೆಯಲ್ಲಿ ನಾಲ್ವರು ಬಂದೂಕುಧಾರಿಗಳು ಬಂದು ಕಾರು ಅಡ್ಡಗಟ್ಟಿ ಗುಂಡು ಹಾರಿಸಿದ್ದರು. ಉತ್ತರ ಪ್ರದೇಶದ ವಿವೇಕಕುಮಾರ ಉಪಾಧ್ಯ ಎಂಬಾತ ಶೂಟೌಟ್ ಮಾಡಿದಾಗ ನಾಯಕ ಅವರ ಬಲಭಾಗದ ಭುಜಕ್ಕೆ ತಾಗಿ ಅಸುನೀಗಿದ್ದರು. ಕಾರಿನಲ್ಲಿದ್ದ ಗನ್‌ಮ್ಯಾನ್ ರಮೇಶ ಎಂಬವರು ಆರೋಪಿಯ ಬೆನ್ನತ್ತಿ ಹಿಡಿಯಲು ಯತ್ನಿಸಿದ್ದರು. ಬಸ್ ನಿಲ್ದಾಣ ಬಳಿ ಗುಂಡಿನ ಚಕಮಕಿಯಲ್ಲಿ ರಮೇಶ ಹಾರಿಸಿದ ಗುಂಡಿಗೆ ಆರೋಪಿ ವಿವೇಕಕುಮಾರ ಹತನಾಗಿದ್ದ.
ಅಚ್ಚಂಗಿ ಮಹೇಶ, ಸುಳ್ಯ ಸಂತೋಷ ಜೈಲಲ್ಲಿದ್ದುಕೊಂಡೇ ಹತ್ಯೆಗೆ ಸಹಾಯ: ಪ್ರಕರಣದ 7ನೇ ಆರೋಪಿ ಅಚ್ಚಂಗಿ ಮಹೇಶ ಹಾಗೂ 8ನೇ ಆರೋಪಿ ಸುಳ್ಯ ಸಂತೋಷ ಕೊಲೆಗೆ ಸಹಕಾರ ನೀಡಿದ್ದಾರೆ. ಮೈಸೂರಿನ ಕಾರಾಗೃಹದಲ್ಲಿ ಇದ್ದರು. ಬನ್ನಂಜೆ ರಾಜಾನ ಭಾರತದಲ್ಲಿಯ ವ್ಯವಹಾರಗಳನ್ನು ನೋಡಿಕೊಳ್ಳುವ ಭಾರತದ ಪ್ರತಿನಿಧಿ ಅಚ್ಚಂಗಿ ಮಹೇಶ. ಜೈಲಿನಲ್ಲಿದ್ದುಕೊಂಡೇ ಇವರಿಬ್ಬರೂ ಸಂಚು ರೂಪಿಸಿದ್ದರು. ವಿವೇಕಕುಮಾರ ಮತ್ತು ಅಂಬಾಜಿಯನ್ನು ಜಾಮೀನಿನ ಮೇಲೆ ಹೊರಗೆ ತರಲು ಸಹಾಯ ಮಾಡಿಕೊಟ್ಟಿದ್ದರು ಎಂಬ ಆರೋಪ ಇವರ ಮೇಲಿದೆ.
7 ರಿವಾಲ್ವರ್ ಪೈಕಿ 4 ಕೊಲೆಗೆ ಬಳಕೆ: ಉದ್ಯಮಿ ಆರ್.ಎನ್. ನಾಯ್ಕ ಅವರನ್ನು ಕೊಲೆ ಮಾಡಲು ಕೆಲವು ತಿಂಗಳಿಂದ ಪ್ಲ್ರಾನ್ ಮಾಡಿಕೊಂಡಿದ್ದರು. ಪ್ರಕರಣದ 12ನೇ ಆರೋಪಿ ಅಂಕಿತಕುಮಾರ ಕಶ್ಯಪ ಎಂಬಾತ ಉತ್ತರ ಪ್ರದೇಶದಿಂದ 7 ರಿವಾಲ್ವರ್‌ಗಳನ್ನು ತಂದು ಕೊಟ್ಟಿದ್ದ. ಇದರಲ್ಲಿಯ ಮೂರು ಪಿಸ್ತೂಲು ಸರಿ ಇಲ್ಲ ಎಂಬ ಕಾರಣಕ್ಕೆ ನಾಲ್ಕನ್ನು ಕೊಲೆಗೆ ಬಳಸಿಕೊಳ್ಳಲಾಗಿತ್ತು. ಹಳೆಯ ಓಮ್ನಿ ಕಾರು 38 ಸಾವಿರ ರೂ.ಗೆ ಖರೀದಿಸಿ ಅಂಕೋಲಾಕ್ಕೆ ತಂದು ಕೊಲೆಗೆ ಬಳಸಿಕೊಂಡಿದ್ದರು
ನಾನೇ ಕೊಲೆಗೈದಿದ್ದಾಗಿ ಒಪ್ಪಿಕೊಂಡಿದ್ದ ಬನ್ನಂಜೆ: ಉದ್ಯಮಿ ಆರ್.ಎನ್. ನಾಯ್ಕ ಕೊಲೆಯಾದ ಮರುದಿನವೇ ಬನ್ನಂಜೆ ರಾಜಾ, ಕೊಲೆಗೈದಿದ್ದು ನಾನೇ. ಸರ್ಕಾರಕ್ಕೂ ತೆರಿಗೆ ಕಟ್ಟಿಲ್ಲ, ನನಗೂ ತೆರಿಗೆ ಕಟ್ಟಿಲ್ಲ. ಅದಕ್ಕೆ ಅವನನ್ನು ಹೊಡೆದಿರುವುದಾಗಿ ಟಿವಿ ಮಾಧ್ಯಮದವರೊಂದಿಗೆ ಕರೆ ಮಾಡಿದ್ದ. 2014ರಲ್ಲಿ ನಾಯ್ಕರ ಪುತ್ರ ಮಯೂರ ಹಾಗೂ ಸಹೋದರನಿಗೂ ಕರೆ ಮಾಡಿ ಬೆದರಿಕೆ ಹಾಕಿದ್ದ. ಈ ಮೊಬೈಲ್ ವಾಯ್ಸ್ ರೇಕಾರ್ಡ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ ಸರ್ಕಾರಿ ವಕೀಲರು, ಇದು ಬನ್ನಂಜೆ ರಾಜಾ ಧ್ವನಿ ಎಂದು ಸಾಬೀತುಪಡಿಸಿದರು.
ಕುತೂಹಲ ಮೂಡಿಸಿದ್ದ ತೀರ್ಪು: ಉದ್ಯಮಿ ಹತ್ಯೆ ಪ್ರಕರಣದ ಅಂತಿಮ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ತೀರ್ಪು ಕೇಳುವ ತವಕದಲ್ಲಿ ಇದ್ದರು. ಮಧ್ಯಾಹ್ನದಿಂದಲೇ ಕೋರ್ಟ್ ಕಲಾಪದಲ್ಲಿ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಆರೋಪಿಗಳ ಪರ ಹಾಗೂ ವಿರುದ್ಧ ವಕೀಲರು ಮಂಡಿಸುತ್ತಿದ್ದ ವಕಾಲತ್ತನ್ನು ಕುತೂಹಲದಿಂದ ಕೇಳುತ್ತಿದ್ದರು.
ಮೊರಕ್ಕೋದಲ್ಲಿ 2015ರಲ್ಲಿ ಬನ್ನಂಜೆ ರಾಜಾ ಅರೆಸ್ಟ್: ಕೊಲೆ, ಕೊಲೆ ಬೆದರಿಕೆ, ದಬ್ಟಾಳಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಭೂಗತ ಪಾತಕಿ ಬನ್ನಂಜೆ ರಾಜಾ ವಿದೇಶದಿಂದಲೇ ದಂಧೆ ನಡೆಸುತ್ತಿದ್ದ. ಪ್ರಕರಣದ 9ನೇ ಆರೋಪಿ ಆಗಿರುವಬನ್ನಂಜೆ ರಾಜಾನನ್ನು ಐಜಿಪಿ ಆಗಿದ್ದ ಪ್ರತಾಪರೆಡ್ಡಿ, ಉಡುಪಿ ಎಸ್‌ಪಿ ಆಗಿದ್ದ ಅಣ್ಣಾಮಲೈ 2015, ಆ.15ರಂದು ಮೊರಕ್ಕೋದಲ್ಲಿ ಬಂಧಿಸಿ ಭಾರತಕ್ಕೆ ಕರೆತಂದಿದ್ದರು. ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿದ್ದಾನೆ. ಕೆಲವು ವರ್ಷಗಳಿಂದ ಬನ್ನಂಜೆ ರಾಜಾ ಸೇರಿದಂತೆ ಎಲ್ಲ ಆರೋಪಿಗಳ ವಿಚಾರಣೆಯನ್ನು ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಮಾಡಲಾಗುತ್ತಿತ್ತು.
ಮರಣದಂಡನೆ ಶಿಕ್ಷೆ ವಿಧಿಸಲು ಮನವಿ: ಕೋಕಾ(ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನ್ಯಾಯಾಲಯ 2000ರಲ್ಲಿ ಸ್ಥಾಪಿತವಾಗಿದೆ. ಈ ನ್ಯಾಯಾಲಯದಲ್ಲಿ ಆರ್.ಎನ್. ನಾಯ್ಕ ಹತ್ಯೆ ಪ್ರಕರಣವೇ 2013ರಲ್ಲಿ ಮೊದಲ ಬಾರಿಗೆ ದಾಖಲಾಯಿತು. ಸಂಘಟಿತ ಅಪರಾಧ ನಿಯಂತ್ರಣಕ್ಕಾಗಿ ಈ ನ್ಯಾಯಾಲಯ ಮಹತ್ವ ಪಡೆದುಕೊಂಡಿದ್ದು, ಹೀಗಾಗಿ ಎಲ್ಲ ಆರೋಪಿಗಳಿಗೂ ಮರಣ ದಂಡನೆ ವಿಧಿಸಬೇಕು. ಜೈಲಿನಲ್ಲಿದ್ದುಕೊಂಡು ಆರೋಪಿಗಳು ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ. ಭೂಗತ ಲೋಕಕ್ಕೆ ಬಿಸಿ ಮುಟ್ಟಿಸಲು ಮರಣ ದಂಡನೆ ವಿಧಿ ಸಿದರೆ ಸಮಾಜಕ್ಕೆ ಉತ್ತಮ ಸಂದೇಶ ಹೋಗುತ್ತದೆ ಎಂದು ಸರ್ಕಾರಿ ವಿಶೇಷ ಅಭಿಯೋಜಕರಾದ ಕೆ.ಜಿ. ಪುರಾಣಿಕಮಠ ಹಾಗೂ ಶಿವಪ್ರಸಾದ ಆಳ್ವಾ ಮನವಿ ಮಾಡಿದರು.