ನವದೆಹಲಿ: ಮಂಡ್ಯದ ವಿಳಾಸ ನೀಡಿ ನಕಲಿ ಪಾಸ್‌ಪೋರ್ಟ್ ಪಡೆದಿದ್ದ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್(55) ಮತ್ತು ಬೆಂಗಳೂರಿನ ಮೂವರು ನಿವೃತ್ತ ಸರ್ಕಾರಿ ಅಧಿಕಾರಿಗಳು ದೋಷಿಗಳು ಎಂದು ನವದೆಹಲಿಯ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
ಮೌಲ್ಯಯುತವಾದ ಭದ್ರತೆ ಎನ್ನಲಾಗುವ ಪಾಸ್‌ಪೋರ್ಟ್ ಅನ್ನೇ ನಕಲಿ ಮಾಡಿರುವ ಅಪರಾಧಕ್ಕೆ ಜೀವಾವಧಿಯೇ ಗರಿಷ್ಠ ಶಿಕ್ಷೆ. ಮಂಗಳವಾರ ಇವರ ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದ ವಾದ-ಪ್ರತಿವಾದ ನಡೆಯಲಿದೆ. ಛೋಟಾ ರಾಜನ್ ಸದ್ಯ ತಿಹಾರ್ ಜೈಲಿನಲ್ಲಿದ್ದು, ಉಳಿದ ಆರೋಪಿಧಿಗಳಾದ ಜಯಶ್ರೀ ದತ್ತಾತ್ರೇಯ ರಾಹಟೆ, ದೀಪಕ್ ನಟವರ್‌ಲಾಲ್ ಶಾ ಮತ್ತು ಲಲಿತಾ ಲಕ್ಷ್ಮಣನ್ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ. ಸೋಮವಾರ ತೀರ್ಪು ಪ್ರಕಟವಾಗುಧಿತ್ತಿದ್ದಂತೆ, ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಡ್ಯದ ವಿಳಾಸ ನೀಡಿದ್ದ: ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಮೂವರು ಅಧಿಕಾರಿಗಳ ನೆರವು ಪಡೆದು, ಪಾತಕಿ ರಾಜನ್ 1998-99ರಲ್ಲಿ ನಕಲಿ ಪಾಸ್‌ಪೋರ್ಟ್ ಪಡೆದುಕೊಂಡಿದ್ದ. “107/ಬಿ, ಹಳೇ ಎಂ.ಸಿ.ರಸ್ತೆ, ಆಜಾದ್ ನಗರ, ಮಂಡ್ಯ, ಕರ್ನಾಟಕ’ ಎಂಬ ವಿಳಾಸವನ್ನು ನೀಡಿ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ಪಾಸ್‌ಪೋರ್ಟ್ ಮಾಡಿಕೊಂಡಿದ್ದ. ಆದರೆ, ಈ ಕುರಿತು ನಂತರ ಸಿಬಿಐ ತನಿಖೆ ನಡೆಸಿದಾಗ, ಆ ವಿಳಾಸದಲ್ಲಿ ಮೋಹನ್ ಕುಮಾರ್ ಎಂಬ ವ್ಯಕ್ತಿಯಾಗಲೀ, ಆ ವಿಳಾಸವಾಗಲೀ ಇಲ್ಲ ಎಂಬುದು ದೃಢವಾಗಿತ್ತು. ಜತೆಗೆ, ಅಂಚೆ ನೌಕರರೂ ಎಂಸಿ ರೋಡ್ ಮತ್ತು ಆಜಾದ್ ನಗರದಲ್ಲಿ 107/ಬಿ ಸಂಖ್ಯೆಯ ಮನೆ ಅಸ್ತಿತ್ವದಲ್ಲೇ ಇಲ್ಲ ಎಂದಿದ್ದರು. ಇದಲ್ಲದೆ, ಪ್ರಯಾಣ ದಾಖಲೆ ಪಡೆಯಲು ರಾಜನ್ ನಕಲಿ ಮತದಾರರ ಗುರುತಿನ ಚೀಟಿ ಮತ್ತು ನಕಲಿ ಪಡಿತರ ಕಾರ್ಡ್ ಅನ್ನೂ ಮಾಡಿಸಿಕೊಂಡಿದ್ದ.
ಸತ್ಯ ಮುಚ್ಚಿಟ್ಟ ಅಧಿಕಾರಿಗಳು: ರಾಜನ್ ಕೊಟ್ಟಿರುವ ದಾಖಲೆಗಳು ನಕಲಿ ಎಂದು ಗೊತ್ತಿದ್ದರೂ ಸತ್ಯ ಮುಚ್ಚಿಟ್ಟ ಆರೋಪವನ್ನು ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿ ಅಧಿಕಾರಿಗಳ ಮೇಲೆ ಹೊರಿಸಲಾಗಿದೆ. ಎಫ್004555 ಸಂಖ್ಯೆಯ ಪಾಸ್‌ಪೋರ್ಟ್‌ನಲ್ಲಿರುವ ಫೋಟೋ ಮತ್ತು ನವೀಕರಣಕ್ಕೆ ಸಲ್ಲಿಸಿದ್ದ ಹೊಸ ಅರ್ಜಿಯಲ್ಲಿದ್ದ ಫೋಟೋ ಮತ್ತು ಜನನ ದಿನಾಂಕ ಭಿನ್ನವಾಗಿದೆ ಎಂಬುದು ಗೊತ್ತಿದ್ದರೂ, ಅದನ್ನು ಲಲಿತಾ ಅವರು ಮುಚ್ಚಿಟ್ಟಿದ್ದರು ಎಂದು ಸಿಬಿಐ ಆರೋಪಪಟ್ಟಿಯಲ್ಲಿ ತಿಳಿಸಿತ್ತು.
ಇನ್ನು ಸೂಪರಿಂಟೆಂಡೆಂಟ್ ಆಗಿದ್ದ ಜಯಶ್ರೀ ಹಳೇ ಪಾನ್ಪೋರ್ಟ್ ನೋಡಿ, ಅದರಂತೆ ಜನನ ದಿನಾಂಕ ಬದಲಿಸಿದ್ದರು ಹಾಗೂ ಹೊಸ ಪಾಸ್‌ಪೋರ್ಟ್ ವಿತರಿಸಲು ಅನುಮತಿ ನೀಡಿದ್ದರು. ಪಾಸ್‌ಪೋರ್ಟ್ ಅಧಿಕಾರಿ ಷಾ ಅವರು, ಮೋಹನ್ ಕುಮಾರ್ ಹೆಸರಿನಲ್ಲಿ ಎ6705840 ಸಂಖ್ಯೆಯ ಪಾಸ್‌ಪೋರ್ಟ್ ಅನ್ನು ರಾಜನ್‌ಗೆ ನೀಡಿದ್ದರು. ಅಧಿಕಾರಿಗಳು ಮಂಡ್ಯ ಜಿಲ್ಲಾ ಪೊಲೀಸರಿಂದ ದೃಢೀಕರಣ ಪತ್ರಕ್ಕೆ ಕಾಯದೇ, ಪಾಸ್‌ಪೋರ್ಟ್ ನೀಡಿದ್ದರು ಎಂದು ಸಿಬಿಐ ಆರೋಪಿಸಿತ್ತು. ಹೀಗಾಗಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಸಂಚು, ವಂಚನೆ, ನಕಲು ಮಾಡಿ ವಂಚಿಸಿದ ಆರೋಪ ಹೊರಿಸಲಾಗಿತ್ತು.
85 ಕೇಸುಗಳು
ಒಂದು ಕಾಲದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರನಾಗಿದ್ದ ರಾಜನ್ 27 ವರ್ಷಗಳ ಕಾಲ ತಲೆಮರೆಸಿ ಕೊಂಡಿದ್ದ. 2015ರ ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ರಾಜನ್‌ನನ್ನು ಬಂಧಿಸಿದ್ದ ಪೊಲೀಸರು ಅಲ್ಲಿಂದ ಭಾರತಕ್ಕೆ ಗಡಿಪಾರು ಮಾಡಿದ್ದರು. ಈತನ ವಿರುದ್ಧ ಕೊಲೆ, ಡ್ರಗ್ ಕಳ್ಳಸಾಗಣೆ, ವಸೂಲಿ ದಂಧೆ ಸೇರಿದಂತೆ 85 ಕೇಸುಗಳಿವೆ.